ಮದುವೆಯಾಗಲಿ ಸರಿ ಹೋಗ್ತಾನೆ ಅಂತಾರಲ್ಲ ಯಾಕೆ?

Marriage, Love, Life, Happiness
Photo courtesy:https://unsplash.com/photos/HgZHtkD_sj4


ಅದು ಆಗ ಹರೆಯದ ವಯಸ್ಸು. ನಾವು ಡಿಗ್ರಿ ಮುಗಿಸಿ ದುಡಿಮೆಯ ಹೊಸ್ತಿಲಲ್ಲಿ ನಿಂತಿದ್ದೆವು. ಆಗ ಎಲ್ಲೆಡೆ ಮದುವೆಯ ಮಾತುಕತೆ ನಡೆಯುತ್ತಿತ್ತು. ಮದುವೆ ಜೀವನವನ್ನು ಬದಲಿಸುತ್ತದೆ ಎಂದು ಎಲ್ಲರೂ ಹೇಳ್ತಾ ಇದ್ದರು. ಆದ್ರೆ ಅದು ಹೇಗೆ ಸಾಧ್ಯ ಅನ್ನೋದು ಅರ್ಥಾನೇ ಆಗ್ತಿರಲಿಲ್ಲ. ನನ್ನ ಅಣ್ಣಂದಿರಿಗೆ, ಅಕ್ಕಂದಿರಿಗೆ, ಗೆಳೆಯ, ಗೆಳೆತಿಯರಿಗೆ ಮದುವೆ ಆಯಿತು. ಎಲ್ಲಾರ ಮದುವೆಗೆ ಹೋಗಿ ಬಂದಾಯ್ತು. ಅಲ್ಲಿನ ಸಂಭ್ರಮ, ಔತಣ, ನಗು, ಅಳು, ವಾದ್ಯ, ಸಪ್ತಪದಿ ... ಹೀಗೆ ಎಲ್ಲವನ್ನು ನೋಡಿದ್ದಾಯ್ತು. ಆದ್ರೆ ಯಾಕೆ ಇಷ್ಟೊಂದು ಆಡಂಬರ, ಚಿಕ್ಕ ವಿಷಯಗಳಿಗೆ ಗಲಾಟೆ, ಮರ್ಯಾದೆ ಪ್ರಶ್ನೆ, ಕೋಪ-ತಾಪ, ಆತ್ಮೀಯತೆ ಎಲ್ಲವನ್ನೂ ನಾನು ನನ್ನ ಪಡ್ಡೆ ಹುಡುಗರ ಸಂಘದವರೊಂದಿಗೆ ನೋಡಿದ್ದೆ. ಯಾಕಪ್ಪ ಇಷ್ಟೊಂದು ಕಷ್ಟ ? ಸುಮ್ಮನೆ, ಯಾವುದೇ ಸದ್ದು ಗದ್ದಲು ಇಲ್ಲದೆ ರಿಜಿಸ್ಟರ್ಡ್ ಮದುವೆಯಗಬಹುದಿತ್ತಲ್ಲ ಎಂಬ ಸಂಶಯ ನಮ್ಮ ಪಡ್ಡೆ ಹುಡುಗರ ಪಾಳೆಯಕ್ಕೆ ಬಂದದ್ದು ಸುಳ್ಳಲ್ಲ. ನಮ್ಮ ಹುಡುಗು ಬುದ್ದಿಗೆ ಜೀವನದ ಅಘಾಧತೆಯ ಅರಿವು ಆ ದಿನಗಳಲ್ಲಿ ಇರಲಿಲ್ಲ. ಆದರೆ ಆ ದಿನಗಳೇ ನಮ್ಮ ಬಾಳಿನ ಅತ್ಯಂತ ಸ್ಮರಣೀಯ ದಿನಗಳಾಗಿ ಉಳಿದಿದ್ದಾವೆ.

ನಮ್ಮ ಪಡ್ಡೆ ಹುಡುಗರ ಸಂಘದವರು ಯಾವುದೇ ಮದುವೆ, ಪೂಜೆ ಅಥವಾ ಸಾರ್ವಜನಿಕವಾದ ಸಮಾರಂಭಗಳಿರಲಿ ಬೇರೆ ಎರಡು ಸಂಘಗಳಿಂದ ದೂರವಿರುತ್ತಿದ್ದೆವು. ಒಂದು,ಇವನು ಯಾರ ಮಗ ಎಂದು ಎಲ್ಲರ ಮದುವೆ ಮಾಡಿಸುವ ಸ್ವಸಹಾಯ ಸಂಘ, ಇನ್ನೊಂದು, ನಾನು ಸಾಯುವ ಮೊದಲು ನಿನ್ನ ಮಾಡುವೆ ನೋಡಿಯೇ ಸಾಯಬೇಕೆಂಬ ಅಜ್ಜಿಯಂದಿರ ಸಂಘ. ನಾವು ಎಲ್ಲೇ ಹೋಗುವುದಿದ್ದರೂ ಇವು ಎರಡು ಸಂಘದ ಸದಸ್ಯರು ಎಲ್ಲಿದ್ದಾರೆ ಎಂದು ಖಾತ್ರಿ ಪಡಿಸಿಕೊಂಡು ಮೈದಾನಕ್ಕೆ ಕಾಲಿಡುತ್ತಿದ್ದೆವು. ಅದೊಂದು ಫುಟ್ಬಾಲ್ ಪಂದ್ಯವಿದ್ದಂತೆ. ಗೋಲಿ, ಮಿಡ್ಫೀಲ್ಡರ್, ಫಾರ್ವರ್ಡ್, ಬ್ಯಾಕ್ವರ್ಡ್ ಹೀಗೆ ಎಲ್ಲ ರೀತಿಯ ಆಟಗಾರರು ಇರುತ್ತಾರೆ. ಬಲೆಗೆ ಬೀಳಿಸಲು ಕಾಯುತ್ತಿರುತಾರೆ. ತಪ್ಪಿಸಿಕೊಂಡವರು ಭಾಗ್ಯವಂತರು, ಸಿಕ್ಕಿ ಬಿದ್ದವರು ದುರ್ಭಾಗ್ಯಶಾಲಿಗಳು ಎಂದು ಬಿದ್ದು ಬಿದ್ದು ನಗುತ್ತಿದೆವು. ವಯಸ್ಸಿಗೆ ಬಂದ ಹುಡುಗಿಯರ ನೋಡಿದರೆ ಒಳಗೆ ಭಯ ಹುಟ್ಟುತ್ತಿತ್ತು. ಇವರಲ್ಲಿ ಯಾರನ್ನಪ್ಪ ನಮ್ಮ ಕುತ್ತಿಗೆಗೆ ಕಟ್ಟುತ್ತಾರೆ ಎಂದು ಹೆದರಿ ಓಡಿ ಹೋಗುತ್ತಿದ್ದೆವು.

ಅದು ಒಂದು ದಿನ ನಮ್ಮ ಆತ್ಮೀಯರ ಮದುವೆ ವಿಷಯ ಪ್ರಸ್ತಾಪವಾಯಿತು, ಅವರ ನಡವಳಿಕೆ, ವ್ಯಕ್ತಿತ್ವದ ಬಗ್ಗೆ ಹಸಿ ಬಿಸಿಯಾದ ವಾಗ್ವಾದ ನಡೆಯುತ್ತಿತ್ತು. ಮನೆಯ ಹಿರಿಯರು ಒಂದೆಡೆ, ಹರೆಯದವರು ಮತ್ತೊಂದೆಡೆ ಹಾಗು ಮಕ್ಕಳು ಇನ್ನೂಂದೆಡೆ ಕುಕ್ಕುರು ಬಡಿದಿದ್ದವು. ”ಅವನೋ  ಸರಿ ಹೋಗಬೇಕಾದರೆ ಮದುವೆ ಮಾಡಿಸಿ, ಅದೊಂದೇ ದಾರಿ, ಸರಿ ಹೋಗ್ತಾನೆ “ ಎಂದು ಮನೆಯ ಹಿರಿಯರು ತೀರ್ಪನ್ನು ಸಾರಿದಾಗ ಇದು ಎಷ್ಟರ ಮಟ್ಟಿಗೆ ಸರಿ ಎಂದು ನೋಡುವ ಕುತೂಹಲ ನಮ್ಮಲ್ಲಿ ಸಹಜವಾಗಿ ಮೂಡಿತು. ಆದರೆ ಒಬ್ಬರ ಜೀವನವನ್ನೇ ಅಧ್ಯಯನ ಮಾಡಿದರೆ ಸರಿ ಆಗಲಾರದು.ಹಾಗಾಗಿ ಸಾಧ್ಯವಾದಷ್ಟು ಹೊಸದಾಗಿ ಮದುವೆ ಆಗುವವರ ಜೀವನವನ್ನು ಗುಪ್ತವಾಗಿ ಅಧ್ಯಯನ ಮಾಡುವ ತೀರ್ಮಾನಕ್ಕೆ ಬಂದಿದ್ದೆವು. ನಮ್ಮೆಲ್ಲರದು ಒಂದೇ ಧ್ಯೇಯ, ನಾವು ಮದುವೆ ಎಂಬ ಬಂಧನಕ್ಕೆ ಬಂದಿಯಾಗುವ ಮುನ್ನ ಜೀವನದಲ್ಲಿ ಸಾಧ್ಯವಾದಷ್ಟು ಸ್ವಾತಂತ್ರ್ಯವನ್ನು ಅನುಭವಿಸಬೇಕು, ಇದು ನಮ್ಮ ದೃಢವಾದ ಪ್ರತಿಜ್ಞೆಯಾಗಿತ್ತು. ಹಾಗಾಗಿ ಮನೆಯಲ್ಲಿ ಒತ್ತಡಕ್ಕೆ ಒಳಗಾಗಿ ಸಾಲಾಗಿ ಮದುವೆಯಾಗಲು ಹೊರಟ ಗಂಡು- ಹೆಣ್ಣುಗಳು ನಮ್ಮ ಅಧ್ಯಯನದ ವಿಷಯವಾಗಿ ಬಿಟ್ಟರು.


ಕೆಲವರು ಪ್ರೀತಿಸಿ ಮದುವೆ ಆದರು, ಇನ್ನು ಕೆಲವರು ಒಬ್ಬರನ್ನು ಪ್ರೀತಿಸಿ ಇನ್ನೊಬ್ಬರನ್ನು ಮದುವೆಯಾದರು, ಕೆಲವರು ಕುಟುಂಬದವರು ನೋಡಿದವರನ್ನು ಮದುವೆಯಾದರು ಮತ್ತೆ ಕೆಲವರು ಮದುವೆ ಮಾಡಿಸುವ ದಲ್ಲಾಳಿಗಳ ಮುಖಾಂತರ ಮದುವೆ ಆದರು. ಕೆಲವರು ವರದಕ್ಷಿಣೆ ಪಡೆದು ಮದುವೆ ಆದರು, ಕೆಲವರು ವರದಕ್ಷಿಣೆ ಇಲ್ಲದೆ ಮದುವೆ ಆದರು, ಇನ್ನೂ ಕೆಲವರು ವಧು ದಕ್ಷಿಣೆ ಕೊಟ್ಟು ಮದುವೆ ಆದರು. ಎಲ್ಲರಲ್ಲೂ ಒಂದು ವಿಷಯದಲ್ಲಿ ಸಮಾನತೆ ಇತ್ತು. ಮದುವೆಯ ಆರಂಭದ ದಿನಗಳಲ್ಲಿ ಹೊಸ ಬಟ್ಟೆಗಳನ್ನು ತೊಟ್ಟು, ಮೈ ತುಂಬಾ ವಿಧ ವಿಧದ ಚಿನ್ನದ ಆಭರಣಗಳನ್ನು ತೊಟ್ಟು, ಹೊಸ ಗಡಿಯಾರ, ಉಂಗುರಗಳನ್ನು ಝಳಪಿಸುತ್ತಾ, ನಸು ನಾಚುತ್ತ ಅಹ್ವಾನಿಸಿದವರ ಮನೆಗೆ ಹೋಗಿ ಭರ್ಜರಿ ಊಟವನ್ನು ಸವಿದು ಮೀಸೆಯನ್ನು ತಿರುವುತ್ತ ನಡೆದಾಡುತ್ತಿದ್ದರು. ದಿನಗಳು ಸಾಗಿದಂತೆ ಅವರಲ್ಲಿ ಸನ್ಮಾನ ಕಾರ್ಯಕ್ಕೆ ಕರೆದರೆಂದರೆ ಒಂದು ಚಡಪಡಿಕೆ ಕಾಣಿಸುತ್ತಿತ್ತು. ಒಲ್ಲೆ ಎನ್ನಲೂ ಸಾಧ್ಯವಾಗದೆ, ತಿನ್ನಲು ಮನಸ್ಸಿಲ್ಲದೆ ಒದ್ದಾಡುತ್ತಿದ್ದರು. ಎಲ್ಲರ ಕಣ್ಣುಗಳೂ ನವ ವಧುವರರ ಮೇಲೆ.


ಆಮೇಲೆ ಆರಂಭವಾಯಿತು ಮಧುಮಾಸದ ವಸಂತ ಕಾಲ. ಕೆಲವರು ದೇಶದ ವಿವಿಧ ರಾಜ್ಯಗಳ ರಮ್ಯ ತಾಣಗಳನ್ನು ಆರಿಸಿಕೊಂಡರು, ಕೆಲವರು ವಿದೇಶಕ್ಕೆ ಹಾರಿದರು, ಇನ್ನು ಕೆಲವರು ತಮ್ಮ ಹಳೆ ಪ್ರಿಯಕರ ಪ್ರಿಯತಮೆಯರು ಹೋಗದ ಜಾಗವನ್ನು ಆರಿಸಿಕೊಂಡರು. ಅದು ಅವರ ಫೇಸ್ಬುಕ್, ಇನ್ಸ್ತಾಗ್ರಾಂ ಮುಂತಾದ ಸಾಮಾಜಿಕ ಜಾಲ ತಾಣಗಳ ಪ್ರೊಫೈಲ್ ಗಳಿಗೆ ಪರ್ವಕಾಲ. “ Feeling blessed with ….”I couldnt have asked for better…” ಎಂಬ ಶೀರ್ಷಿಕೆಗಳು ಸಾಮಾನ್ಯವಾಗಿ ಕಂಡು ಬರುತ್ತಿದ್ದ ಕಾಲ. ಆಮೇಲೆ ಆಫೀಸಿಗೆ ಬಂದು ಅವರು ನೋಡಿದ ಜಾಗ, ಒಟ್ಟಿಗೆ ಕಳೆದ ಆತ್ಮೀಯ ಕ್ಷಣಗಳ ವಿವರಣೆ, ಖರ್ಚಿನ ವಿವರಣೆ, ವಿಮಾನ ನಿಲ್ದಾಣಗಳಲ್ಲಿ ಆದ ಅನುಭವಗಳ ವಿವರಣೆ. ಅವರವರ ತಂದೆ-ತಾಯಿಯಂದಿರು, ಅತ್ತೆ-ಮಾವಂದಿರು, ಗೆಳಯ- ಗೆಳತಿಯರು ಕೊಟ್ಟ ಅಮೂಲ್ಯ ಉಡುಗೊರೆಗಳ ವಿವರಣೆ. ನಮ್ಮ ಸಂಘದವರ ಹೊಟ್ಟೆಯಲ್ಲಿ ಕಿಚ್ಚೆಬ್ಬಿಸಿ ಅವರ ಪ್ರತಿಜ್ಞೆಯನ್ನು ಮುರಿಯುವಂತೆ ಮಾಡಿದ್ದು ಸುಳ್ಳಲ್ಲ.


ಆದರೆ ಇವರೇಕೆ ಇಷ್ಟೊಂದು ವಿವರಣೆಯನ್ನು ನೀಡುತ್ತಿದ್ದಾರೆ? ಇವರು ಹೇಳಿದಲ್ಲಿ ಸತ್ಯವೆಷ್ಟು ಸುಳ್ಳೆಷ್ಟು? ನೈಜತೆ ಎಷ್ಟು ಉತ್ಪ್ರೇಕ್ಷೆ ಎಷ್ಟು ಎಂದು ಸಂದೇಹ ಅಂದೇ ಮನದ ಮೂಲೆಯಲ್ಲಿ ಮೂಡಿತ್ತು. ಕೆಲವು ಮಾಸಗಳು ಉರುಳಿದಂತೆ ಇವರ ದೂರವಾಣಿ ಕರೆಗಳು, ಅಬ್ಬರದ ಮಾತುಗಳು, ಹಾಸ್ಯ ಮಿಶ್ರಿತ ವಿವರಣೆಗಳು ಎಲ್ಲವೂ ಕಡಿಮೆಯಾಗುತ್ತಾ ಸಾಗಿದವು. ಕೇಳಿದರೆ,” ವಾರದ ಉಳಿದ ದಿನಗಳೆಲ್ಲ ತುಂಬಾನೇ ಬ್ಯುಸಿ, ವೀಕೆಂಡ್ನಲ್ಲಿ ದಂಪತಿಗಳಿಗೆ ತೊಂದರೆ ಕೊಡಬಾರದೆಂದು ಸಾಮಾನ್ಯ ಜ್ಞಾನವೂ ಇಳವಾ? ಫೋನ್ ಇಡು. ನಾನು ನಿನಗೆ ಆಮೇಲೆ ಮಾಡುತ್ತೇನೆ.” ಎಂದು ಹೇಳಿದವರೂ ಮಾಸಗಳು ಕಳೆದರೂ ಸುದ್ದಿ ಇರುತ್ತಿರಲಿಲ್ಲ. ನಂತರ ಇನ್ನೊಂದು ಮಾಫಿಯಾದ ವಕ್ರದೃಷ್ಟಿ ದಂಪತಿಗಳತ್ತ ಹಾಯ ತೊಡಗಿತು. “ಇನ್ನೂ ಸಿಹಿ ಸಮಾಚಾರವೇನೂ ಇಲ್ಲವೇ? ನಮ್ಮ ಮಗಳು ಸೊಸೆ ಮದುವೆ ಆಗಿ ಮೂರೇ ತಿಂಗಳಲ್ಲಿ ವಾಂತಿ ಮಾಡಲು ಆರಂಭಿಸಿ ಒಂಭತ್ತನೇ ತಿಂಗಳಲ್ಲಿ ನಮ್ಮ ಕೈಗೆ ಮೊಮ್ಮಗ- ಮೊಮ್ಮಗಳನ್ನು ನೀಡಿದ್ದರು.” ಎಂದು ಅವರು ಬೀಗುತಿದ್ದರೆ “ ಇವರಿಗೇನು ಬಂತು ದಾಡಿ. ನಾವು ಇಷ್ಟು ವರುಷ ಸ್ವಚ್ಚಂದ ಹಕ್ಕಿಗಳಾಗಿ ಹಾರಡ ಬೇಕೆಂದಿದ್ದೇವೆ. ಆಮೇಲೆ ಮಕ್ಕಳು ಮರಿಗಳ ಬಗ್ಗೆ ಆಲೋಚನೆ.” ಎಂದು ಇವರು ನಮ್ಮಲ್ಲಿ ಕೋಪವನ್ನು ತೋಡಿಕೊಳ್ಳುತ್ತಿದ್ದರು.


ಆದರೆ ಇವರಲ್ಲಿ ಯಾರು ಸರಿ? ಯಾರು ತಪ್ಪು ಎನ್ನುವು ನಿರ್ಧಾರಕ್ಕೆ ಬರುವುದೇ ದೊಡ್ಡ ಸವಾಲಾಗಿ ಕಾಣುತ್ತಿತ್ತು. ಕೆಲವು ದಂಪತಿಗಳು ಹಲವಾರು ವರುಷ ಮಕ್ಕಳಾಗಲು ಹೋರಾಡಿ ಅಸಫಲರಾಗಿ ಖಿನ್ನತೆಗೊಳಗಾಗಿ ಬಾಳಿನ ಗುರಿ ಕಳೆದು ಕೊಂಡಿದನ್ನು ಕೇಳಿದ್ದೆವು, ಇನ್ನು ಹಲವರು ಹೋರಾಡಿ ಕೊನೆಗೆ ಮಕ್ಕಳಿಲ್ಲದೆ ದತ್ತು ಪಡೆದು ತಮ್ಮ ಬಾಳಿನಲ್ಲಿ ದಾಂಪತ್ಯವನ್ನು ಮರಳಿ ತಂದುಕೊಂಡದ್ದುಂಟು. ಕೆಲವರು ಹೆಣ್ಣು ಮಗುವಾಯಿತೆಂದು ಮನೆಯನ್ನು ರಣರಂಗವಾಗಿಸಿದ್ದುಂಟು, ಕೆಲವರು ಹೆಣ್ಣು ಮಗುವಿಗಾಗಿ ಹಂಬಲಿಸಿ ಜೀವನ ಪರ್ಯಂತ ಕಣ್ಣೀರು ಹಾಕಿದ್ದುಂಟು, ಉಳಿದವರು ದೇವರು ಕೊಟ್ಟ ವರವನ್ನು ಸಮಚಿತ್ತರಾಗಿ ಸ್ವೀಕರಿಸಿ ಬಾಳಿನ ಅರ್ಥವನ್ನು ಕಂಡುಕೊಂಡಿದ್ದುಂಟು, ಕೆಲವರು ಹತ್ತು ಮಕ್ಕಳಿದ್ದರೂ ಒಬ್ಬಂಟಿಗರಾಗಿ ವೃದ್ದಾಶ್ರಮದಲ್ಲಿ ಅಸುನೀಗಿದ್ದುಂಟು. ಹೇಗೆ ಮದುವೆಯಾದರೂ, ಕೆಲವರು ಕೆಲವೇ ದಿನಗಳಲ್ಲಿ, ಕೆಲವರು ಕೆಲವೇ ವರುಷದಲ್ಲಿ ಬೆರ್ಪಟ್ಟದ್ದು ಕೇಳಿ ಬೇಸರವಾಗುತ್ತಿತ್ತು. ಇನ್ನು ಹಲವರು, ನಮ್ಮ ಭಾವ, ಜೀವನದ ಪ್ರತಿಯ ದೃಷ್ಟಿಕೋಣ, ಹಾಗೂ ಹೊಂದಾಣಿಕೆಯ ಸಾಮರ್ಥ್ಯ ನಮ್ಮ ಜೀವನವನ್ನು ನಿರ್ಧರಿಸುತ್ತದೆ ಎಂದು ಅರ್ಥಮಾಡಿಕೊಳ್ಳದೆ, ಉಳಿದವರ ಮನೆಯಲ್ಲಿ ನಡೆದ ಕದನವನ್ನು ಕಂಡು ಇದ್ದವರಲ್ಲಿ ಆಡಿಕೊಂಡು ಹಂಗಿಸಿ, ಅದನ್ನು ಬೀದಿಗೆ ತಂದು ಕ್ಷಣಿಕ ತೃಪ್ತಿ ಪಟ್ಟದ್ದುಂಟು.


ಅವರನ್ನು ತಡೆಯುವುದು ಅಸಾಧ್ಯ. ಕೆಲವೇ ಕೆಲವು ಸಮಯದಲ್ಲಿ ಅವರ ಕಾಲ ಬುಡದಲ್ಲಿ ಕೊಳೆಯುತ್ತಿದ್ದ ಕುಂಬಳಕಾಯಿ ನಾತ ಬೀರ ತೊಡಗಿತು. ಆಗ ಅವರ ಬಾಯಿಗೆ ಬೀಗ ಜಡೆಯಿತು. ಇನ್ನು ಕೆಲವರೂ ತಮ್ಮ ಬಾಳು ಕೊಳೆತು ನಾರುತ್ತಿದ್ದರೂ ಇನ್ನೊಬ್ಬರ ಬಗ್ಗೆ ಆಡಿಕೊಂಡು ತಮ್ಮೊಳಗಿನ ಕೊರತೆಯನ್ನು ಮುಚ್ಚಿಟ್ಟುಕೊಂಡೆವೆಂದು ಗಹ ಗಹಿಸಿ ನಕ್ಕು, ತಾವೇ ಅಪಹಾಸ್ಯಕ್ಕೆ ಈಡಾಗಿದ್ದು ಕಂಡು ಬೆಅಸರವಾಗುತಿತ್ತು. ಇನ್ನು ಕೆಲವರು ಇದು ನಮಗೆ ಸಂಭವಿಸಲಾರದು, ಪರರಿಗೆ ಮಾತ್ರ ಅನ್ವಯ, ಬಂದವರಿಗೆಲ್ಲ ಜ್ಞಾನದ ಪಾಠವನ್ನು ಹೇಳುತ್ತಾ, ತಮಗೆ ಕಷ್ಟ ಎದುರಾದರೆ ಚಾಪೆ ಕೆಳಗೆ ತೂರಿಯಾದರೂ ಕಾರ್ಯ ಸಾಧಿಸಿ, ಆಮೇಲೆ ಸಂತರಂತೆ ಹಿತ ವಚನಗಳನ್ನು ಪ್ರವಚನ ಮಾಡುತ್ತಾ ಎಲ್ಲೆಡೆ ಬಾಳಲು ಕಲೆತವರು ಎಂದು ಹೆಗ್ಗಳಿಕೆ ಪಡೆದುಕೊಂಡು ಎಲ್ಲೆಡೆ ಓಡಾಡುತ್ತಿದ್ದರು. ಇವರಲ್ಲಿ ಯಾರನ್ನೂ ದೂರಲು ಸಾಧ್ಯವಿಲ್ಲ, ಎಲ್ಲರೂ ಅವರವರ ದೃಷ್ಟಿಕೋನದಲ್ಲಿ ಸರಿಯದವರ. ಮನುಜನ ಜೀವನದ ವೈವಿಧ್ಯತೆಯ ಬಗ್ಗೆ ಕೌತುಕ ಉಂಟಾಗ ತೊಡಗಿತು.


ದಿನಗಳು ಕಳೆದಂತೆ ನಮ್ಮ ಅಧ್ಯಯನದ ಪ್ರಜೆಗಳು ತಿಂಗಳುಗಟ್ಟಲೆ ನಾಪತ್ತೆಯಾದರು, ಅವರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ . ಕೊನೆಗೆ ಬೇಸರ ಮೂಡಿ ಅವರ ಮನೆಗೆ ಮನೆಗೆ ಹೋದಾಗ ತಂದೆ-ತಾಯಂದಿರು ಒಬ್ಬರೇ ಇರುವುದನ್ನು ಕಂಡೆವು. ವಿಚಾರಿಸಿದಾಗ, ಅವರೇ ಹುಡುಕಿ, ಆಡಂಬರದಿಂದ ಬರ ಮಾಡಿಸಿಕೊಂಡ ಸೊಸೆ ಅಳಿಯಂದಿರ ಬಗ್ಗೆ ದೊಡ್ಡ ಕಟುವಾದ ವರದಿಯನ್ನೇ ನೀಡಿದಾಗ ಉಂಟಾದ ಆಶ್ಚರ್ಯ ಆಘಾತದ ಬಗ್ಗೆ ಹೇಳಲು ಪದಗಳೇ ಬರುತ್ತಿರಲಿಲ್ಲ. ಕುಡುಕನಾಗಿದ್ದವರು ಸರಿದಾರಿ ಹಿಡಿದಿದ್ದರು, ಓದಿನಲ್ಲಿ ಹಿಂದಿದ್ದು ಊರೆಲ್ಲ ಹರಾಡುತ್ತಿದ್ದವರು ಇಂದು ಮನೆಯ ಹೊಸ್ತಿಲನ್ನು ದಾಟುತಿರಲಿಲ್ಲ, ಕೆಲಸವಿಲ್ಲದವರು ಕೆಲಸವನ್ನು ಹುಡುಕಿಕೊಂಡು ನಿರಂತರವಾಗಿ ದುಡಿಯುತ್ತಿದ್ದರು, ಅವರು ಅಂದಂತೆ ಸರಿ ದಾರಿ ಹಿಡಿದಿದ್ದರು ನಿಜ. ಆದರೆ ಹೆತ್ತವರಲ್ಲಿ ಮದುವೆಯ ದಿನ ಕಂಡ ಸಂತೋಷ, ಧನ್ಯತಾಭಾವ, ಎಲ್ಲವೂ ಮಾಯವಗಿ ದುಃಖ ಮಡುಗಟ್ಟಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದು ಎಂಥಾ ವಿಪರ್ಯಾಸ.


ಇನ್ನು ಕೆಲವರು ಮನೆಯಲ್ಲಿ ನಡೆಯುವ ನಿತ್ಯ ಕದನವನ್ನು ಕಂಡು ಹೊಸ ಚಟಕ್ಕೆ ದಾಸರಾದರು. ಆದರೆ ಹೆಚ್ಚಿನವರು ಬಾಳಿನ ಇತಿ ಮಿತಿಗಳನ್ನು ಅರೆತು, ಅತಿಯಾದರೆ ಅಮೃತವೂ ವಿಷವೆಂದು ಅರೆತುಕೊಂಡು ಮಿತವಾಗಿ ಬಾಳಲು ಕಲೆತರು. ಬೇಕು ಬೇಕೆಂದು ತಮ್ಮ ಜೀವನವನ್ನು ತಾವೇ ಹಣೆದುಕೊಂಡು. ಕೊನೆಗೆ ಆ ದೇವರನ್ನು, ಹಣೆಬರಹವನ್ನು ನಿಂದಿಸುತ್ತಾ ಬದುಕನ್ನು ಸಾಗಿಸುವುದನ್ನು  ಕಂಡು ಮೂಕರಾಗಿಬಿಟ್ಟೆವು.  ಈ ಸಂಸಾರವೆಂಬ ಬಿರುಗಾಳಿ ನಮ್ಮನ್ನೂ ಹೊರತಾಗಿ ಯಾರನ್ನೂ ಬಿಡದೇ,  ಎಲ್ಲರ ಜೀವನದಲ್ಲಿ ಬೀಸುತ್ತಾ ಸಾಗುತ್ತ, ತಣ್ಣಗಾದಾಗ ತನ್ನ ರುಜುವನ್ನು ತಾನು ಬಂದ ಹಾದಿಯಲ್ಲಿ ಬಿಟ್ಟು ಸಾಗುತ್ತದೆ ಎಂಬ ಕಲ್ಪನೆ ಕೂಡ ಅಂದು ನಮಗಿರಲಿಲ್ಲ. ಆ ಬಿರುಗಾಳಿ ನಿಂತಾಗ ನಮ್ಮ ಉಸಿರೂ ನಿಂತು ಹೋಗುತ್ತದೆ ಎಂಬ ಸತ್ಯವೂ ಗೋಚರಿಸಿರಲಿಲ್ಲ, ಗಾಳಿ-ತಂಗಾಳಿ-ಬಿರುಗಾಳಿ-ನೀರವ ಮೌನ, ಇವುಗಳ ನಡುವೆಯೇ ನಮ್ಮ ಉಸಿರಿನ ಕಲರವ. ಕೊನೆಗೆ ಉಳಿವುದು ಕೇವಲ ಮೌನ.

ಕೊನೆಗೂ ಮನದಲ್ಲಿ ಉಳಿದದ್ದು ಒಂದೇ ಪ್ರಶ್ನೆ “ ಯಾರು ಮದುವೆಯಾದ ಮೇಲೆ ಬದಲಾದರು? ಆ ಬದಲಾವಣೆ ಏಕೆ ಎಲ್ಲರಿಗೂ ಸುಖಾಂತ್ಯವನ್ನು ನೀಡಲಿಲ್ಲ?”.

Comments

Popular posts from this blog

ನಿಮಗೇನಾದರೂ ಅರ್ಥವಾಯಿತೇ???

ಸಾವಿನರಮನೆಯಲ್ಲಿ