Miracle in Kuala lumpur Hotel- ಅನಿರೀಕ್ಷಿತ



Miracle in Kuala lumpur Hotel- ಅನಿರೀಕ್ಷಿತ-ಇತ್ತೀಚಿಗೆ ಕೌಲ ಲಂಪುರಿಗೆ ಕೆಲಸದ ನಿಮಿತ್ತ ಹೋಗಿದ್ದೆ. ಅದು ಸುಂದರವಾದ ನಗರಿ. ಇಲ್ಲಿ ಇನ್ನೂ ಹಸಿರು ಬಾಕಿ ಉಳಿದಿದೆ. ಕೆಲಸ ಮುಗಿಯುವಾಗ ಮಧ್ಯಾನ್ಹದ ಹೊತ್ತಾಗಿತ್ತು. ಸೂರ್ಯ ನೆತ್ತಿ ಮೇಲೆ ಏರಿದ್ದ. ಹೊಟ್ಟೆ ಚುರುಗುಡುತ್ತಿತ್ತುಇಲ್ಲಿ ಹೊಸಬರಾಗಿದ್ದರೆ, ನೀವು ಗ್ರ್ಯಾಬ್, ಉಬರ್ ನಂತಹ app ಬೇಸ್ಡ್ ಟ್ಯಾಕ್ಸಿಯಲ್ಲಿ ಪಯಣಿಸ ಬಹುದು, ಉಳಿದ ಟ್ಯಾಕ್ಸಿಗಳು ಇವೆ ಆದರೆ ನಿಮ್ಮ ಸುರಕ್ಷತೆ ಬಗ್ಗೆ ಯಾವುದೇ ಮಹಾನಗರಗಳಂತೆ ಗಮನವಿರಲಿ. ಎಲ್ಲಾ ರೀತಿಯ ಜನರಿರುತ್ತಾರೆ.
ಆದರೆ ನೀವು ಕಾರನ್ನು ರೆಂಟ್ ಪಡೆದು ಚಲಾಯಿಸುವುದಾದರೆ ಕೆಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ನಮ್ಮ ದೇಶದಲ್ಲಿರುವಂತೆ ಜನರನ್ನು ಕೇಳಿಕೊಂಡು ದಾರಿ ಹುಡುಕಿ ಕೊಂಡುಹೋಗುವ ಪದ್ಧತಿ ಇಲ್ಲಿ ಇಲ್ಲ. ಅದು ಸಾಧ್ಯವೂ ಇಲ್ಲ. ನೀವು ಜಿಪಿಎಸ್, ಗೂಗಲ್ ಮ್ಯಾಪ್ಸ ಅಥವಾ ವೇಜ್ ಬಳಸಲು ಕಲಿಯಬೇಕು. ಇವು ನಿಮ್ಮ ಗೈಡ್ಗಳಾಗಿ ಸಹಾಯ ಮಾಡುತ್ತವೆ. ಅಲ್ಲಲ್ಲಿ ಸ್ಪೀಡ್ ಟ್ರ್ಯಾಕಿಂಗ್ ಕ್ಯಾಮೆರಾಗಳು  ಇರುತ್ತವೆ. ಹಾಗೆ ಪಾರ್ಕ್ ಮಾಡಬೇಕಾದರೆ ಪಾರ್ಕಿಂಗ್ ಕೂಪನ್ ಉಪಯೋಗಿಸಬೇಕು. ಅದು ಹೆಚ್ಚಿನ ಅಂಗಡಿಗಳಲ್ಲಿ ದೊರಕುತ್ತವೆ.
ನಿಮ್ಮ ಫೋನ್ ಸರ್ವಿಸ್ ಮತ್ತುನೆಟ್ವರ್ಕ್ ಸದಾ ಕಾಲ ಆನ್ ಆಗಿರಬೇಕು. . ಇಲ್ಲದಿದ್ದರೆ ಕೆಲವು ಪ್ರೈವೇಟ್ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ . ಆದರೆ ಇಲ್ಲಿ ಎಲ್ಲದಕ್ಕೂ ದುಡ್ಡು ಕಟ್ಟಬೇಕು. ನೀವು ದೊಡ್ಡ ಮಾಲ್ ಗಳಲ್ಲಿ ಕೂಡ ಪಾರ್ಕ್ ಮಾಡಬಹುದು. ನೀವು ‘ಟಚ್ ನ್ ಗೋ’  ಕಾರ್ಡ್ ಪಡೆದುಕೊಂಡು, ಅದನ್ನು ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಅದರಲ್ಲಿ ದುಡ್ಡನ್ನು ಹಾಕಿದರೆ ನಿಮಗೆ ತುಂಬಾ ಸಹಕಾರಿ ಆಗುತ್ತದೆ. ಮೆಟ್ರೋ ಟ್ರೈನ್ನಲ್ಲಿ ಕೂಡ ಪಯಣಿಸಬಹುದು. ಆದರೆ ಇಲ್ಲಿ ಹೆಚ್ಚಿನದು ಮನುಷ್ಯರ ಸಂಪರ್ಕವಿಲ್ಲದೆ, ಆಟೋಮೇಟೆಡ್ ಸಿಸ್ಟಮ್ಗಳ ಉಪಯೋಗ ಜಾಸ್ತಿ. ಹೀಗಾಗಿ ನೀವು ನಿಮ್ಮ ಹೋಂ ವರ್ಕನ್ನು ಸರಿಯಾಗಿ ಪಯಣಿಸುವ ಮುನ್ನ ಮಾಡಬೇಕು. ನೀವು ತಂಗಿರುವ ಹೋಟೆಲ್ನವರು ಕೂಡ ನಿಮಗೆ ನಗರವನ್ನು ನೋಡುವ ವ್ಯವಸ್ಥೆ ಮಾಡಿಸಿ ಕೊಡುತ್ತಾರೆ. ಇದು ದುಬಾರಿಯಾದರೂ ಸುರಕ್ಷಿತವಾಗಿರುತ್ತದೆ. ಬೆಂಗಳೂರಿನಂತೆ ಇಲ್ಲಿ ಕೂಡ ಸೈಟ್ ಸೀಯಿಂಗ್ ಬಸ್ಸಿನ ವ್ಯವಸ್ತೆ ಇದೆ.
ಇಲ್ಲಿನ ರಸ್ತೆಗಳು ಅಗಲವಾಗಿರುತ್ತವೆ. ಟ್ರಾಫಿಕ್ ಸೈನ್ ಬೋರ್ಡ್ಗಳು ನೆಲದ ಮೇಲೆ ಇರುತ್ತದೆ. ಕಾರು ಚಾಲನೆ ಬಲ ಭಾಗದಿಂದವಾದರೂ ಇಲ್ಲಿ ಅಂತರಾಷ್ಟ್ರೀಯ ನಿಯಮಗಳನ್ನು ಪಾಲಿಸುತ್ತಾರೆ. ನೀವು ಗಾಡಿ ಚಲಾಯಿಸುವ ಮುನ್ನ ಇದನ್ನು ಚೆನ್ನಾಗಿ ಅರಿತಿರಬೇಕು. ಇಲ್ಲಿ ಚಲನೆಯ ವೇಗದ ಮಿತಿ ಕೂಡ ಹೆಚ್ಚು. ಲೇನ್ ಟ್ರಾಫಿಕನ್ನು ಬಹುತೇಕ ವಾಹನ ಚಾಲಕರು ಪಾಲಿಸುತ್ತಾರೆ. ಇಲ್ಲಿ ಸುಮ್ಮನೆ ಹಾರ್ನ್ ಹಾಕುವಂತೆ ಇಲ್ಲ. ಯಾರಾದರೂ ಹಾರ್ನ್ ಹಾಕಿದರೆ ನೀವು ಏನೋ ತಪ್ಪು ಮಾಡಿದಿರಿ ಎಂದು ಅರ್ಥ. ಇನ್ನು ಭಾರತದ ಡ್ರೈವಿಂಗ್ ಲೈಸನ್ಸ್ ಇಲ್ಲಿ ಒಪ್ಪಿಕೊಂಡರೂ ನೀವು ಇಂಟರ್ನ್ಯಾಷನಲ್ ಲೈಸನ್ಸ್ ಮಾಡಿಸುವುದು ಒಳ್ಳೆಯದು. ಇಲ್ಲಿ ನಡೆದು ಕೊಂಡು ಹೋಗುವವರು ಸಾಮಾನ್ಯವಾಗಿ ಹೊರಗಿನಿಂದ ಬಂದವರೆ ಆಗಿರುತ್ತಾರೆ. ನಿಮಗೆ ವಿಧ ವಿಧ ಖಾದ್ಯ ತಿನ್ನಲು ಆಸೆ ಇದ್ದರೆ ಅದಕ್ಕೆ ಬೇರೆ ಬೇರೆ ಜಾಗಗಳು ಇವೆ. ನೀವು ಶುದ್ದ ಸಸ್ಯಾಹಾರಿ ಹಾಗು ಭಾರತೀಯ ಆಹಾರ ಪ್ರಿಯರಾಗಿದ್ದಾರೆ ಇಂಡಿಯನ್ ಸ್ಟ್ರೀಟ್ ಅಥವಾ ಮಸ್ಜಿದ್ ಇಂಡಿಯಾಗೆ ಬಂದರೆ ಸುಲಭವಾಗುತ್ತದೆ.
ಇಂದು ಶುದ್ಧ ಸಸ್ಯಾಹಾರ ಮಾಡಬೇಕೆಂದು ಮನಸ್ಸಾಗಿತ್ತು. ತುಂಬಾನೇ ಭಾರತೀಯ  ಸಸ್ಯಾಹಾರಿ ಹೋಟೆಲ್ಗಳಿವೆ- ಸಂಗೀತ ರೆಸ್ಟೋರೆಂಟ್, ಸರವಣ್ಣ ರೆಸ್ಟೋರೆಂಟ್, ಸರವಣ ಭವನ ಹಾಗೂ ಹೊಸದಾಗಿ ತೆರೆದ MTR ರೆಸ್ಟೋರಂಟ್ ಇವು ನಾವು ಸಾಧಾರಣವಾಗಿ ಹೋಗುವ ಸಸ್ಯಾಹಾರಿ ಹೋಟೆಲ್ಗಳು. ನೀವು ಚೀನಿ ಆಹಾರ ಪ್ರಿಯರಾದರೆ ಅನೇಕ ವಿಧವಾದ ಹೋಟೆಲ್ಗಳಿವೆ. ಇವು ನಾವು ಭಾರತೀಯ ಹೋಟೆಲ್ನಲ್ಲಿ ತಿನ್ನುವ ಆಹಾರಗಳಿಗಿಂತ ತೀರ ಭಿನ್ನವಾಗಿರುತ್ತವೆ. ನಾವು ಇಂಡಿಯನ್ ಸ್ಟ್ರೀಟ್ನಲ್ಲಿ ಇರುವ ಬ್ರಿಕ್ ಫೀಲ್ಡ್ಸ್ ನ ಬಳಿಯಲ್ಲಿ ಇದ್ದುದ್ದರಿಂದ “ ಅನ್ನಲಕ್ಷ್ಮಿ “ ಹೋಟೆಲನ್ನು ಹುಡುಕಿಕೊಂಡು ಹೊರಟೆವು. ಇಲ್ಲಿ ಮೂವತ್ತು ರಿಂಗಿಟ್ಟು ಕೊಟ್ಟರೆ ಉತ್ತಮ ಗುಣಮಟ್ಟದ ಅನ್ಲಿಮಿಟೆಡ್ ಊಟ ದೊರೆಯುತ್ತದೆ ಎಂದು ಗೆಳೆಯರೊಬ್ಬರು ಹೇಳಿದ್ದರು. ಇದು ಇಲ್ಲಿ ತುಂಬಾನೇ ಕಮ್ಮಿ. ದಾರಿ ಗೊತ್ತಿರಲಿಲ್ಲ. ಹಾಗೋ ಹೀಗೋ ಪಾರ್ಕಿಂಗ್ ಜಾಗವನ್ನು ಹುಡುಕಿಕೊಂಡು ಹೋಗಿ, ಅಲ್ಲಿಂದ ನಡೆದು ಕೊಂಡು  “ ಅನ್ನಲಕ್ಷ್ಮಿ “ ಹೋಟೆಲನ್ನು ತಲುಪಿದೆವು. ಅಲ್ಲಿ ಮೂರು ಭಾಗಗಳಿವೆ. ಒಂದು ಹೋಟೆಲ್ ಗ್ರೌಂಡ್ ಫ್ಲೂರ್ನಲ್ಲಿ ಇದೆ, ಇನ್ನೊಂದು “ ಅನ್ನಲಕ್ಷ್ಮಿ ಕ್ಯಾಂಟೀನ್ “ ಬೇಸ್ಮೆಂಟ್ನಲ್ಲಿ ಇದೆ. ನಾವು ತಪ್ಪಿ  ಅನ್ನಲಕ್ಷ್ಮಿ ಕ್ಯಾಂಟೀನ್ಗೆ ಹೋಗಿ ತಲುಪಿದೆವು. ಇದು ಚಿಕ್ಕದಾದರೂ ಚೊಕ್ಕವಾಗಿದೆ. ಹೆಚ್ಚಿನವರು ಭಾರತೀಯರೇ ಆಗಿದ್ದರು. ಇಲ್ಲಿ ಸ್ವಯಂ ಸೇವೆ ಮಾಡಬೇಕು. ನಾವು ಸರತಿಯಲ್ಲಿ ಉಳಿದವರಂತೆ ತಾಳ್ಮೆಇಂದ ನಿಂತು, ಆಹಾರ ಬಡಿಸ್ಕೊಂಡು ಮುಂದೆ ಸಾಗಿದೆವು. ಅನ್ನ, ಸಾಂಬಾರ್, ಸೊಪ್ಪಿನ ಪಲ್ಯ, ಕಡಲೆ ಬೇಳೆ ಪಾಯಸ, ಮೊಸರು, ಹಪ್ಪಳ ಹಾಗು ಉಪ್ಪಿನಕಾಯಿ ಇತ್ತು. ಇಬ್ಬರು ವೃದ್ದ ದಂಪತಿಗಳು ಇದನ್ನು ನಡೆಸುತ್ತಿದ್ದರು. ಕ್ಯಾಶ್ ಕೌಂಟರ್ನಲ್ಲಿ ಒಬ್ಬರು ಅಜ್ಜಿ ಇದ್ದರು. ನಾನು ಎಷ್ಟು ದುಡ್ಡು ಕೊಡಬೇಕೆಂದು ಅವರಲ್ಲಿ ಕೇಳಿದಾಗ “ನಿಮ್ಮಿಷ್ಟ” ಎಂದಾಗ ನಾನು ಸಂಪೂರ್ಣವಾಗಿ ತಬ್ಬಿಬ್ಬಾದೆ. ಇಂತ ಉತ್ತರದ ನಿರೀಕ್ಷೆ ಇರಲಿಲ್ಲ.
ಆಗ ಅವರು ಇಂಗ್ಲಿಷ್ನಲ್ಲಿ ಕೇಳಿದರು, “ನೀವಿಲ್ಲಿ ಹೊಸಬರಾ? ನಿಮ್ಮಿಷ್ಟ ಬಂದಷ್ಟು ಕೊಡಿ. ಇದನ್ನು ನಾವು ದಿನಾ ಊಟ ಹಾಕುವವರಿಗೆ ದೇಣಿಗೆ ಅಂದು ಕೊಂಡು ಕೊಡಿ.” ನಾನು ಮೂವತ್ತು  ರಿಂಗಿಟ್ಟು ಕೈಗಿತ್ತೆ. ಕಮ್ಮಿ ಆಯಿತೋ ಏನೋ ಎಂದು ಅಂಜಿಕೆ ಆಯಿತು. ಆದರೆ ಆ ಮಹಾತಾಯಿ ಕೂಡಲೇ ಎರಡು ಲಸ್ಸಿ ಹಾಗೂ ಮಕ್ಕಳಿಗೆ ಕುಡಿಯಲು ಚಾಕಲೇಟ್ ಡ್ರಿಂಕನ್ನು ನೀಡಿ ದೊಡ್ಡ ಮಂದಹಾಸವನ್ನು ಬೀರುತ್ತ, ಚೆನ್ನಾಗಿ ಊಟ ಮಾಡಿ, ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹರಸಿ ಕಳುಹಿಸಿದಳು. ಮಹಾನಗರಿಗಳಲ್ಲಿ ಇಂಥಃ ಘಟನೆಗಳು ನಡೆಯುವುದು ತುಂಬಾನೇ ಅಪರೂಪ. ಆ ವೃದ್ದ ದಂಪತಿಗಳು ಸಲ್ಲಿಸುತ್ತಿರುವ ಅಣ್ಣ ಸೇವೆಗೆ ಸಹಸ್ರ ನಮಸ್ಕಾರಗಳು. 


Comments

Popular posts from this blog

ಮದುವೆಯಾಗಲಿ ಸರಿ ಹೋಗ್ತಾನೆ ಅಂತಾರಲ್ಲ ಯಾಕೆ?

ನಿಮಗೇನಾದರೂ ಅರ್ಥವಾಯಿತೇ???

ಸಾವಿನರಮನೆಯಲ್ಲಿ