ಮುಂಗಾರಿನ ಮೊದಲ ಮಳೆಯ ಬೆನ್ನು ಹಿಡಿದು ಹೋಗಿ......

Image courtesy weather.com
ಈ ನಡುವೆ ತುಂಬಾ ವ್ಯಸ್ತನಾಗಿದ್ದೆ. ಬರೆಯಲು ಸಮಯವಿರಲಿಲ್ಲವೆಂದಲ್ಲ, ಸಮಯವಿತ್ತು ಆದರೆ ಕೆಲವೊಮ್ಮೆ ಆತ್ಮಾವಲೋಕನ ಮಾಡಬೇಕಾಗುತ್ತದೆ. ಇಲ್ಲಿ ಮಳೆಗಾಲ ಪ್ರಾರಂಭವಾಗಿದೆ. ನನಗೆ ಚಿಕ್ಕಂದಿನಿಂದಲೇ ಮಳೆಗಾಲವೆಂದರೆ ತುಂಬಾ ಇಷ್ಟ. ಕರಾವಳಿಯಲ್ಲಿ ಮಳೆಗಾಲ ಆರಂಭವಾಯಿತೆಂದರೆ ಮನೆಗಳಲ್ಲಿ ಸಂಭ್ರಮವೋ ಸಂಭ್ರಮ. ನಾವು ಮಕ್ಕಳಿದ್ದಾಗ, ಬೇಸಿಗೆ ರಜೆಯಲ್ಲಿ ಅಜ್ಜಿ- ಅಜ್ಜಂದಿರನ್ನು ಭೇಟಿಯಾಗಲು ಊರಿಗೆ ದೌಡಾಯಿಸುತ್ತಿದ್ದೆವು. ಏಪ್ರಿಲ್ –ಮೇ ತಿಂಗಳಿನಲ್ಲಿ ಮುಂಗಾರು ಪ್ರಾರಂಭವಾಗುವ ಮುಂಚೆ ಒಂದು ಸಾಂಕೇತಿಕ ಮಳೆ ಬರುತಿತ್ತು. ಮುಂಗಾರಿನ ಮೊದಲ ಮಳೆ. ಅದರ ಸೌಂದರ್ಯದ ಪರಿಯನ್ನು ವಿವರಿಸಬೇಕಾದರೆ ಕವಿಯಾಗಬೇಕಾಗುತ್ತದೆ.

ಬಿಸಿಲಿನ ಬೇಗೆಯಲ್ಲಿ ಬೆಂದ ನೆಲ, ಜಲ, ಪ್ರಕೃತಿಗಳೆಲ್ಲ ಈ ಮಳೆಯಿಂದ ರೋಮಾಂಚನಗೊಂಡು ನಲಿಯುವುದು ಸ್ಪಷ್ಟವಾಗಿ ತೋರುತಿತ್ತು. ಈ ಮಳೆಯಿಂದ ಹಳ್ಳ-ಕೊಳ್ಳಗಳೆಲ್ಲ ತುಂಬಿ ಬಿಗುಮಾನದಿಂದ ಹರಿಯುತ್ತಿದ್ದವು. ಪಕ್ಷಿಗಳ ಚಿಲಿಪಿಲಿ ಕಲರವ ಮುಗಿಲು ಮುಟ್ಟುತ್ತಿತ್ತು. ನಾಯಿ, ಬೆಕ್ಕು, ಅಳಿಲು, ಕೋಳಿಗಳೆಲ್ಲ ಆಟವಾಡತೊಡಗಿ ತಮ್ಮದೇ ಮೂಕ ಶೈಲಿಯಲ್ಲಿ ಸಂಭ್ರಮವನ್ನು ಸಾರುತ್ತಿದ್ದವು. ಅಷ್ಟರಲ್ಲಿ ಸುಳಿ ಮಿಂಚೊಂದು ಸುಳಿದು, ಗುಡುಗೊಂದು ಅಬ್ಬರಿಸಿ ಆಗಸವು ಹೂಂಕರಿಸಿದಾಗ ಮಕ್ಕಳಾದ ನಾವು ಜೋರಾಗಿ ಕೂಗುತ್ತ ಮನೆಯ ಒಳಗಿನ ಜಗಲಿಯಲ್ಲಿ ಕುಳಿತು ಆಟವಾಡುತ್ತಿದೆವು. ಚೆನ್ನಮಣೆ, ಹಾವು-ಏಣಿ ಆಟ, ಕಣ್ಣಾಮುಚ್ಚಾಲೆ ಹೀಗೆ ಅನೇಕ ಆಟಗಳು ಶುರುವಾಗುತ್ತಿತ್ತು. ಮನೆಯಲ್ಲಿ ಹಿರಿಯರು ಗುಡುಗು- ಸಿಡಿಲು ಬಂದಾಗ ಕತ್ತಿ ಅಥವಾ ಕಬ್ಬಿಣದ ವಸ್ತುವನ್ನು ಹೊರಗೆಸೆಯುತ್ತಿದ್ದರು. ಇದು ಮನೆಯವರಿಗೆ ಯಾವುದೇ ಅಪಾಯವಾಗದಂತೆ ಕಾಪಾಡುತ್ತದೆ  ಎಂಬ ನಂಬಿಕೆ.

ಮೊದಲ ಮಳೆಯಲ್ಲಿ ಮಿಂದರೆ ದೇಹವು ಪುಷ್ಟವಾಗಿರುತ್ತದೆ ಎಂದು ನಮ್ಮ ಮಕ್ಕಳ ನಂಬಿಕೆಯಾದರೆ, ಜ್ವರದ ಋತು ಆರಂಭವಾದೀತೆಂದು ಹಿರಿಯರ ಆತಂಕ. ಮನೆಯ ಹೆಂಗಸರೆಲ್ಲಾ ಅಡುಗೆ ಮನೆಯಲ್ಲಿ ಕುಳಿತು ಮನೆಗಾಲ ಮುಗಿಯುವವರೆಗೆ ಬೇಕಾಗುವ ತರತರದ ಸಂಡಿಗೆ, ವಿಧ ವಿಧವಾದ ಹಪ್ಪಳ, ಉಪ್ಪಿನಕಾಯಿ, ತಿಂಡಿ ತಿನಿಸುಗಳನ್ನು- ಊರಿನ ಸಂಗತಿಗಳನ್ನು, ಸುಖ ದುಃಖಗಳನ್ನು ಹಂಚುತ್ತಾ, ಜಾನಪದ ಗೀತೆಗಳನ್ನು ಹಾಡುತ್ತಾ ತಯಾರಿಸುತ್ತಿದ್ದರು. ನಾವು ಅವರ ಹರಟೆಗೆ ಕಿವಿ ಕೊಟ್ಟರೆ ಬೆದರಿಸಿ ಓಡಿಸುತ್ತಿದ್ದರು. ಗಂಡಸರೆಲ್ಲ ಗದ್ದೆಯೆಡೆಗೆ ಸಾಗಿ ಉಳುಮೆಗೆ ತಯಾರಿ ನಡೆಸುತ್ತಿದ್ದರು. ನೆಲದಲ್ಲಿ ಹಚ್ಚಹಸುರಿನ ಹುಲ್ಲು ಹಾಗೂ ಬೀಜಗಳು ಮೊಳಕೆ ಬಂದು ಎಲೆಗಳು ಟಿಸಿಲೊಡೆಯುತ್ತಿದ್ದವು. ಕಪ್ಪು- ಕೆಂಪು ಇರುವೆಗಳು, ಸಣ್ಣ ಹುಳು ಹುಪ್ಪಟ್ಟೆಗಳು ಮನೆಯೊಳಗೆ ಆಶ್ರಯ ಪಡೆಯಲು ಹಾತೊರೆಯುತ್ತಿದ್ದವು, ಇನ್ನು ಸ್ವಲ್ಪ ಬೆಳೆದ ಮಕ್ಕಳು ಹಿರಿ ದೊಡ್ದಮ್ಮನೊಂದಿಗೆ ಅಣಬೆಯನ್ನು ಹುಡುಕಿಕೊಂಡು ಹೋಗುತ್ತಿದ್ದರು. ಗುಡುಗು ಬಂದಾಗ ಮೊಟ್ಟೆ ಆಕಾರದ ಅಣಬೆಗಳು ಎಲ್ಲೆಂದರಲ್ಲಿ ಕೊಡೆಯೆತ್ತಿ ನಿಲ್ಲುತ್ತವೆ ಎಂಬುದು ಪ್ರತೀತಿ. ಅಣಬೆಗಳ ಬಗ್ಗೆ ನಮಗಿರುವ ಜ್ಞಾನ ಅಷ್ಟಕಷ್ಟೇ. ಆದರೆ ಅದರ ತಿನಿಸಿಗಳು ಮಾತ್ರ ರುಚಿಯಾಗಿರುತಿತ್ತು.

ಅಂದಿನ ದಿನ ಸಂಜೆಯಾಗುತ್ತಲೇ ಕಂಚಿನ ಹಂಡದಲ್ಲಿ ತುಂಬಾ ಶ್ರದ್ದೆಯಿಂದ ಅಜ್ಜಿ ನೀರು ಕಾಯಿಸುತ್ತಿದ್ದರು. ನಡು ನಡುವೆ ಬೂತಾಯಿ ಮೀನನ್ನು ಬೆಂಕಿಯೊಳಗೆ ಎಸದು ಉಪ್ಪು ಹಾಕಿ ಸುಟ್ಟು ಕೊಡುತ್ತಿದ್ದರು. ಅದು ರುಚಿ ಹಾಗೂ ಪೌಷ್ಟಿಕರವಾದ ತಿನಿಸು. ಮಕ್ಕಳೆಲ್ಲಾ ದೊಡ್ಡ ಬಚ್ಚಲ ಮನೆಯಲ್ಲಿ ಮೂರು-ನಾಲ್ಕರ ಗುಂಪಾಗಿ ಸರತಿಯಲ್ಲಿ ನಿಂತು ಬಿಸಿ ನೀರಿನ ಹಿತವಾದ ಸ್ನಾನಮುಗಿಸಿ ಬರಬೇಕಿತ್ತು. ಅಲ್ಲಿ ಬಡವರು ಬಲ್ಲಿದರೆಂದು ಭೇಧವಿಲ್ಲದೆ ಎಲ್ಲರೂ ಒಟ್ಟಾಗಿ ಒಂದೇ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದರು. ಈಗಿನ ಮಕ್ಕಳಿಗೆ ಶವರ್, ಬಾಡಿ ವಾಶ್, ಟರ್ಕಿ ಟವೆಲ್  ಬೇಕು; ನಮಗೆ ತೆಳ್ಳಗಿನ ವೆಷ್ಟಿಯೊಂದೆ ಸಿಗುತಿತ್ತು ಮೈ ಉಜ್ಜಿ ಕೊಳ್ಳಲು. ಆಮೇಲೆ ಅಜ್ಜಿ ತನ್ನ ಕಪಾಟನ್ನು ತೆಗೆದು ಕಿವಿಯ ಕೆಳಗೆ, ಮೂಗು ಎದೆಯ ಮೇಲೆ ಅದೇನೇನೋ ತುಪ್ಪಗಳನ್ನು ಹಾಗೂ ಕುಡಿಯಲು ಅರಿಷ್ಟಗಳನ್ನು ಕೊಡುತ್ತಿದ್ದಳು. ಹಾಗಾಗಿ ನಾವು ಪೀಡಿಯಾತ್ರಿಶಿಯನ್ನ್ ರನ್ನು ಕಂಡೇ ಗೊತ್ತಿರಲಿಲ್ಲ. ಊರಿಗೊಂದೇ ಅಲೋಪತಿ ಡಾಕ್ಟರ್, ಮೂರೂ ನಾಲ್ಕು ವೈದ್ಯರು ಹಾಗೂ ಉಳಿದವರೆಲ್ಲಾ ನಾಟಿ ವೈದ್ಯರು. ಆದರೆ ನಮ್ಮ ದೌರ್ಭಾಗ್ಯವೆಂದರೆ ಅಜ್ಜಿ ಅಜ್ಜಂದಿರು ತಾವು ಇಹ ಯಾತ್ರೆಯನ್ನು ಮುಗಿಸುವಾಗ ತಮ್ಮೊಂದಿಗೆ ಗಿಡ ಮೂಲಿಕೆಗಳ ಅಮೂಲ್ಯವಾದ ಜ್ಞಾನವನ್ನು ಕೊಂಡು ಹೋದರು.

ಅವರಿದ್ದಾಗ ನಮಗೆ ಅವರ ಅಮೂಲ್ಯವಾದ ಜ್ಞಾನದ ಅರಿವಿರಲಿಲ್ಲ. ನಮ್ಮ ಸಂಸ್ಕೃತಿಯ ಬಗ್ಗೆ ಒಂದು ರೀತಿಯ ತಾತ್ಸಾರ. ಇಂದು ಗೋಧಿ ಹಿಟ್ಟು, ತೆಂಗಿನ ಎಣ್ಣೆಯಿಂದ ಹಿಡಿದು ಔಷಧಗಳು ಕೂಡ ಆರ್ಗಾನಿಕ್ ಅಥವಾ ಹರ್ಬಲ್ ಹೆಸರಿನಲ್ಲಿ ಹೆಚ್ಚು ದುಡ್ಡನ್ನು ತೆತ್ತು ತಂದು ತಿನ್ನುತೇವೆ, ಇದು ಮನುಜ ಸಹಜವಾದ ಪ್ರವೃತ್ತಿ. ಯಾವಾಗಲೂ ಹೊಸದನ್ನು ಕಂಡು ಕೊಳ್ಳಬೇಕು, ಹೊಸತನ್ನು ಸೃಷ್ಟಿಸಬೇಕು ಎಂಬ ತುಡಿತ. ಅದರ ಪರಿಣಾಮ ತಿಳಿದು ಕೊಳ್ಳಲು ದಶಕಗಳೇ ಹಿಡಿದು ಹೋಗುತ್ತವೆ.
ಇದರ ನಡುವೆ ನನಗೆ ಬಚ್ಚಿಟ್ಟು, ಮನೆಯ ಮೂಲೆಯಲ್ಲಿ ಆಗಸವನ್ನು ನನ್ನ ಗೆಳೆಯನೊಂದಿಗೆ ದಿಟ್ಟಿಸುವುದು ಒಂದು ಹವ್ಯಾಸವಾಗಿತ್ತು. ವಿವಿಧ ಬಣ್ಣದ ಮೋಡಗಳು ಹತ್ತಿಯ ತುಂಡುಗಳಂತೆ  ಗಾಳಿಯಲ್ಲಿ ತೇಲುತ್ತಾ, ವಿವಿಧ ಆಕಾರಗಳನ್ನು ಪಡೆದುಕೊಳ್ಳುತ್ತಾ ಸಾಗುವು ಪರಿಯನ್ನು ನೋಡಿ ರೋಮಾಂಚನಗೊಳ್ಳುತ್ತಿದ್ದೆವು. ನಡುವೆ ಬರುವ ಸುಳಿ ಮಿಂಚು ಬೆಳ್ಳಿ ಬಣ್ಣದ ಮರದ ಬೇರುಗಳಂತೆ ಕಾರ್ಮೋಡಗಳ ಎಡೆಯಲ್ಲಿ ಹರಡುವುದನ್ನು ನೋಡುವುದೇ ಒಂದು ಸೊಗಸಾದ ಅನುಭವವಾಗಿತ್ತು. ಪ್ರಥಮ ಮಳೆಯ ಒದ್ದೆಯಾದ ಮಣ್ಣಿನ ಸೌಗಂಧವನ್ನು ಸವಿಯದವರು ಯಾರೂ ಇರಲಿಕ್ಕಿಲ್ಲ್ಲ. ಆಗ ನಾನವನಲ್ಲಿ ಹೇಳುತ್ತಿದ್ದೆ ‘ವರ್ಷ ಪೂರ್ತಿ ಹೀಗೆ ಮಳೆ ಬರುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಅಲ್ಲವೇ ಎಂದು’.

 ಇಂದು ನಾನಿರುವ ಊರಿನಲ್ಲಿ ನಿತ್ಯವೂ ಮಳೆಯಾಗುತ್ತದೆ. ಆದರೆ ಆ ರೋಮಾಂಚಕಾರಿ ಅಂಶಗಳೆಲ್ಲ ಮರೆಯಾಗಿವೆ. ಎಲ್ಲೆಲ್ಲೂ ಕಾಂಕ್ರೀಟ್ ರಸ್ತೆ, ಚರಂಡಿಗಳಿವೆ. ಮಳೆ ಬರುತ್ತದೆ ಆದರೆ ನೀರು ಎಲ್ಲಿಂದ ಹರಿದು ಹೋಗುತ್ತದೆಯೋ ತಿಳಿಯುತ್ತಿಲ್ಲ. ಕಾಲೇಜ್ ಬಿಟ್ಟರೆ ಅಪಾರ್ಟ್ ಮೆಂಟ್, ಸೆಕ್ಯೂರಿಟಿ ಕಾರಣಗಳಿಂದ ಅರ್ಧದಷ್ಟು ಮಾತ್ರ ತೆರೆಯುವ ಕಿಟಕಿಗಳ ಸುತ್ತಿರುವ ಕಬ್ಬಿಣದ ಸರಳಿನ ನಡುವೆ ಇಂದಿನ ಪೀಳಿಗೆಯ ಮಕ್ಕಳು ಮುಂಗಾರು-ಹಿಂಗಾರಿನ ಮಳೆಯನ್ನು ನೋಡುತ್ತವೆ, ಅದೂ ಕೇಬಲ್ ಟಿವಿ ಕನೆಕ್ಷನ್ ಹೋದಾಗ ಮಾತ್ರ ತಲೆಯೆತ್ತು ನೋಡುತ್ತವೆ. ಅವರಿಗೆ ಅಂತರ್ಜಾಲದ ಮಾಯಾಲೋಕವೇ ನಿಜವಾದ ಲೋಕ.  ಎಲ್ಲವೂ ಕಾಂಕ್ರೀಟ್ ಮಯ, ನಮ್ಮ ಹೃದಯ ಮನಸ್ಸುಗಳೂ ಸೇರಿ. ಏನೇ ಮಾಡಿದರು ಅದರಲ್ಲೊಂದು ಸ್ವಾರ್ಥವಿರಬೇಕು. ಇಲ್ಲವಂದರೆ ಅವನು ಮೂರ್ಖ. ಜೀವನದ ಪ್ರತಿ ಹೆಜ್ಜೆಯು ಚದುರಂಗಮಯವಾಗಿ ಹೋಗಿದೆ. ನಿಷ್ಕಲ್ಮಶವಾದ ನಗು ಹಾಗೂ ಮನಸ್ಸು ವಿರಳವಾಗಿದೆ. ಇದ್ದವೂ ಕೂಡ ಬೇರೆ ಹಾದಿಯಿಲ್ಲದೆ ಕಲುಷಿತವಾಗಿದೆ.ಪುಕ್ಕಟ್ಟೆ ಸಲಹೆ ಕೊಡುವವರು ಸಹಸ್ರಾರು ಜನರು; ಆದರೆ ನುಡಿದಂತೆ ನಡೆಯುವವರು ಅತಿ ವಿರಳ. ಅಂದು ಇದ್ದವರೆಲ್ಲ ಕಾಲಗರ್ಭದಲ್ಲಿ ಸಾಗಿದರು ನಿಜ; ಆದರೆ ನನಗೆ ಎಲ್ಲಕ್ಕಿಂತ ಹೆಚ್ಚಾಗಿ ಕಳೆದು ಹೋದಂತೆ ಅನಿಸುವುದು ಅಂದಿನ ಮಾನವೀಯ ಮೌಲ್ಯಗಳು.

ಆದರೆ, ನಾ ಸಾಗುವ ಹಾದಿಯಲ್ಲಿ,  ಮುಂಗಾರಿನ ಮೊದಲ ಮಳೆಯಲ್ಲಿ, ಕಾಂಕ್ರೀಟಿನ ಚರಂಡಿಯ ಬದಿಯಲ್ಲಿ ಒಂದು ಚಿಕ್ಕದಾದ ಹಣ್ಣಿನ ಬೀಜವೊಂದು ಮೊಳಕೆಯೊಡೆದು ಗಿಡವಾಗುವ ಸೂಚನೆಯನ್ನು ನೀಡಿ ಮನಸನ್ನು ಮುದಗೊಳಿಸಿದೆ....

Comments

Popular posts from this blog

ಮದುವೆಯಾಗಲಿ ಸರಿ ಹೋಗ್ತಾನೆ ಅಂತಾರಲ್ಲ ಯಾಕೆ?

ನಿಮಗೇನಾದರೂ ಅರ್ಥವಾಯಿತೇ???

ಸಾವಿನರಮನೆಯಲ್ಲಿ