ಜರಾಯು



ಪ್ಲಾಸೆಂಟ( ಜರಾಯು) ತಾಯಿಗೂ ಮಗುವಿಗೂ ಜನ್ಮಜಾತ ಸಂಬಂಧ ಕಲ್ಪಿಸುವ ಒಂದು ಜೀವಂತ, ಪವಾಡ ಸದೃಶ, ಜೈವಿಕ  ಕೊಂಡಿ . ಅದು ತಾಯಿಯ ಗರ್ಭದಲ್ಲಿ ಮಗುವಿಗೆ ಜೀವನದಲ್ಲಿ ಬೇಕಾಗಿರುವ ಸಕಲ ರೀತಿಯ ಘಟಕಗಳನ್ನು ಹೊಂದಿರುವೆ ಅಮೃತ ರೂಪಿ ಅಮ್ನಿಯೋಟಿಕ್ ದ್ರವವನ್ನು ಸಾಗಿಸುವ ವಾಹಿನಿ. ನಾವು ಭಾವಿಸಿದಂತೆ ಹೆತ್ತಕೂಡಲೇ ಅದು ನಿರರ್ಥಕವಾಗುವುದಿಲ್ಲ. ಈ ಅಧುನಿಕ ಯುಗದಲ್ಲಿ ಅದನ್ನು stem cell therapy ಗೆ ಬಳಸುತ್ತಾರೆ. ಇದು ಸಂಜೀವಿನಿಗಿಂತ ಯಾವುದೇ ರೂಪದಲ್ಲಿ ಕಡಿಮೆ ಇಲ್ಲ . ಆದರೆ ಒಬ್ಬ ಕಥೆಗಾರನ ದೃಷ್ಟಿಕೋನದಲ್ಲಿ ಅದರ ಅರ್ಥವು ಜೀವನದ ಬೇರೆ ಬೇರೆ ಹಂತಗಳಲ್ಲಿ ಬದಲಾಗುತ್ತ ಸಾಗುತ್ತದೆ. ನವಜಾತ ಶಿಶುವು ತಾಯಿಯ ಗರ್ಭದಿಂದ ಮುಕ್ತಿ ಹೊಂದಿದ ಕೂಡಲೇ ಜರಯುವಿನ ಅಸ್ತಿತ್ವವು ಮುಗಿಯುತ್ತದೆ ಎಂದು ಪ್ರತೀತಿ.  ಅದನ್ನು ಕತ್ತರಿಯಿಂದ ಕತ್ತರಿಸಿದಾಗ ಹಾವಿನಂತೆ ಸುರುಳಿ ಕಟ್ಟಿಕೊಳ್ಳುತ್ತದೆ. ಅದು ಕಂದನು ತಾಯಿಯ ಗರ್ಭದಿಂದ ಮುಕ್ತಿ ಪಡೆಯುವ ಪ್ರಥಮ ಸಂಕೇತ.
 ಆದರೆ ಒಂದು ಜೀವಿಯು ಸಂಪೂರ್ಣವಾಗಿ ಸ್ವತಂತ್ರನಾಗಲು ಹಲವು ವರುಷಗಳೇ ಕಳೆದು ಹೋಗುತ್ತವೆ. ಸ್ವಾತಂತ್ರ್ಯ ಪಡೆದರೂ ಹೆತ್ತವರ ಋಣ ಆ ಜರಾಯುವಿನೊಂದಿಗೆ ಬಳ್ಳಿಯಂತೆ ಸುತ್ತಿಕೊಂಡು ಜೀವದಲ್ಲಿ ಅಂತರ್ಧಾನವಾಗಿ ಹೋಗುತ್ತದೆ. ಈ ಬಂಧನವನ್ನು ತೀರಿಸಲು ಏಳೇಳು ಜನ್ಮಗಳು ಸಾಕಾಗುವುದಿಲ್ಲ. ಆದರೆ ಜೈವಿಕ  ದೃಷ್ಟಿಕೋನದಲ್ಲಿ ನೋಡುವುದಾದರೆ ಇದು ಪ್ರತಿಯೊಂದು ಸಸ್ತನಿಗಳ (Mammals) ವಂಶ ಮುಂದುವರೆಯಲು ಅಗತ್ಯವಾದ ಕಾಯಕ. ಜೀವನದಲ್ಲಿ ನಿಮಗೆ ಮಕ್ಕಳಾದರೆ ಮತ್ತೊಂದು ಬಾರಿ ಜರಾಯುವಿನ ಮೂಲಕ ಋಣ ಬಂಧಿತರಾಗುತ್ತೀರೀ. ಉಭಯ ಸಂಕಟ ನಿಮ್ಮ ಜೀವನದಲ್ಲಿ ನೀವು ಮದುವೆ ಅದ ಕೂಡಲೇ ನಿಮ್ಮನ್ನು ತನ್ನ ಕರಾಳ ಬಂಧನದಲ್ಲಿ ಬಂಧಿಸಲು ತೊಡಗುತ್ತದೆ.
ನೀವು ಬ್ಯಾಚುಲರ್ ಆಗಿ ಇರುವ ವರೆಗೆ ನಿಮ್ಮ ಜೀವನ ಗಗನದಲ್ಲಿ ಹಾರಾಡುವ ಹಕ್ಕಿಯಂತೆ ಸ್ವತಂತ್ರವಾಗಿರುತ್ತದೆ ಎಂದು ಗೃಹಸ್ಥರು ಅಸೂಯೆಪಡುತ್ತಾರೆ. ಈ ವಾದವನ್ನು ಅನೇಕರು ಒಪ್ಪುವುದಿಲ್ಲ. ನಮಗೂ ನಮ್ಮದೇ ಅದ ಕಟ್ಟು ಪಾಡುಗಳಿರುತ್ತವೆ, ನಿಮಗೇನು ಗೊತ್ತು ಸ್ವಾಮಿ ಅಂತ ಪ್ರಶ್ನಿಸುತ್ತಾರೆ, ನಾನು ಕೂಡ ಪ್ರಶ್ನಿಸುತ್ತಿದ್ದೆ ಕಣ್ರೀ. whatsapp ನಲ್ಲಿ ನಿತ್ಯ ಹರಿದಾಡುವ ಹಾಸ್ಯ ಚಟಾಕಿಗಳು ಸಂಸಾರಿಗಳನ್ನು ಗುರಿಯಿಟ್ಟು ಸಿದ್ದಪಡಿಸಲಾಗಿರುತ್ತದೆ. ಬಡಪಾಯಿಗಳನ್ನು ಸಮಾಜ ವಿನೋದಕ್ಕೆ ಬಳಸಿಕೊಳ್ಳುವ ದೃಷ್ಟಾಂತ ನಮಗೆ ಅನಾದಿ ಕಾಲದಿಂದಲೂ ಸಿಗುತ್ತದೆ. ಈಗೇನು ಬಿಡಿ ಅಂತೀರ? ಅದು ಸರಿಯಾದ ವಾದವೇ ಕಣ್ರೀ.
ಆದರೆ ಈ ಸಂಕಟಗಳನ್ನು ಹೇಗೋ ನಿಭಾಯಿಸಬಹುದು. ಆದರೆ ಅತ್ತೆ –ಸೊಸೆ, ಮಾವ-ಅಳಿಯ, ಮಕ್ಕಳ ನಡುವೆ, ಹೀಗೆ ನಮಗೆ ಅತಿ ಹತ್ತಿರವದವರಲ್ಲಿ ವಿವಾದ-ಮುನಿಸುಗಳು ಬಂದಾಗ ನಿಭಾಯಿಸುವುದು ತುಂಬಾ ದೊಡ್ಡ ಸಾಹಸ ಕಣ್ರೀ. ಆದರೆ ಇನ್ನೊಂದು ಅತ್ಯಂತ ಸೂಕ್ಷ್ಮ ಹಾಗೂ ಕ್ಲಿಷ್ಟಕರವಾದ ಸಮಸ್ಯೆಯೆಂದರೆ ವೃದ್ಧ ತಂದೆ ತಾಯಿಯಂದಿರ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಾಗ ಉದ್ಭವಿಸುವ ಪರಿಸ್ಥಿತಿ. ನಿಮ್ಮಲ್ಲಿ ವಿಮೆ ಇತ್ತೆಂದರೆ ಸರಿ, ಇಲ್ಲದೇ ಹೋದರೆ ಅಧೋಗತಿ. ಈ ಉಭಯ ಸಂಕಟದ  ಬಗ್ಗೆ ಒಂದು ಮನೋಜ್ಞವಾದ ಕಥೆ ಕೇಳಿ.
 ಒಬ್ಬ ಅಪ್ರತಿಮ ಸದ್ಗುಣಿ ಹಾಗು ಸಹಸಿ ಪ್ರಜೆಯೊಬ್ಬನಿರುತ್ತಾನೆ. ಅವನಿಗೆ ಅಮರನಾಗ ಬೇಕೆಂಬ ಉತ್ಕಟ ಆಸೆ.ಅಮರನಾಗಿ ತನ್ನ ನಾಡು ಹಾಗು ಸಹ ಪ್ರಜೆಗಳನ್ನು ಸದಾ ಶತ್ರುಗಳಿಂದ ರಕ್ಷಿಸಬೇಕೆಬುದು ಅವನ ಆಕಾಂಕ್ಷೆ ಆಗಿರುತ್ತದೆ. ಅವನಿಗೆ ಅಲ್ಲೇ ಪಕ್ಕದ ಕಾಡಿನ ಗುಹೆ ಒಂದರಲ್ಲಿ ಒಂದು ಸಣ್ಣ ಲೋಟದಲ್ಲಿ ಅಮೃತವಿರುವುದರ ಸುಳಿವು ಸಿಗುತ್ತದೆ. ಅನೇಕರು ಈ ಹಿಂದೆ ಅದನ್ನು ಪಡೆಯಲು ಪ್ರಯತ್ನಿಸಿ ಸೋಲುಂಡು ಸತ್ತು ಹೋಗಿದ್ದಾರೆಂದು ಮಿತ್ರರುಎಚ್ಚರಿಕೆ ನೀಡುತ್ತಾರೆ . ಆದರೆ ಇವನಿಗೆ   ಅವನ ಬುದ್ಧಿ ಹಾಗು ತಾಕತ್ತಿನ ಮೇಲೆ ಅದಮ್ಯ ವಿಶ್ವಾಸ. ಹಾಗಾಗಿ ಪ್ರಯತ್ನಿಸಿಯೇ ತೀರುತ್ತೇನೆಂದು ಶಪಥ ಮಾಡುತ್ತಾನೆ.
ಅಂತೆಯೇ ಒಂದು ಒಳ್ಳೆ ಮುಹೂರ್ತ ನೋಡಿ ಗುಹೆಗೆ ಹೊರಡುವ ಗಳಿಗೆ ಫಿಕ್ಸ್ ಮಾಡುತ್ತಾನೆ. ಆದರೆ ಅವನು ಗೃಹಸ್ಥ . ಅವನಿಗೆ ಅಮೃತವು ಸಿಗಬಹುದೆಂಬ ಸುಳಿವು ಹೆಂಡತಿಗೂ, ತಾಯಿಗೂ ಗೊತ್ತಾಗಿ ಬಿಡುತ್ತದೆ. ಹೆಂಡತಿ ಓಡೋಡಿ ಬಂದು ನಿಮ್ಮ ಮಗನಿಗೆ ಹುಷಾರಿಲ್ಲ, ದಯವಿಟ್ಟು ಅಮೃತವನ್ನು ಅವನಿಗಲ್ಲದೆ ಬೇರೆ ಯಾರಿಗೂ ಕೊಡಬೇಡಿ, ಅವನು ನಿಮ್ಮ ವಂಶ ಉದ್ಧಾರಕ  ಎಂದು ಬೇಡಿಕೆ ಇಡುತ್ತಾಳೆ. ಅವನು ತನ್ನ ಪರಿವೆಯನ್ನು ಬಿಟ್ಟು ಮಗನಿಗೋಸ್ಕರ ಅಮೃತ ತರುವೆನೆಂದು ಶಪಥ ಮಾಡುತ್ತಾನೆ. ಆದರೆ ಕೆಲವೇ ಗಳಿಗೆಯಲ್ಲಿ ತಾಯಿ ಓಡಿ ಬಂದು ಮಗ ನಿನ್ನ ಜನ್ಮದಾತ ತಂದೆಯು ತೀವ್ರವಾದ ಅನಾರೋಗ್ಯ ದಿಂದ ಬಳಲುತ್ತಿದ್ದಾನೆ. ದಯವಿಟ್ಟು ಸ್ವಲ್ಪ ಅಮೃತವನ್ನು, ನಿನ್ನನ್ನು ಇಲ್ಲಿವರೆಗೆ ಸಾಕಿದ ತಂದೆಗೂ ನೀಡೆಂದು ಪ್ರಾರ್ಥಿಸುತ್ತಾಳೆ. ಅಮ್ಮನಿಗೂ ಇಲ್ಲ ಎನ್ನಲಾಗದೆ, ಇಬ್ಬರಿಗೂ ಸಮನಾಗಿ ಅಮೃತವನ್ನು ಹಂಚುವೆ ಇಲ್ಲ ಜೀವ ತೊರೆಯುವೆ ಎಂದು ಪ್ರತಿಜ್ಞೆ ಮಾಡಿ ಗುಹೆಯೊಳಗೆ ನುಗ್ಗುತ್ತಾನೆ.
ಗ್ರಹಸ್ಥರ ಕಥೆಯೇ ಹೀಗೆ ನೋಡಿ. ಹೊರಟಿದ್ದ ಉದ್ದೇಶವೇ ಒಂದು ಕೊನೆಗೆ ಉದ್ದೇಶವೇ ಬದಲಾಗಿ ಹೋಗುತ್ತದೆ. ನೀವು ಮಾರುಕಟ್ಟೆಗೆ, ಬಟ್ಟೆ, ಚಿನ್ನ ಖರೀದಿಗೆ ಹೊರಟಾಗ ಇಂಥ ಸನ್ನಿವೇಶವನ್ನು ಖಂಡಿತ ಯೆದುರಿಸಿರಬೇಕು. ನಗಬೇಡಿ ಮುಂದೆ ಓದಿ.
ಅವನು ಅಪ್ರತಿಮನಾದ ಯೋದ್ಧನಾದ್ದರಿಂದ ಅವನಿಗೆ ಆ ಗುಹೆಯೊಳಗೆ ಬರುವ ಯಾವುದೇ ಸವಾಲನ್ನು ಕ್ಷಣ ಮಾತ್ರದಲ್ಲಿ ಸದೆಬಡೆದು ಒಳ ನುಗ್ಗುತ್ತಾನೆ. ಅನತಿ ದೂರದಲ್ಲಿ ಎರಡು ಬಂಗಾರದ ಲೋಟಗಳು ಸರ್ವ ಅಲಂಕಾರದಿಂದ ಕಂಗೊಳಿಸುವುದು ಕಂಡು ಅತ್ಯಂತ ಸಂತಸದಿಂದ ಮುನ್ನುಗುತ್ತಾನೆ. ಆದರೆ ಹತ್ತಿರ ಹೋದಾಗ ಇದ್ದಕಿದ್ದಂತೆ ಯಕ್ಷನೊಬ್ಬ ಪ್ರತ್ಯಕ್ಷನಗುತ್ತಾನೆ. “ ಎಲವೋ ವೀರ ಮೆಚ್ಚಿದೆ ನಿನ್ನ ಧೈರ್ಯವನ್ನು. ಆದರೆ ಅಮೃತವು ಅಷ್ಟು ಸುಲಭವಾಗಿ ದೊರಕಲಾರದು. ಇಲ್ಲಿ ಒಂದು ಲೋಟದಲ್ಲಿ ವಿಷ ಇನ್ನೊಂದರಲ್ಲಿ ಅಮೃತವಿದೆ. ನೀನು ಇದರಲ್ಲಿ ಒಂದನ್ನು ಮಾತ್ರ ಉಪಯೋಗಿಸಬಲ್ಲೆ. ಅಮೃತವನ್ನು ಪೂರ್ತಿ ಕುಡಿದರೆ ಮಾತ್ರ ಚಿರಾಯುವಾಗುತ್ತಾರೆ. ಅಲ್ಪ ಸ್ವಲ್ಪ ಕುಡಿದರೆ ಸಾವು ಅವರನ್ನು ಆವರಿಸುತ್ತದೆ.ನಿನ್ನ ಮನಸಿನಲ್ಲಿ ಕೊಂಚ ಕೂಡ ಲೋಭವಿದ್ದರೆ ಇದು ಕಾರ್ಕೋಟಕ ವಿಷವಾಗಿ ನೀನು ನರಕಕ್ಕೆ ನೇರವಾಗಿ ಹೋಗಿ ಸೇರುತ್ತೀಯ.
 ನಾನು ನಿನಗೆ ಎರಡು ಆಯ್ಕೆಗಳನ್ನು ನೀಡುತ್ತೇನೆ. ನೀನು ಹೊರಡುವಾಗ ಇದ್ದ ಇಚ್ಛೆ ಚಿರಾಯುವಾಗಬೇಕೆಂದು, ನಿನ್ನ ಮನಸಿನಲ್ಲಿ ನಿನ್ನ ಸಹ ಪ್ರಜೆಗಳಿಗೆ ಸಹಾಯ ಮಾಡಬೇಕೆಂಬ ನಿಸ್ವಾರ್ಥ ಭಾವನೆ ಇತ್ತು. ಹಾಗಾಗಿ ನೀನು ಅದನ್ನು ಬಯಸಿದರೆ, ನಾನು ನಿನಗೆ ಯಾವುದೇ ಹಿಂಜರಿಕೆ ಇಲ್ಲದೆ ಅಮೃತವನ್ನು ಖುದ್ದಾಗಿ ಕುಡಿಸುತ್ತೇನೆ. ಆದರೆ ನಿನ್ನ ಪ್ರತಿಜ್ಞೆಯ ಅರಿವಿದೆ ನನಗೆ. ಹಾಗಾಗಿ ಮುಂಚೆಯೇ ಕಾರ್ಕೋಟಕ ವಿಷವಿರುವ ಇನ್ನೊಂದು ಲೋಟವನ್ನು ನೀಡುತ್ತೇನೆ. ಅದ್ರಲ್ಲಿ ಯಾವುದೇ ನೋವಿಲ್ಲದೆ ಮರಣ ಬಂದು ನಿನಗೆ ಮೋಕ್ಷ ಪ್ರಾಪ್ತಿಯಾಗುವುದು. ನೀನು ನಿರ್ಧರಿಸು - ಎಂದು ಎರಡು ಲೋಟವನ್ನು ಹಿಡಿದು ನಿಲ್ಲುತ್ತಾನೆ.
ಆ ವೀರನ ಮನಸ್ಸು ಗೊಂದಲಗೂಳಗಾಗುತ್ತದೆ.  ಮಗನ ಕರ್ತವ್ಯ ನಿಭಾಯಿಸಿದರೆ ತಂದೆಯ ಕರ್ತವ್ಯದಿಂದ ವಂಚಿತನಾಗಿ ಬದುಕು ದುಸ್ತರವಾಗುತ್ತದೆ. ಆದರೆ ಎಲ್ಲವನ್ನು ನಾನೇ ಕುಡಿದರೆ ಅಮರನಾಗುತ್ತೇನೆ ಆದರೆ ಪಿತೃ ಹಾಗೂ ಪುತ್ರ ಶೋಕದಿಂದ ಶಪಥ ವಂಚಿತನಾಗಿ ನರಳಿ ಬದುಕ ಬೇಕಾಗುತ್ತದೆ. ಅವನ ಮನದಲ್ಲಿ ಎರಡು ಜರಾಯುಗಳು- ಪಿತೃ ಹಾಗೂ ಪುತ್ರ ಋಣ, ಘೋರವಾದ ಯುದ್ದ ಮಾಡುತ್ತವೆ.  ಆದರೆ ಅವನಿಗೆ ಆಯ್ಕೆ ಮಾಡಲು ಸಾಧ್ಯವಾಗದೇ, ಒಂದು ದಿಟ್ಟ ನಿರ್ಧಾರ ಮಾಡಿ ನೇರವಾಗಿ ಯಕ್ಷನಲ್ಲಿ ಹೋಗಿ ಮೋಕ್ಷ ನೀಡೆಂದು ಕಾರ್ಕೋಟಕ ವಿಷವನ್ನು ಕುಡಿದು ಮೋಕ್ಷವನ್ನು ಹೊಂದುತ್ತಾನೆ. ಯಕ್ಷನು ಇನ್ನೊಬ್ಬ ವೀರನಿಗಾಗಿ ಕಾಯುತ್ತಿರುತ್ತಾನೆ.
ನಮ್ಮ ಬದುಕು ಕೂಡ ಹೀಗೇನೆ. ನೀವು ಜವಾಬ್ದಾರಿಯನ್ನು ಹೊತ್ತು ಕರ್ಯತತ್ಪರರಾದರೆ, ಈ ಜರಾಯುಗಳ ಗೆಳೆತನ ಮಾಡಿ ಸಾಧನೆ ಮಾಡ ಬೇಕಾಗುತ್ತದೆ. ಇಲ್ಲವೆಂದರೆ ಕಷ್ಟಗಳೆಂಬ ಬಾಣಲೆಯಲ್ಲಿ ಉರಿದು ನರಳಿ ಹೋಗುತ್ತೀರಿ. ಜಾಣತಾಣದಿಂದ ಆಯ್ಕೆ ಮಾಡಿ. ಮೇಲಿನ ಕಥೆಯನ್ನೊಮ್ಮೆ ಜೀವನದ ಕಠಿಣ ಸಂಧರ್ಭದಲ್ಲಿ ನೆನಪಿಸಿಕೊಳ್ಳಿ.


Comments

Popular posts from this blog

ಮದುವೆಯಾಗಲಿ ಸರಿ ಹೋಗ್ತಾನೆ ಅಂತಾರಲ್ಲ ಯಾಕೆ?

ನಿಮಗೇನಾದರೂ ಅರ್ಥವಾಯಿತೇ???

ಸಾವಿನರಮನೆಯಲ್ಲಿ