ಸಾವು ಗುರುವಾದಾಗ........

: ಗುರು, ಶಿಷ್ಯ, ಉಪನಿಷತ್ತು, ವೇದ, ಶಿಕ್ಷಕ, ನಚಿಕೇತ, Teacher, Vedas, Death


ಗುರು ನಮ್ಮ ಜೀವನದ ಒಂದು ಪ್ರಮುಖ ಅಂಗ. ಗುರುವಿನ ಅಗತ್ಯಗಳ ಬಗ್ಗೆ ವರ್ಣಿಸುವುದು ಅಸಾಧ್ಯ ಕಾರ್ಯ. ತಾಯಿ- ತಂದೆಯರೇ ಮಗುವಿನ ಪ್ರಥಮ ಗುರು. ಅವರು ನಮ್ಮ ಜಗತ್ತು, ಸಮಾಜದಲ್ಲಿ ಬದುಕಲು ಪಾಲಿಸಬೇಕಾದ ನಿಯಮ, ಶಿಷ್ಟಾಚಾರ ಹೀಗೆ ಅನೇಕ ವಿಷಯಗಳ ಬಗ್ಗೆ ಜೀವನದಾದ್ಯಂತ ಶಿಕ್ಷಣ ಕೊಡುತ್ತ ನಮ್ಮ ಜೀವನಕ್ಕೆ ಸಾರ್ಥಕ್ಯವನ್ನು ಕೊಡುತ್ತಾರೆ. ನಂತರದ ಸ್ಥಾನ ನಮಗೆ ಸಿಗುವ ಗುರುವಿಗೆ. ಸದ್ಗುರು ಪಡೆಯಲು ನಾವು ಹಿಂದಿನ ಜನ್ಮದ ಪುಣ್ಯವೇ ಕಾರಣವಾಗುತ್ತದೆ. ಸದ್ಗುರುಗಳು ನಮ್ಮನ್ನು ಕೇವಲ ಪಾಠಮಾಡಿ, ಶಿಕ್ಷೆಯನ್ನು ನೀಡಿ, ಪರೀಕ್ಷೆಯನ್ನು ನೀಡಿ, ಪಾಸೋ ನಪಾಸೋ ಎಂದು ಯೋಗ್ಯತೆಯನ್ನು ಅಳಿದು, ಒಳ್ಳೆ ಹಾಗು ಕೆಟ್ಟ ವಿಧ್ಯರ್ಥಿಗಳೆಂದು ಪಟ್ಟ ಕಟ್ಟಿ, ತಮ್ಮ ಕೆಲಸ ಮುಗಿಸಿ ಜಾಗ ಖಾಲಿ ಮಾಡುವವರಲ್ಲ.

ಸದ್ಗುರುಗಳು ಶಿಷ್ಯನಲ್ಲಿರುವ ಒಳ್ಳೆ ಹಾಗು ಕೆಟ್ಟ ಗುಣಗಳನ್ನು ಅಳೆದು, ಅವನನ್ನು ಪ್ರೋತ್ಸಾಹಿಸಿ, ಕತ್ತಲೆಯಿಂದ ಬೆಳಕಿನೆಡೆಗೆ, ಕೆಟ್ಟ ಗುಣಗಳಿಂದ ಸದ್ಗುಣಗಳೆಡೆಗೆ, ಹಾಗೂ ಇನ್ನೂ ಕೆಲವರು ಸಾವಿನಿಂದ ಅಮರತ್ವದೆಡೆಗೆ ಸಾಗಿಸುತ್ತಾರೆ. ಹಾಗಾಗಿ ನೂರಾರು ವರುಷಗಳ ಹಿಂದೆ ಗುರುಕುಲ ಪದ್ದತಿಯಲ್ಲಿ ಶಿಷ್ಯನನ್ನು ಗುರುವಿನೊಂದಿಗೆ, ಅವರ ಕುಟೀರದಲ್ಲಿ ವಾಸಮಾಡಿ ಜ್ಞಾನಾರ್ಜನೆ ಮಾಡಲು ಕಳುಹಿಸಿಕೊಡುತ್ತಿದ್ದರು. ಅವನು ರಾಜಕುಮಾರನೇ ಇರಲಿ ಇಲ್ಲ, ಬಡ ಭಿಕ್ಷುಕನೆ ಇರಲಿ, ಗುರುಗಳು ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡಿ, ವಿಧ್ಯಾರ್ಥಿಗೆ ಜ್ಞಾನದ ಹಸಿವು ಎಷ್ಟಿದೆ ಎಂಬುದನ್ನು ಒಂದೇ ಮಾನದಂಡವಾಗಿಟ್ಟು ಶಿಷ್ಯನಿಗೆ ಜ್ಞಾನವನ್ನು ಧಾರೆಯೆರೆಯಬೇಕಾಗಿತ್ತು .

ಆದರೆ ಇದಕ್ಕೆ ಅಪವಾದವೆನ್ನುವಂತೆ ಕೆಲವು ಪ್ರಸಿದ್ಧ ಗುರುಗಳಿದ್ದರು. ಇತಿಹಾಸದಲ್ಲಿ ಅನೇಕ ಉದಾಹರಣೆಗಳು ಇದ್ದರೂ ನನ್ನ ನಿಮ್ಮಂಥ ಜನಸಾಮಾನ್ಯರ ಮನಸ್ಸಿನಲ್ಲಿ ಉಳಿದು ಹೋಗುವುದು ಗುರು ದ್ರೋಣ ಹಾಗೂ ಗುರು ವಿಶ್ವಾಮಿತ್ರರು ಕರ್ಣ ಹಾಗು ಏಕಲವ್ಯನನ್ನು ನಡೆಸಿಕೊಂಡ ರೀತಿ, ಶುಕ್ರಾಚಾರ್ಯರ ರಾಕ್ಷರೆಡೆಗೆ ಕುರುಡು ಪ್ರೇಮ, ಇಂಥಃ ಉದಾಹರಣೆಗಳು ಮನಸ್ಸಿನಲ್ಲಿ ವಿಷಾದವನ್ನು ಮೂಡಿಸುತ್ತದೆ. ಇಂಥಃ ಗುರುಗಳು ಸಂಖ್ಯೆ ಇಂದು ವಿಪರೀತವಾಗಿದೆಯೇನೋ ಎಂದು ಆತಂಕ ನಮ್ಮ ದಿನ ಪತ್ರಿಕೆಗಳನ್ನು ಓದಿದಾಗ ಮೂಡುವುದು ಸಹಜ ಕಣ್ರೀ . ಗುರುಗಳು ನಿತ್ಯ ಪೂಜ್ಯರು. ಕಪಟ ಗುರುಗಳು ಜನಮಾನಸದಲ್ಲಿ ಹೆಚ್ಚು ದಿನ ಉಳಿಯಲಾರರು.

ಇಗೀಗ ವಾರಪತ್ರಿಕೆಗಳನ್ನು, ದೃಶ್ಯ ಮಾಧ್ಯಮಗಳಲ್ಲಿ ಸುದ್ದಿಯಾಗುವ ಕೆಲವು ಘಟನೆಗಳು, ಗುರು-ಶಿಷ್ಯ ಪರಂಪರೆಯು ಅಧೋಗತಿಯತ್ತ ಸಾಗುತ್ತಿದೆ ಎಂದು ಭಯ ಹುಟ್ಟಿಸುತ್ತದೆ. ಆದರೆ ನಾವು ಈ ದೃಶ್ಯ ಮಾಧ್ಯಮಗಳ ದಾಸರಗದೆ, ನಮ್ಮ ಸುತ್ತ ಮುತ್ತ ಮೌನವಾಗಿ  ಗಮನಿಸಿದರೆ ಅದೆಷ್ಟೋ ವರುಷಗಳಿಂದ ಗುರು-ಶಿಷ್ಯ ಪರಂಪರೆಯನ್ನು ಜೀವಂಥವಾಗಿರಿಸಿ ಸದ್ದಿಲ್ಲದೇ ತಮ್ಮ ಕಾರ್ಯವನ್ನು ಮಾಡುವ ಅದೆಷ್ಟೋ ಶಿಕ್ಷಕರು, ಯಾವುದೇ ಪ್ರಶಸ್ತಿಯ ಆಸೆ ಇಲ್ಲದೆ ತಮ್ಮ ಆದರ್ಶಗಳನ್ನು ಪಾಲಿಸುತ್ತಾ ಸುದ್ದಿಯಾಗದೇ ಇದ್ದರೂ ಜನಮಾನಸದಲ್ಲಿ ನೆಮ್ಮದಿಯ ಸೆಳೆಯಾಗಿ ತಂಪೆರೆಯುತ್ತಾರೆ. “ಏ! ನಮ್ಮ ಮಾಸ್ತರು ಬಂದ್ರೋ, ದಾರಿ ಬಿಡ್ರೋ.” ಎಂದು ಭಕ್ತಿ ಭಾವದಿಂದ ವಿಧೇಯರಾಗಿ ಗೌರವ ನೀಡುವ ಶಿಷ್ಯ ವೃಂದ ಇಂದಿಗೂ ಕಣ್ಣು ತೆರೆದು ನೋಡಿದರೆ ನಮಗೆ ಕಂಡೇ ಕಾಣಿಸುತ್ತಾರೆ. ಇವರು ಸಾವಿರಾರು ಹೃದಯಗಳಲ್ಲಿ ನೂರಾರು ವರುಷ ನೆನಪಾಗಿ ಬಾಳುತ್ತಾರೆ, ಧನ್ಯರಗುತ್ತಾರೆ.

ಇಂದಿನ ಯುಗದ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ನಿಲ್ಲುವ ಭಾರತದ ದಿಗ್ಗಜರಾದ ನಮ್ಮ ಮೊದಲ ರಾಷ್ಟ್ರಪತಿಗಳಾದ ದಿವಂಗತ ಶ್ರೀ ರಾಧಾಕೃಷ್ಣನ್, ಮಹಾನ್ ವಿಜ್ಞಾನಿ ಹಾಗೂ ಶಿಕ್ಷಕರಾದ ಅಬ್ದುಲ್ ಕಲಾಂ, ನಮ್ಮ ನಾಡಿನ ಮಹಕವಿಗಳಾದ ಕುವೆಂಪು, ಪ್ರೊಫೆಸರ್ ಗೋಕಾಕ್, ಪ್ರೊಫೆಸರ್ ಕೃಷ್ಣಶಾಸ್ತ್ರಿ,   ಅಡಿಗರು ಹೀಗೆ ಅನೇಕ ಮಹಾನ್ ಹಸ್ತಿಗಳೆಲ್ಲ ಗುರುಗಳಾಗಿದ್ದವರು. ಲಕ್ಷಾಂತರ ಮಂದಿಗೆ ಸ್ಪೂರ್ತಿಯ ಸೆಳೆಯಾಗಿದ್ದರು. ಆದರೆ ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ. ಇಂದು ನಮ್ಮ ವಿಧ್ಯಾಭ್ಯಾಸ ಕ್ಷೇತ್ರ ಪಾಸ್ಚ್ಯಾತಿಕರಣಗೊಳ್ಳುತ್ತಿವೆ ಎಂಬ ಕೂಗು ಒಂದೆಡೆಯಾದರೆ, ಇನ್ನೊಂದೆಡೆ ಧಾರ್ಮಿಕರಣಗೊಳ್ಳುತ್ತಿದೆ ಎಂಬ ಕೂಗು. ಉತ್ತಮವಾದುದನ್ನು ನಮ್ಮ ಶಿಕ್ಷಣ ಪದ್ದತಿಯಲ್ಲಿ ಅಳವಡಿಸಿಕೊಂಡು, ನಮ್ಮ ಸಂಸ್ಕ್ರತಿಗೆ ಸೂಕ್ತವಲ್ಲದ್ದನ್ನು ತೆಗೆದು, ಶಿಕ್ಷಣ ಕ್ಷೇತ್ರದಲ್ಲಿ ಹೊಸತೊಂದು ಗಾಳಿ ಬೀಸುವುದರಲ್ಲಿ ತಪ್ಪೇನಿಲ್ಲ. ಅದಕ್ಕೆ ಸಂಬಂಧಪಟ್ಟ ಇಲಾಖೆಗಳು ಯಾವುದೇ ರೀತಿಯ ರಾಜಕೀಯ ವಿಚಾರಧಾರೆಗಳ ಪ್ರಭಾವಕ್ಕೆ ಒಳಗಾಗದೆ ಅಮೂಲಾಗ್ರ ಬದಲಾವಣೆ ತಂದರೆ ಅದು ಸ್ವಾಗತಾರ್ಹ ಕ್ರಮ.

ಇಂದು ನಾನು ಬರೆಯುತ್ತಿರುವ ಬ್ಲಾಗ್ನ ಉದ್ದೇಶ ಅದಲ್ಲ. ನಮಗೆ ಪೂರ್ಣ ಸತ್ಯ ತಿಳಿಸುವುದು ವಿಧ್ಯಾಭ್ಯಾಸದ ಗುರಿ. ಕೇವಲ ದುಡಿಯುವ ಯಂತ್ರಗಳನ್ನು ಮಾತ್ರ ತಯಾರು ಮಾಡುವ ಕಾರ್ಖಾನೆಗಳಲ್ಲ ಅವು. ನಮ್ಮ ಹುಟ್ಟು, ನಡುವೆ ನಮ್ಮ ಜೀವನ, ಕೊನೆಗೆ ಸಾವು; ಹೀಗೆ ಜೀವನದ ಎಲ್ಲಾ ಆಯಾಮಗಳನ್ನು ಶಿಕ್ಷಣ ಕಲಿಸಿ ಕೊಡಬೇಕು. ಅದು ಅದಾಗಲೇ ಅದು ಸಂಪೂರ್ಣ ಶಿಕ್ಷಣ.

ಕೆಲವೊಂದು ವಿಷಯಗಳನ್ನು ಶಾಲೆಯಲ್ಲಿ ಕಲಿಸಿ ಕೊಡಲಾಗುವುದೇ ಇಲ್ಲ. ಅಂತಃ ಒಂದು ವಿಷಯ ಹುಟ್ಟು-ಸಾವು. ಯಾವ ಪಾಠಶಾಲೆಯೂ ನಿಮಗೆ ಇದನ್ನು ಹೇಗೆ ಎದುರಿಸಬೇಕೆಂದು ಹೇಳಿ ಕೊಡುವುದಿಲ್ಲ. ಅತ್ಯಂತ ಮೂಲಭೂತವಾದ ಈ ವಿಷಯವನ್ನು ಕೇವಲ ಆಧ್ಯಾತ್ಮ ಓದುವವರಿಗೆ ಮಾತ್ರ ಮೀಸಲಾಗಿಡುತ್ತದೆ ಸಮಾಜ. ಇದರ ಬಗ್ಗೆ ಸರಿಯಾದ ಅರಿವು ಚಿಕ್ಕಂದಿನಿಂದಲೇ ಮೂಡಿದರೆ ಅನಗತ್ಯ ಅಪರಾಧಗಳು ನಡೆಯದೇ ಇರಬಹುದು. ಅನೇಕ ಮಕ್ಕಳ, ವಯಸ್ಕ ಪ್ರಜೆಗಳ  ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಬಹುದು. ಈ ವಿಷಯವನ್ನು ಯಾವುದೇ ಸಿಲ್ಲೆಬಸ್ಸಿನಲ್ಲಿ ನಾವು ಹುಡುಕಿದರೂ ಸಿಗಲಾರದು.

 ಹೇಗೆ ಸಾವನ್ನು ಎದುರಿಸಬೇಕು, ಹುಟ್ಟು-ಸಾವು ಉಂಟಾದರೆ ಯಾವ ಯಾವ ಸರಕಾರಿ ಕ್ರಮಗಳನ್ನು ಪಾಲಿಸಬೇಕು, ಮೆಡಿಕಲ್ ಇನ್ಸೂರೆನ್ಸ್, ಜನರಲ್ ಇನ್ಸೂರೆನ್ಸ್ಗಳ ಬಗ್ಗೆ, ಮನೆಯ ಜವಾಬ್ದಾರಿಯಲ್ಲಿ ಹೇಗೆ ತಮ್ಮ ಹಿರಿಯರಿಗೆ ನೆರವಾಗಬೇಕು ಎಂದು ಕಲಿಸಬೇಕು. ಸಣ್ಣ ಬ್ಯಾಂಕ್ ಸೇವಿಂಗ್ಸ್ ಇವುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಮಕ್ಕಳಿಗೆ ಕಾಲೇಜ್ ಮೆಟ್ಟಿಲು ಹತ್ತುವ ಮೊದಲೇ ನೀಡಿ ಜೀವನಕ್ಕೆ ಸಜ್ಜು ಮಾಡಬೇಕು.. ಇದು ಅಮೂಲಾಗ್ರ ಶಿಕ್ಷಣದ ಲಕ್ಷಣ . ಕೇವಲ ರಾಂಕ್ ಹೋಲ್ಡರ್ಗಳ ಚಿತ್ರಗಳನ್ನು ಪತ್ರಿಕೆಗಳಲ್ಲಿ ಹಾಕದೆ, ದಿನ ನಿತ್ಯದ ಕಷ್ಟ ಕೋಟಲೆಗಳನ್ನು ನಿಭಾಯಿಸಿ ಜೀವನದಲ್ಲಿ ಸಫಲರಾದ  ವಿಧ್ಯಾರ್ಥಿಗಳನ್ನು ಕರೆದು ಗೌರವಿಸಿ ಮಾದರಿಯನ್ನಾಗಿಸಬೇಕು. ವಿಧ್ಯಾರ್ಥಿಗಳು ಕೇವಲ ಅಂಕಿ ಅಂಶಗಳಾಗಬಾರದು.

 ಇದೊಕ್ಕೊಂದು ಉತ್ತಮ ಉದಾಹರಣೆ ನಮ್ಮ ಕಥಾ ಉಪನಿಷತ್ತಿನಲ್ಲಿದೆ. ಹುಟ್ಟಿಂದ ಸಾವು, ಸಾವಿನಿಂದ ಹುಟ್ಟು ಪ್ರಕೃತಿ ನಿಯಮ.  ಹಾಗಾಗಿ ಬೇರೆ ಬೇರೆ ಮತಗಳಲ್ಲಿ ಸಾವಿಗೆ ಒಂದು ದೇವರನ್ನು ನೇಮಿಸಿದ್ದಾರೆ. ಹಿಂದೂ ಸಂಸ್ಕೃತಿಯಲ್ಲಿ ಯಮಧರ್ಮರಾಯನಿಗೆ ಮುಕ್ತಿಯ ಉತ್ತರದಾಯಿತ್ವವನ್ನು ನೀಡಲಾಗಿದೆ. ಅವನನ್ನು  ಕಂಡರೆ ದೇವ, ರಕ್ಕಸಗಳಿಂದ ಹಿಡಿದು ಎಲ್ಲ ಜೀವಿಗಳಿಗೂ ಎಲ್ಲಿಲ್ಲದ ಭಯ. ಆದರೆ ಇಂದಿನ ಯುಗದಲ್ಲಿ ಅವನನ್ನು ಇಂಟರ್ನೆಟ್, ಸ್ಮಾರ್ಟ್ ಫೋನ್, ಲ್ಯಾಪ್ಟಾಪ್ಗಳ ಮೂಲಕವೂ ಆಹ್ವಾನಿಸುವ ಬ್ಲೂವ್ಹೇಲ್, ಮೊಮೋ ದಂಥಃ ವಿನಾಶಕಾರಿ ಗೇಮ್ಗಳನ್ನು ಸೃಷ್ಟಿಸಿ ಅಮಾಯಕರ ಜೀವನವನ್ನು ಬಲಿಪಡೆದು ವಿಕೃತ ಆನಂದವನ್ನು ಪಡೆಯುವ ಬಳಗಗಳು ಹುಟ್ಟಿಕೊಂಡದ್ದು ದುರದೃಷ್ಟಕರ.

ಕಥಾ ಉಪನಿಷತ್ತಿನಲ್ಲಿ ನಚಿಕೇತನೆಂಬ ಬಾಲಕ ಯಮನನ್ನೇ ಗುರುವಾಗುವಂತೆ ಒಲಿಸಿಕೊಂಡು  ಅವನಿಂದ ನಮ್ಮ ಅಸ್ತಿತ್ವದ ಬಗ್ಗೆ ಅಮೂಲ್ಯವಾದ ಜ್ಞಾನವನ್ನು ಪಡೆದುಕೊಂಡ ಬಗ್ಗೆ ವಿಸ್ತ್ರುತತವಾದ ಕಥೆಯಿದೆ. ಅವರಿಬ್ಬರ ನಡುವಣ ಸಂಭಾಷಣೆಯೇ ಕಥಾ ಉಪನಿಷತ್ತಿನ ಜೀವಾಳ. ನಚಿಕೇತ ವಾಜಸ್ರವಸ ಮುನಿಗಳ ಮಗ. ಅವನಿಗೆ ಅಧ್ಯಾತ್ಮ ಜ್ಞಾನದ ವಿಚಾರದಲ್ಲಿ ಸಣ್ಣ ವಯಸ್ಸಿನಿಂದಲೂ ಅದಮ್ಯ ಆಸಕ್ತಿ. ಒಂದು ದಿನ ವಾಜಸ್ರವಸ ಮುನಿ ಧಾರ್ಮಿಕ ಉನ್ನತಿ ಪಡೆಯಲು ತನ್ನಲ್ಲಿವರುವ ವಸ್ತುಗಳನ್ನು ದಾನ ಮಾಡುತ್ತಾನೆ. ತಂದೆಯು ಹಾಲು ಕೊಡಲಾರದ ಗೊಡ್ಡು ದನವನ್ನು ದಾನ ಮಾಡಿದುದನ್ನು ಕಂಡು ತಂದೆಯಲ್ಲಿ ಹಾಲು ಕೊಡಲಾರದ ದನವನ್ನು ದಾನ ಮಾಡಿ ಸಿಗುವ ಪ್ರತಿಫಲದ ಪುಣ್ಯವನ್ನು ಪ್ರಶ್ನಿಸುತ್ತಾನೆ. ತಂದೆಗೆ ಈ ವಿಷಯ ಮನದಟ್ಟು ಮಾಡಲು “ ನನ್ನನ್ನು ಯಾರಿಗೆ ದಾನ ಮಾಡುವೆ” ಎಂದು ಪದೇ ಪದೇ ಪ್ರಶ್ನಿಸುತ್ತಾನೆ. ಕೋಪಗಂಡ ತಂದೆಯು “ನಿನ್ನನ್ನು ಸಾವಿಗೆ ಅರ್ಪಿಸುತ್ತೇನೆ.” ಎಂದು ಹೇಳಿಬಿಡುತ್ತಾನೆ.

ಇದರಿಂದ ಕೊಂಚವೂ ವಿಚಲಿತನಾಗದ ನಚಿಕೇತ ನೇರವಾಗಿ ಯಮನ ಅರಮನೆಗೆ ಹೊರಡುತ್ತಾನೆ. ಆದರೆ ಸಾವಿನ ದೊರೆ ಅಲ್ಲಿರುವುದಿಲ್ಲ. ಮೂರು ದಿನ ಅನ್ನ ಜಲವಿಲ್ಲದೆ ಅಲ್ಲಿಯೇ ಕಾಯುತ್ತಾನೆ. ವಾಪಸ್ಸು ಬಂದ ಯಮನು ತೇಜಸ್ವಿ ಬಾಲಕನ ಧೈರ್ಯವನ್ನು ಮೆಚ್ಚಿ ಮೂರು ವರಗಳನ್ನು ಕೇಳುವಂತೆ ವಿನಂತಿಸುತ್ತಾನೆ. ಮೊದಲನೇ ವರದಲ್ಲಿ ತನ್ನ ತಂದೆಯ ಕೋಪವು ಶಮನವಾಗುವಂತೆ ಬೇಡುತ್ತಾನೆ. ಎರಡನೇ ವರವಾಗಿ ನೋವು, ಹಸಿವು ಹಾಗೂ ಭಯವಿಲ್ಲದೆ ನೇರವಾಗಿ ಸ್ವರ್ಗಕ್ಕೆ ಸೇರಲು ನಡೆಸುವ ಪವಿತ್ರವಾದ ಅಗ್ನಿ ಯಜ್ಞದ ಬಗ್ಗೆ ಕೇಳುತ್ತಾನೆ. ಯಮನು ಪ್ರಸನ್ನಗೊಂಡು ಅವನಿಗೆ ಅಭಯವನ್ನೀಯುತ್ತಾನೆ. ಅಂದಿನಿಂದ ಅದು ನಚಿಕೇತ ಯಜ್ಞವೆಂದೇ ಪ್ರಸಿದ್ದಿ ಪಡೆಯುತ್ತದೆ. ಅದನ್ನು ಮೂರು ಬಾರಿ ಮಾಡಿದವರು ತಂದೆ,ತಾಯಿ ಹಾಗೂ ಗುರುವಿನ ಜ್ಞಾನಸಾಗರದಲ್ಲಿ ವಿಲೀನವಗುತ್ತಾರೆ . ಅದರೊಂದಿಗೆ ತಮ್ಮ ಮೂರು ಕರ್ತವ್ಯವನ್ನು-ವೇದೋಪನಿಷತ್ತನ್ನು ಮನನ ಮಾಡಿ ಅದರ ಸಾರವನ್ನು ಅರಿತುಕೊಂಡು, ಎಲ್ಲ ಕ್ರಿಯಾ ಕರ್ಮಾದಿಗಳನ್ನು ಮಾಡಿ, ಬಡವರಿಗೆ ದಾನ ಮಾಡಿದವರು ಚಿರಶಾಂತಿಯನ್ನು  ಪಡಯುತ್ತಾರೆ ಎಂದು ಆಶೀರ್ವಾದವನ್ನು ನೀಡುತ್ತಾನೆ.

ಇದು ನಮ್ಮ ನಿಮ್ಮಂಥ ಜನ ಸಾಮಾನ್ಯರಿಗೆ ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ನಾವು ಇಂದು ನೋಡುವ ಯಾವುದೇ ವೈಜ್ಞಾನಿಕ ವಿಧಿಯನ್ನು ನೋಡಿದರೆ ಅರ್ಥವಗುತ್ತದೆ, ಇವೆಲ್ಲ ವೈಜ್ಞಾನಿಕ ಸಾಧನಗಳ ಮೂಲ ಗುರಿ ಒಂದೇ. ನಾವು ಯಾರು? ಇಲ್ಲೆಕಿದ್ದೇವೆ? ಇದರ ಜ್ಞಾನವು ನಮಗೆ ಹೇಗೆ ಉಂಟಾಗುತ್ತದೆ? ನಾವು ಕಂಡದನ್ನು ಏಕೆ ಹಾಗೆ ಕಾಣುತ್ತೇವೆ? ಈ ಬ್ರಹ್ಮಾಂಡವನ್ನು, ಇದರ ಒಳಗಿನ ರಹಸ್ಯ,  ನಮ್ಮ ಮೂಲ ಅಸ್ತಿತ್ವ , ಸಾವನ್ನು ಜಯಿಸುವ ವಿಧಾನ ಅರಿಯುವುದೇ.

ಮೂಲ ಗುರಿಯಾಗಿರುತ್ತದೆ. ಮತ್ತೆ ನಮಗೆಲ್ಲ ಮೂಡುವ ದೊಡ್ಡ ಪ್ರಶ್ನೆ ಸಾವಿನ ಅನಂತರ ಏನು? ನಮ್ಮ ಪ್ರಜ್ಞೆ ಬದುಕಿರುತ್ತದೆಯೇ? ನಾವು ಈ ಜೀವನದಲ್ಲಿ ಸಂಪಾದಿಸಿದ ಜ್ಞಾನ ವ್ಯರ್ಥವಗುವುದೇ? ಈ ಜಟಿಲ ಪ್ರಶ್ನೆಯನ್ನು ನಚಿಕೇತ ನಮ್ಮ ಪ್ರತಿನಿಧಿಯಂತೆ ಭಾಸವಾಗಿ ಯಮನಲ್ಲಿ ಕೇಳುತ್ತಾನೆ. ಯಮನು ಅದು ಒಂದು ಬಿಟ್ಟು ಬೇರೆ ಏನು ಬೇಕಾದರು ಕೇಳು, ನಿನಗೆ ಜೀವನದಲ್ಲಿ ಬೇಕಾದ ಅರೋಗ್ಯ,ಆಯುಷ್ಯ, ಸಂಪತ್ತು, ಐಶಾರಮಿ ಬದುಕು ಕೊದಬಲ್ಲೇನು ಎಂದು ಉತ್ತರಿಸುತ್ತಾನೆ. ಆಗ ನಚಿಕೆತನು ‘ಎಲ್ಲವೂ ಇದ್ದರೂ ನೀನು ಬಂದಾಗ, ಎಲ್ಲವೂ ವ್ಯರ್ಥ. ಹಾಗಾಗಿ ನನಗೆ ಅಮರತ್ವದೆಡೆಗೆ ಸಾಗುವ ದಾರಿಯನ್ನು ತಿಳಿಸು, ಒಬ್ಬ ಮನುಷ್ಯ ಸತ್ತ ಮೇಲೆ ಬದುಕುತ್ತಾನೋ ಇಲ್ಲವೋ ತಿಳಿಸು, ಓ ಸಾವಿನ ರಾಜ! ಎಂದು ಬೇಡುತ್ತಾನೆ.

ಆಗ ಯಮನು ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಆಧ್ಯಾತ್ಮಿಕ ವಿಚಾರದ ತಿಳುವಳಿಕೆಯುಳ್ಳ ಬಾಲಕನ ಬುದ್ಧಿಮತ್ತೆಯನ್ನು ಮೆಚ್ಚಿ ಅವನಿಗೆ ಆತ್ಮ ,ಇಂದ್ರಿಯ, ಮನಸ್ಸುಗಳ ಅನೇಕತ್ವ ಮತ್ತು ಏಕತ್ವಗಳ ಬಗ್ಗೆ ತಿಳಿಸುತ್ತಾ. ‘ಓಂ’ಕಾರದಿಂದ ಧ್ಯಾನದ ಮೂಲಕ ಪರಮಾತ್ಮನಲ್ಲಿ ಒಂದಾಗಿ ಅಮರತ್ವವನ್ನು ಪಡೆಯುವ ಹಾದಿಯನ್ನು ತಿಳಿಸುತ್ತಾನೆ.

ನಾನು ಈ ಕಥೆಯ ಬಗ್ಗೆ ಯಾಕೆ ಉಲ್ಲೇಖ ಮಾಡಿದನೆಂದರೆ, ನಮ್ಮ ದೈನಂದಿನ ಜೀವನಕ್ಕೆ ಬೇಕಾಗುವ ಪಾಠ ಈ ಸಂವಾದದಲ್ಲಿ ಅಡಗಿದೆ. ನಾವು ಎಷ್ಟೇ ದೊಡ್ಡವರಾದರೂ ಮುಂಗೋಪ ಅನರ್ಥಕ್ಕೆ ಎಡೆಮಾಡಿ ಕೊಡುತ್ತದೆ. ಇದಕ್ಕೆ ನಚಿಕೇತನ ತಂದೆ ವಾಜಸ್ರವಸ; ಜ್ಞಾನಾರ್ಜನೆಗೆ ವಯಸ್ಸಿನ ಮಿತಿಯಿಲ್ಲ ಎನ್ನುವುದಕ್ಕೆ ನಚಿಕೇತ,ಸಾವು ಜೀವನದ ಬದ್ಧ ವೈರಿ-ವೈರಿಯೂ ಕೂಡ ಉತ್ತಮ ಶಿಕ್ಷಕನಾಗಬಲ್ಲ, ಮಾರ್ಗದರ್ಶಕನಗಬಲ್ಲ ಎಂಬುದಕ್ಕೆ ಯಮ ಧರ್ಮರಾಯನೇ ಉದಾಹರಣೆ.  ಎಲ್ಲರೂ ಕೂಡ ದೈವಾಂಶ ಸಂಭೂತರು, ಹುಟ್ಟುವುದು ದೈವದಿಂದ, ಸತ್ತು ಲೀನವಾಗುವುದು ದೈವದಲ್ಲಿ ಎಂಬ ಅರಿವು ನಮಗೆ ಬಂದರೆ, ನಮ್ಮ ಅಹಂಕಾರ, ದರ್ಪಗಳೆಲ್ಲ ನಾಶವಾಗಿ, ನಮ್ರತೆ ಮತ್ತು ಸಕಲ ಜೀವಿಗಳೆಡೆಗೆ ಪ್ರೇಮವೊಂದೇ ಉಳಿದು, ‘ಎಲ್ಲರೂ ಒಂದೇ’ ಎಂಬ ಭಾವ ಉಳಿದು ಚಿರಶಾಂತಿ ನೆಲಸುವುದು. ಸತ್ತವರಿಗೆ ಮಾತ್ರ ಚಿರಶಾಂತಿಯನ್ನು ಬೇಡುವ ವಾಡಿಕೆಯು ಅಂತ್ಯವಾಗುವುದು.

Comments

Popular posts from this blog

ಮದುವೆಯಾಗಲಿ ಸರಿ ಹೋಗ್ತಾನೆ ಅಂತಾರಲ್ಲ ಯಾಕೆ?

ನಿಮಗೇನಾದರೂ ಅರ್ಥವಾಯಿತೇ???

ಸಾವಿನರಮನೆಯಲ್ಲಿ