ಕೆಲಸದ ಸ್ಥಳದಲ್ಲಿನ ರಾಜಕೀಯ- Office politics




Office politics:  ಮುಸ್ಸಂಜೆ ಹೊತ್ತಾಗಿತ್ತು, ದೂರದ ಬಾನಲ್ಲಿ ಸೂರ್ಯ  ದಿನದ ಪಯಣ ಮುಗಿಸಿ ತೆರೆ ಎಳೆದು ಸ್ತಮಾನನಾಗುತ್ತಿದ್ದ; ನಿತ್ಯ ಆಫೀಸಿನ ಕಾಯಕವನ್ನು ಮುಗಿಸಿ ಮರಳಿ ಗೂಡಿಗೆ ಸೇರುವ  ನಮ್ಮಂಥ ಸಾಮಾನ್ಯರಂತೆ; ತನ್ನ ಅಂಗಡಿಯ ಬಾಗಿಲು ಮುಚ್ಚಿ ಹೊರಡುವ ಟೀ ಅಂಗಡಿಯ ಸೊಂಪಣ್ಣನಂತೆ. ನಾವಿಬ್ಬರು ಗೆಳೆಯರು ಹೋಟೆಲ್ ಒಂದರಲ್ಲಿ ಕುಳಿತು ಬೆಚ್ಚಗಿನ ಚಹಾ ಸೇವಿಸುತ್ತಿದ್ದೆವು. ಇದ್ದಕಿದ್ದಂತೆ ನಮ್ಮ ಮಾತು ರಾಜಕೀಯದ ಬಗ್ಗೆ ಹಾಗೂ ನಮ್ಮ ಜೀವನದ ಆಗುಹೋಗುಗಳ ಮೇಲೆ, ಅದರ ಪರಿಣಾಮಗಳ ಬಗ್ಗೆ ತಿರುಗಿತ್ತು

ವಿಷಯದ ಚರ್ಚೆ ಬರಲು ಕಾರಣ ಒಬ್ಬ ಸ್ನಾತಕೋತ್ತರ ಪದವಿ ಓದುತ್ತಿದ್ದ ವೈದ್ಯೆಯ ಆತ್ಮಹತ್ಯೆಯ ವರದಿ. ಅವಳು ಹಿರಿಯ ವೈದ್ಯರ ಜಾತಿ ರಾಜಕೀಯದಿಂದ ಬೇಸೆತ್ತು ತನ್ನ ಜೀವವನ್ನು ಬಲಿ ನೀಡಿದ್ದಳು ಎಂದು ಪತ್ರಿಕೆಗಳು ವರದಿ ಮಾಡಿದ್ದವು. ಅದು ಈಗ ತನಿಖೆಯ ವಿಚಾರವಾಗಿದೆ. ಪಾಪ! ಅವಳು ಒಬ್ಬ ವೈದ್ಯೆಯಾಗಲು ಅದು ಎಷ್ಟು ಶ್ರಮ ಪಟ್ಟಿದ್ದಳೋ ಏನೋ? ಅವಳ ಪೋಷಕರ ಬಲಿದಾನ, ಅವಳ ಶಿಕ್ಷಕರ ತ್ಯಾಗ, ಹಾಗೂ ಅವಳ ಹಿತಚಿಂತಕರ ಪ್ರಾರ್ಥನೆ ಅವಳನ್ನು ಸ್ಥಾನಕ್ಕೆ ಕೊಂಡೊಯ್ದಿತ್ತು. 


ಬುದ್ಧಿವಂತ ಹೆಣ್ಣು  ಮಗಳು ರಾಜಕೀಯದ ಬಲಿ ಪಶುವಾಗಿದ್ದರೆ ಅವಳಿಗೆ ಹಲವಾರು ದಾರಿಗಳಿದ್ದವು. ಅವಳು ಅತ್ಯಂತ ಉನ್ನತ ಆದರೆ ಅರ್ಥಹೀನ ಬಲಿದಾನವನ್ನು ನೀಡಿದಳು ಎಂಬ ಸಂಶಯ ಮೂಡುತ್ತದೆ. ಅವಳ ನಡೆ ಸಂಚಲನ ಸೃಷ್ಟಿಸಿತು. ಎಲ್ಲರೂ ಅವಳಿಗೋಸ್ಕರ ಹೋರಾಡಿದರು, ಹೋರಾಡುತ್ತ ಇರುವರು. ಅದರ ಪರಿಣಾಮಕ್ಕಾಗಿ ನಾವು ಇನ್ನು ಅದೆಷ್ಟು ದಿನ ಕಾಯಬೇಕೋ ಗೊತ್ತಿಲ್ಲ.ಆದರೆ ಇಲ್ಲಿ ಮೂಲಭೂತವಾದ ಪ್ರಶ್ನೆಯೊಂದು ಉಳಿಯುತ್ತದೆ. ನಾವು ನಮ್ಮ ಮಕ್ಕಳಿಗೆ ಕೇವಲ ವಿದ್ಯಾಭ್ಯಾಸಕ್ಕಾಗಿ ತಯಾರು ಮಾಡುತ್ತೇವೆ ನಿಜ. ಆದರೆ ನಿಜ ಜೀವನಕ್ಕೆ ತಯಾರು ಮಾಡುತ್ತೇವೆಯೇ

ಮನುಷ್ಯರಿದ್ದಲ್ಲಿ ರಾಜಕಾರಣ ಬಂದೇ ಬರುತ್ತದೆ. ವಿದ್ಯಾಭ್ಯಾಸದ ವಾಣಿಜ್ಯಕರಣದಿಂದ ಒಳ್ಳೆಯ ಪರಿಣಾಮ ಎಷ್ಟಾಗಿದೆಯೋದುಷ್ಪರಿಣಾಮಗಳು ಕೂಡ ಅಷ್ಟೇ ಆಗಿವೆ. ಹಾಗಾಗಿ ಶಾಲಾ ಕಾಲೇಜುಗಳಲ್ಲಿ ಕೂಡ ಕೆಟ್ಟ  ರಾಜಕಾರಣ ಕಾಲಿಟ್ಟಿದೆ.  ಕೆಲವರು ತಮ್ಮ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಭಕ್ಷಕರಾಗುತ್ತಿದ್ದರೆ. ಹಾಗೆಯೇ ಕೆಲಸ ಮಾಡುವ ಸ್ಥಳಗಳಲ್ಲಿ ತಮ್ಮ ದುರುದ್ದೇಶಗಳನ್ನು ಈಡೇರಿಸಲು ಅನೇಕ ತರದ ಗುಂಪುಗಾರಿಕೆ, ತಂತ್ರ-ಪ್ರತಿತಂತ್ರ, ತಾವು ಮೇಲು ಇತರರು ಕೀಳು ಎಂದು ಸಾಧಿಸಿ ವಿಕೃತ ಆನಂದ ಪಡುವುದು; ಪ್ರತಿಷ್ಠಿತ ಹುದ್ದೆ,  ಪ್ರತಿಷ್ಠೆಗಾಗಿ ಲಾಬಿ ಸೃಷ್ಟಿಸುವುದು, ತನ್ನ ಮಾತನ್ನು ಕೇಳದವರನ್ನು ಅಥವಾ ತಮ್ಮ ಸಿದ್ಧಾಂತಗಳನ್ನು ಒಪ್ಪದವರನ್ನು ಹೇಗಾದರೂ ಮಾಡಿ ಕುತಂತ್ರ ಹೆಣೆದು, ತುಳಿದು, ಕುಣಿದು ಕುಪ್ಪಳಿಸುವುದು; ಅವರ ನಿಜಿ ಜೀವನದ ರಹಸ್ಯಗಳನ್ನು ತಿಳಿಯಲು ತಮ್ಮ ಬಂಟರೆನಿಸಿಕೊಂಡವರನ್ನು ಬಿಟ್ಟು ಹೇಸಿಗೆ ಮೂಡುವಷ್ಟು ಗೂಢಚಾರಿಕೆ ನಡೆಸುವುದು,  ಹೀಗೆ ಒಂದೇ, ಎರಡೇ . ಹೇಳುತ್ತಾ ಹೋದರೆ ಒಂದು ಪುಸ್ತಕವನ್ನೇ ಬರೆಯಬಹುದು. ಇದನ್ನು ನೋಡಿ ವೃತ್ತಿಪರ ರಾಜಕಾರಣಿಗಳು ಕೂಡ ಬೆಕ್ಕಸ ಬೆರಗಾಗಬಹುದು. 

ಇಂತಹ ವಿದ್ಯಮಾನಕ್ಕೆ ಕಾರಣ ಹೊಣೆಗಾರಿಕೆಯ ಕೊರತೆ. ನಾವು ಏನನ್ನಾದರೂ ಮಾಡಿ ಯಾವುದೇ ಪರಿಣಾಮಗಳನ್ನು ಎದುರಿಸದೆ ಸುಲಭವಾಗಿ ವ್ಯವಸ್ಥೆಯನ್ನು ತಿರುಚಬಹುದು ಎಂಬ ಹುಂಬು ಧೈರ್ಯ. ಆದರೆ ಇಲ್ಲಿ ವ್ಯತ್ಯಯವಾಗುವ ಸಮಯ ಹಾಗೂ ಶಕ್ತಿಯನ್ನು ಸರಿಯಾದ ದಿಶೆಯತ್ತ ಸಾಗಿಸಿದರೆ ಅತ್ಯಂತ ಸಮರ್ಥ ವ್ಯಕ್ತಿಗಳು ನಿರ್ಮಾಣವಾಗುತ್ತಾರೆ. ಸ್ವಾಮಿ ವಿವೇಕಾನಂದರು ಇದನ್ನೇ ಅಲ್ಲವೇ ಹೇಳಿದ್ದು? ಇಂತಹ  ವಿಷಭರಿತ   ವ್ಯವಸ್ಥೆಯನ್ನು  ಸಮರ್ಥವಾಗಿ ಹೇಗೆ ಎದುರಿಸುವುದು ಎಂದು ಯಾವ ಪಾಠಶಾಲೆಯು ಹೇಳಿಕೊಡುವುದಿಲ್ಲ. ಆದರೆ ಇದು ನಮ್ಮ ಭವಿಷ್ಯದ ಪೀಳಿಗೆಯನ್ನು ನಿಜ ಜೀವನದ ಸವಾಲುಗಳನ್ನು ಜಯಿಸಲು, ಮಾನಸಿಕ ಕ್ಷೋಭೆಗಳನ್ನು ನಿಭಾಯಿಸಲು ಬೇಕಾದ ವ್ಯವಸ್ಥೆಯನ್ನು ಹುಟ್ಟುಹಾಕಬೇಕಾದ  ತುರ್ತು ಅಗತ್ಯವಿದೆ.


ಯಾಕೋ ರಾಜಕೀಯವೆಂಬುದು ನಮಗೆ ಅಸಡ್ಡೆಯ ವಿಚಾರ. ಅದರಲ್ಲಿ ಕೈ ಹಾಕಿದರೆ ಕೊಳಚೆಗೆ ಕೈ ಹಾಕಿದಂತೆ ಅಂದು ನಮ್ಮ ಭಾವನೆ. ಆದರೆ ಅಂದು ಮಾತ್ರ ಅದೇಕೋ ವಿಚಾರ ಮಂಥನ ತುಸು ಗಂಭೀರವೇ ಆಗಿ ಬಿಟ್ಟಿತ್ತು. ಅದರ ಬಗ್ಗೆ ಅಲ್ಪ ಸ್ವಲ್ಪವಾದರೂ ತಿಳಿದುಕೊಳ್ಳಬೇಕೆಂದು ಗೂಗಲ್ ಮಹಾರಾಜರಿಗೆ ಕೇಳಿದೆವು. ಅಲ್ಲಿ ಕಂಡಂಥ ವಿಚಾರ ನಮ್ಮನ್ನು ದಂಗಾಗಿಸಿಬಿಟ್ಟಿತ್ತು.

ಲೋಕದ ರಾಜಕೀಯ ನಮ್ಮ ಮೇಲೆ ಸ್ಥೂಲವಾಗಿ, ಅರೆ ಸೂಕ್ಷ್ಮ  ಮತ್ತು ಸೂಕ್ಷ್ಮವಾಗಿ ಪರಿಣಾಮ ಬೀರುತ್ತದೆಂದು - What is politics? The Open University- ಹೇಳುತ್ತದೆ. ಉದಾಹರಣೆಗೆ- ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಘಟನೆಗಳಾದ - ಕಂಪ್ಯೂಟರ್ ಹಾಗೂ ಇಂಟರ್ನೆಟ್ ಕ್ರಾಂತಿ, ನಡೆದಿರುವ ನಡೆಯುತ್ತಿರುವ ರಾಜಕೀಯ ಪ್ರೇರಿತ ಯುದ್ಧಗಳು,ಜಾಗತಿಕ ತಾಪಮಾನ ಏರಿಕೆ- ಇವು  ಜಗತ್ತಿನ ಎಲ್ಲ ನಾಗರೀಕರ  ಬಾಳನ್ನು ತಟ್ಟಿ ಹಲವು ಬದಲಾವಣೆಗಳನ್ನು ತಂದಿವೆ-ತರುತ್ತಲಿದೆ. ಹಾಗೆಯೇ ಆಯಾಯ ದೇಶಗಳಲ್ಲಿ ಆಗುವ ಚುನಾವಣೆಗಳು ಆಯಾಯ ದೇಶದ ಜನರ ಜೀವನದಲ್ಲಿ ಪರಿಣಾಮ ಬೀರುತ್ತವೆ. ನಮ್ಮ ಊರಿನಲ್ಲಿ , ಬೀದಿಯಲ್ಲಿ ಹಾಗೂ ನಮ್ಮ ಕೆಲಸದ ಸ್ಥಳಗಳಲ್ಲಿ ಆಗುವ ರಾಜಕೀಯವು ನಮ್ಮೆಲ್ಲರನ್ನೂ ತಟ್ಟುತ್ತವೆ. ಆದ್ರೆ ನಮ್ಮಂತೆ ಜಗತ್ತಿನ ಬಹತೇಕ ಮಂದಿ ಇದರ ಬಗ್ಗೆ ಗಮನ ಹರಿಸುವುದಿಲ್ಲ. 

"ಮಾಡಿದವನ ಪಾಪ ಆಡಿದವನ ಬಾಯಲ್ಲಿ" ಎಂಬ ಉದಾಹರಣೆಯನ್ನು ನೀಡಿ ಮಕ್ಕಳನ್ನು ಪೋಷಕರು ಈ ವಿಚಾರದಿಂದ ದೂರವಿಡುತ್ತಾರೆ. ಇದರ ಪರಿಣಾಮ ಹೆಚ್ಚಿನವರು ರಾಜಕೀಯದಂತ ಅತಿ ಸೂಕ್ಷ್ಮ, ಸಂವೇದನಶೀಲ ಹಾಗೂ ದೂರಗಾಮಿ ಪರಿಣಾಮವುಳ್ಳ ವಿಚಾರದಿಂದ ದೂರ ಉಳಿಯುವುದು ದುರದೃಷ್ಟಕರ ವಿಷಯ. ಈ ರಾಜಕೀಯ ಎಂದರೇನು? ಇದಕ್ಕೆ ಪಂಡಿತರಲ್ಲಿಯೇ ಭಿನ್ನಮತವಿದೆ. ನಾವು ರಾಜಕಾರಣವನ್ನು ಗ್ರಹಿಸುವ ಪರಿಗೆ  ಈ ಕೆಳಗಿನ ಮಾತುಗಳು ಕನ್ನಡಿ ಹಿಡಿಯುತ್ತವೆ.

Ernest Benn- ‘politics is the art of looking for trouble, finding it whether it exists or not, diagnosing it incorrectly and applying the wrong remedy.’ 

Economist Milton Friedman- ‘If you put the federal government in charge of the Sahara Desert, in five years there’d be a shortage of sand.’


ರಾಜಕೀಯವು ಅಷ್ಟು ನಿಕೃಷ್ಟವೇ? ರಾಜಕೀಯದ ವಿಸ್ತಾರ, ಅದರ ಆಳ-ಅಗಲದ ಬಗ್ಗೆ ಭಿನ್ನ ವಿಚಾರಧಾರೆಗಳು ಭಿನ್ನ ದೃಷ್ಟಿಕೋನಗಳನ್ನು ಹೊಂದಿವೆ. ಅದು ಒಂದು ಸಾಗರವಿದ್ದಂತೆ. ಅದರ ಆಳ- ವಿಸ್ತರಗಳ ಬಗ್ಗೆ ತಿಳಿ ಹೇಳಲು ಹೋಗದೆ ರಾಜಕಾರಣದ ಕೆಲವು ಪರಿಕಲ್ಪನೆಗಳ ಬಗ್ಗೆ ಮಾತ್ರ ಕೆಳಗೆ ಪಟ್ಟಿ ಮಾಡಿದ್ದೇನೆ.

.  ರಾಜಕೀಯವು ರಾಜ್ಯಕ್ಕೆ ಸಂಬಂಧ ಪಟ್ಟದ್ದು. ರಾಜಕಾರಣಿಗಳು ಕೇವಲ ತಾತ್ಕಾಲಿಕ ಸಂಚಾಲಕರು ಮಾತ್ರ.

. ರಾಜಕೀಯ ಒಂದು ಪ್ರಕ್ರಿಯೆ. ಅದು ಸಂಘರ್ಷ ಪರಿಹರಿಸುವ ಒಂದು ವಿಧಾನ

. ರಾಜಕಾರಣ ಒಂದು ಸಂಘರ್ಷ

.ರಾಜಕೀಯ ಮತ್ತೊಬ್ಬರ ಮೇಲಿನ ಅಧಿಕಾರ ಅನುಷ್ಠಾನದ ಸಾಧನ

.ರಾಜಕಾರಣ ಒಂದು ಸಾಮಾಜಿಕ ಹಾಗು ಸಾರ್ವಜನಿಕರನ್ನೊಳಗೊಂಡ ಪ್ರಕ್ರಿಯೆ

. ರಾಜಕಾರಣವು ಸನ್ನಿವೇಶ ಮತ್ತು ವ್ಯಾಖ್ಯಾನದ ಮೇಲೆ ಅವಲಂಬಿತವಾಗಿದೆ

. ರಾಜಕಾರಣವು ರಾಜಕೀಯ ಪರಿಕಲ್ಪನೆಗಳ ಅರ್ಥದ ಮೇಲೆ ಹೋರಾಟ.

ಹೀಗೆ ನಮ್ಮ ವಿಚಾರ ಮಂಥನವು ಸಾಗಿ ಕೊನೆಗೆ ನಮ್ಮಂಥ ಸಾಮಾನ್ಯರಿಗೆ ಬದುಕಲು ಬೇಕಾದ ಸ್ಟ್ರೀಟ್ ಪಾಲಿಟಿಕ್ಸ್ ಅಥವಾ ಆಫೀಸ್ ಪಾಲಿಟಿಕ್ಸ್ನತ್ತ ಸರಿಯಿತು. ನಾವು ಆಫೀಸ್ ಪಾಲಿಟಿಕ್ಸ್ ಎಂದು ಟೈಪ್ ಮಾಡಿದ್ದೆವು. ವೆಬ್ ಪೇಜ್ನಲ್ಲಿ ತೆರೆದುಕೊಂಡ ವಿಷಯಗಳು ನಮ್ಮ ವೈಚಾರಿಕ ಶೂನ್ಯತೆಯನ್ನು ಬಿಂಬಿಸಿತು.

ಅದರ ಸಾರಾಂಶ ಹೀಗಿತ್ತು -

. ನೀವು ಹೇಗೆ ಆಫೀಸ್ ಪಾಲಿಟಿಕ್ಸ್ ನಿರ್ವಹಿಸುತ್ತೀರಿ? (how to deal with office politics)

. ನೀವು ಹೇಗೆ ಆಫೀಸ್ ಪಾಲಿಟಿಕ್ಸ್ನಲ್ಲಿ ಬದುಕುಳಿಯುತ್ತೀರಿ? (how to survive office politics)

. ನೀವು ಹೇಗೆ ಆಫೀಸ್ ಪಾಲಿಟಿಕ್ಸ್ಅನ್ನು ನಿಮ್ಮ ಅನುಕೂಲತೆಗೆ ಬಳಸಿಕೊಳ್ಳುತ್ತೀರಿ? (how to handle office politics)

ಹೀಗೆ ಒಂದೊಂದೇ ಪುಟಗಳು ಬಿಚ್ಚುತ್ತಾ ಸಾಗಿತ್ತು. ಇದನ್ನು ಕಂಡ ನಮ್ಮ ದೇಹವಿಡೀ ಬೆವರಿನಲ್ಲಿ ತೋಯ್ದು ಚಂಡಿಯಾಗಿತ್ತು. ನೀವು ಬೇಕಾದಲ್ಲಿ ಇದರ ಒಂದೊಂದೇ ಪೇಜ್ ಗೆ ಹೋಗಿ ಒಬ್ಬೊಬ್ಬರು ಕೊಡುವ ಟಿಪ್ಸ್ ಅನ್ನು ಓದಿ ಸುಸ್ತಾಗುವ ಸರದಿ ನಿಮ್ಮದಾಗಬಹುದು. ಏಕೆಂದರೆ ನೀವು ದಿನ ನಿತ್ಯ ಇದರ ಅನುಷ್ಠಾನ ನಿಮ್ಮ ಕಣ್ಣಾರೆ  ಅರಿಯದೆ ಮೂಕಪ್ರೇಕ್ಷಕರಾಗಿ ನೋಡಿರಬಹುದು. ಇಂಥವರೂ ಇದ್ದಾರೆಯೇ ಎಂದು ನಿಮ್ಮನ್ನು ಪ್ರಶ್ನಿಸಿಕೊಂಡಿರಬಹುದು

ಅದಕ್ಕೆ 'ಅರಿವೇ ಗುರು' ಎಂದು ಶಾಸ್ತ್ರದಲ್ಲಿ ಹೇಳಿರುವುದು. ನಾವು ಹೆಚ್ಚಾಗಿ "" ಅನ್ನುವ ವಾದದ ಕಡೆಗೆ ವಾಲುತ್ತೇವೆ. ಆದರೆ ಬುದ್ಧಿವಂತರು ನಿಮ್ಮ ಅಜ್ಞಾನವನ್ನೇ ತಮ್ಮ ಶಕ್ತಿಯನ್ನಾಗಿಸಿ ತಮ್ಮ ಕೂಳನ್ನು ನಿಮಗರಿವಾಗದಂತೆ ನಿಮ್ಮ ಬೆಂಕಿಯಲ್ಲಿಯೇ ಬೇಯಿಸಿಕೊಂಡು ಶಭಾಷಗಿರಿ  ಪಡಕೊಂಡಿರುತ್ತಾರೆ. ನಿಮ್ಮಲ್ಲಿ ಇಲ್ಲದ್ದು ಅವರಲ್ಲಿ ವಿಶೇಷವೇನೋ ಅವರಲ್ಲಿ ಇದೆ ಎಂದು ತೋರಿಸಿ ಕೊಂಡಿರುತ್ತಾರೆ. ಕಾಡಿನಲ್ಲಿ ಬದುಕುವ ಪ್ರಾಣಿಗಿಂತ ಭಿನ್ನವಾಗಿಲ್ಲ ಮನುಜರ ಜೀವನ. ವ್ಯತ್ಯಾಸವಿಷ್ಟೇ, ನಾವು ನಮ್ಮೊಂದಿಗೆ ಕಾಡನ್ನು ನಾಡಿಗೆ ತಂದಿದ್ದೇವೆ

ಸಣ್ಣ ಆದರೆ ಮಹತ್ವದ ವಿಚಾರಗಳನ್ನು ಪೋಷಕರು ಹಾಗೂ ಶಿಕ್ಷಕರೂ ಮಕ್ಕಳಿಗೆ ಚಿಕ್ಕಂದಿನಿಂದಲೇ ಹೇಳಿಕೊಡಬೇಕು. ಇಲ್ಲದಿದ್ದರೆ ಅಮಾಯಕರು ಸದಾ ಶೋಷಣೆಗೊಳಗಾಗುತ್ತಾರೆ. ಆದರೆ ಒಂದಲ್ಲದಿರೆ ಇನ್ನೊಂದು ದಿನ ಎಲ್ಲರೂ ಮಣ್ಣಾಗಬೇಕು ಎಂಬುದು ಕೂಡ ಅಷ್ಟೇ ದೊಡ್ಡ ಸತ್ಯ. ಅದಕ್ಕೆ ಪುರಂದರ ದಾಸರ " ಬೇವು ಬೆಲ್ಲದೊಂದಿಲೇನು ಫಲ ?" ಎಂಬ ಸೊಗಸಾದ  ಪದ್ಯವನ್ನು ರಚಿಸಿದ್ದಾರೆ . https://www.youtube.com/watch?v=D4XNZcMNxcc ಲಿಂಕಿನಲ್ಲಿ ನೀವು ಇಷ್ಟವಿದ್ದರೆ ಕೇಳಬಹುದು.

ಅಲ್ಲಿದ್ದ ಸಾರಾಂಶವನ್ನು ಓದಿ ಅಂದು ನಮಗೆ  ಅನಿಸಿದ್ದೇನೆಂದರೆ -  ನಮ್ಮ  ಶೈಕ್ಷಣಿಕ ವ್ಯವಸ್ಥೆ  ನಿಜಕ್ಕೂ ಅಪ್ರಸ್ತುತಕರವಾದ ವಿಷಯಗಳನ್ನೇ ಕಲಿಸುವುದು. ಪೊಲಿಟಿಕಲ್ ಸೈನ್ಸ್, ಎಕನಾಮಿಕ್ಸ್, ಅಕೌಂಟಿಂಗ್, ಸೋಶಿಯಲ್ ಸೈನ್ಸ್, ಬಿಸಿನೆಸ್ ಮ್ಯಾನೇಜ್ಮೆಂಟ್, ಭದ್ರತೆ ಮತ್ತು ಕಣ್ಗಾವಲು, ಸಮೂಹ ಮಾಧ್ಯಮ ಮತ್ತು ಸಂವಹನ ಮುಂತಾದ ವಿಷಯಗಳನ್ನು ಎಲ್ಲಾ ವೃತ್ತಿಪರ ಕೋಲೇಜುಗಳಲ್ಲಿ ಕಡ್ಡಾಯವಾಗಿ ಕಲಿಸಲೇಬೇಕೆಂಬ ವಿಚಾರದಲ್ಲಿ ಬಹುತೇಕ ಎಲ್ಲರ ಸಹಮತವಿರಬಹುದು. ಏಕೆಂದರೆ ಉದಾಹರಣೆಗೆ, ನಿಮಗೆ ತಾಂತ್ರಿಕ ವಿಷಯಗಳು, ರೋಗಿಯನ್ನು ಗುಣಪಡಿಸಲು ಬೇಕಾದ ವಿಷಯಗಳ ಅರಿವು ಮಾತ್ರ ನಿಮ್ಮ ವೃತ್ತಿಪರ ಜೀವನದಲ್ಲಿ ಮುಖ್ಯವಲ್ಲ. ನೀವು ಜೀವನದಲ್ಲಿ ಮುಂದೆ ಬರಲು ನಿಮ್ಮ ತಾಂತ್ರಿಕ ಕುಶಲತೆಯೊಂದೇ ಮುಖ್ಯವಲ್ಲ, ಬದಲಾಗಿ ಮೇಲಿನ ವಿಷಯಗಳು ಕೂಡ ಅಷ್ಟೇ ಮುಖ್ಯ. ಬರಹ, ಸಂವಹನ ಕಲೆಗಳ ಜೊತೆಗೆ ನಟನೆ, ನಿರ್ದೇಶನ ಮತ್ತು ನಾಟಕ ಕಲೆಗಳನ್ನೂ ಕರಗತ ಮಾಡಿಕೊಳ್ಳುವಂತೆ ತಾಕೀತು ಮಾಡತಕ್ಕದ್ದು. ತಂದೆ ತಾಯಂದಿರು, ಶಿಕ್ಷಕ ವೃಂದದವರು ಈ ಮೇಲಿನ ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳ ತಕ್ಕದ್ದು.

ನನ್ನ ವಿಚಾರವೇನೆಂದರೆ ವಿಷಯಗಳು ಯಾವುವೂ ಕೀಳು ಮೇಲೆಂದಲ್ಲ. ಇವು ಯಾವುದನ್ನೂ ನಾವು ಸಂಕುಚಿತ ದೃಷ್ಟಿಯಿಂದ ನೋಡತಕ್ಕುದ್ದಲ್ಲ. ಆದರೆ ಇವೆಲ್ಲವುದರ ಏಕೀಕರಣ ಒಂದು ಸಮಾಜಮುಖಿ ಸಮಗ್ರ ವ್ಯಕ್ತಿತ್ವವನ್ನು ಸೃಷ್ಟಿಸುತ್ತದೆ. ಉದಾಹರಣೆಗೆ ವೈದ್ಯಕೀಯ ವಿಷಯ ಕಲಿಯುವ ಮಕ್ಕಳಿಗೆ ಇವು ಯಾವುದೇ ವಿಚಾರ ಹೇಳಿಕೊಡಲಾಗುವುದಿಲ್ಲ. ಆದರೆ ಅವರು ವೃತ್ತಿಯಲ್ಲಿ  ಬದುಕಬೇಕಾದರೆ ನಾನು ಉದಾಹರಿಸಿದ ಮೇಲಿನ ವಿಷಯಗಳ ಜ್ಞಾನ ಉಳ್ಳವರು ಮುಂದುವರಿಯುತ್ತಾರೆ. ಅದು ಅವರ ಶೈಕ್ಷಣಿಕ ಪಠ್ಯಕ್ರಮದಲ್ಲಿ ಇರುವುದಿಲ್ಲ ಆದರೆ ಕಲೆಗಳು ನಿತ್ಯ ಬದಲಾಗುತ್ತಿರುವ   ಸ್ಪರ್ಧಾತ್ಮಕ ಪ್ರಪಂಚದಲ್ಲಿ ಸ್ಪರ್ಧಾತ್ಮಕ ಧೋರಣೆಯನ್ನು ಉಳಿಸಿಕೊಂಡು ಬಾಳಲು ಬಹುಮುಖ್ಯ ಕಲೆಗಳಾಗಿವೆ.

ಕೇವಲ ೨೪ ಘಂಟೆ ಓದಿದರೆ ಸಾಕು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿ ಬಂದರೆ ಸಾಕು ಎಂದು ಮಕ್ಕಳಿಗೆ ಸದಾ ಕಿವಿ ಮಾತು ಹೇಳುವ ಹೆತ್ತವರು ಮತ್ತು ಹಿತವರು ಅವರಿಗೆ ಜೀವನದ ಅರ್ಧ ಸತ್ಯವನ್ನು ಮಾತ್ರ ಹೇಳುತ್ತಿದ್ದಾರೆ. ಯಾವುದೇ ಕ್ಷೇತ್ರವಿರಲಿ ಅದರಲ್ಲಿ ಸರ್ವಾಂಗೀಣ ಸಾಮರ್ಥ್ಯವುಳ್ಳವರು ಮಾತ್ರ ಬದುಕಿ ಗೆಲ್ಲಲು ಸಾಧ್ಯ. ಅವರು ಅಲ್ಲಿ ಹೋಗಿ ಹೇಗೋ ಕಲಿತು ಬಿಡುತ್ತಾರೆ ಬಿಡಿ ಅನ್ನುವ ಧೋರಣೆ ವ್ಯಕ್ತಿತ್ವ ನಿರ್ಮಾಣದ ಮಾರ್ಗದಲ್ಲಿ ದೊಡ್ಡ ಭಾದಕ ವಾಗುವ ಸಾಧ್ಯತೆ ಇದೆ. ನೀವು ನಮ್ಮಂತೆ ರಾಜಕೀಯ ರಾಜಕಾರಣದ ಬಗ್ಗೆ ಏನೂ ತಿಳಿಯದವರಾಗಿದ್ದರೆ
https://www.open.edu/openlearn/ocw/mod/oucontent/view.php?printable=1&id=20225 ಲಿಂಕನ್ನು ದಯವಿಟ್ಟು ಓದಿ ನೋಡಿ.

ನಮಸ್ಕಾರ! ಸರ್ವೇಜನಃ ಸುಖಿನೋ ಭವಂತು- ಇದು ಕೂಡ ಪಾಶ್ಚಿಮಾತ್ಯ ರಾಜಕಾರಣದ ಪರಿಕಲ್ಪನೆಗಳಲ್ಲಿ ಒಂದು.




Final word: Opinion on  Office politics  is individual. It has no resemblance to living or dead.

Comments

Popular posts from this blog

ನಿಮಗೇನಾದರೂ ಅರ್ಥವಾಯಿತೇ???

ಸಾವಿನರಮನೆಯಲ್ಲಿ