Childhood- ಬಾಲ್ಯ ನಮ್ಮೆಲ್ಲರ ಜೀವನದ ಕಾವ್ಯ – ಬಾಲ್ಯದ ನೆನಪನೇರಿ ಒಂದು ಸವಾರಿ (ಭಾಗ -೧)

Childhood memories travel Life Happiness


ನವಜಾತ ಶಿಶುವು ಜನ್ಮಿಸಿದಾಗ ಅಳುತ್ತದೆ. ಆದರೆ ಆ ಅಳು ಹಲವರ ಮೊಗದಲ್ಲಿ ನಗು ಮೂಡಿಸುತ್ತದೆ. ತಾಯಿ, ದಾದಿ, ಪ್ರಸೂತಿ ತಜ್ಞರು, ಅರಿವಳಿಕೆ ತಜ್ಞರ ತಂಡ ಈ ಚಮತ್ಕಾರದ ಪ್ರತ್ಯಕ್ಷದರ್ಶಿಗಳಾಗಿರುತ್ತಾರೆ. ಈಗ ತಂದೆಯನ್ನೂ ಕೂಡ ಕರುಳ ಬಳ್ಳಿಯನ್ನು ಕತ್ತರಿಸಲು ಒಳಗೆ ಬಿಡುತ್ತಾರೆ. ಕೆಲವರು ಈ ವಿಸ್ಮಯಕಾರಿ ದೃಶ್ಯವನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ. ಇದರ ತಪ್ಪು ಒಪ್ಪುಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಆದರೆ ನಾವು ನಿತ್ಯ ಓದುವ ಹೆಣ್ಣು ಭ್ರೂಣಗಳ ಹತ್ಯೆ, ಅನೈತಿಕ ಸಂಭಂಧಗಳಲ್ಲಿ ಜನಿಸಿದ ಹಾಲುಗಲ್ಲದ ಶಿಶುಗಳನ್ನು ತ್ಯಜಿಸಿ ಮಾಯವಾಗುವ ಹೆತ್ತ ಕರುಳು, ಶಿಶುಗಳ ಮಾರಾಟ, ಹೀಗೆ ನಾನಾ ರೀತಿಯ ಕೃತ್ಯಗಳು ನಿತ್ಯ ವಿಶ್ವಾದ್ಯಂತ ನಡೆಯುತ್ತಲೇ ಇರುತ್ತದೆ. ಇದು ನಮಗೆಲ್ಲರಿಗೂ ಕಲಿಸುವ ದೊಡ್ಡ ಪಾಠವೆಂದರೆ - ನಮಗೆ ನಮ್ಮ ಬಾಲ್ಯವನ್ನು ಕೊಟ್ಟು, ಅದನ್ನು ಪೂರ್ಣವಾಗಿ ಅನುಭವಿಸಲು ಸಹಕರಿಸಿದ ಎಲ್ಲಾ ಪಾತ್ರಧಾರಿಗಳಿಗೆ ನಾವು ಸದಾ ಋಣಿಯಾಗಿರಬೇಕು.

ನಮ್ಮ ನೆರಳಾಗಿ ನಮ್ಮನ್ನು ಕಾಪಾಡುವ ತಂದೆ ತಾಯಂದಿರು, ಹತ್ತಿರದ ಸಂಬಂಧಿಗಳು ನಮ್ಮ ವ್ಯಕ್ತಿತ್ವ ವಿಕಸನದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತಾರೆ. ಇದರ ಅರಿವು ನಾವು ನಮ್ಮ ಮಕ್ಕಳನ್ನು ಬೆಳೆಯುವುದನ್ನು ನೋಡಿದಾಗ ಮಾತ್ರ ಅರಿವಾಗುತ್ತದೆ. ನಮಗೆ ನಮ್ಮ ಪ್ರಥಮ ನಗು, ಪ್ರಥಮ ಹೆಜ್ಜೆ, ಪ್ರಥಮ ಓಟ, ಪಾಠ ಯಾವುದೂ ನೆನಪಿರದೆ ಹೋದರೂ ಮನದ ಮೂಲೆಯಲ್ಲಿ ಅದು ಯಾವುದೊ ಕೆಲವು ನೆನಪುಗಳು ಅಚ್ಚಳಿಯದೆ ನಿಂತು ಬಿಡುತ್ತವೆ. ನನ್ನ ಮನದಲ್ಲಿ ಉಳಿದ ಎರಡು ಪ್ರಥಮ ಯಾನ, ಒಂದು ಎಪ್ಪತ್ತರ ದಶಕದ ಧಾರವಾಡದ ಯಾನದ ಸೌಂದರ್ಯದ ಅಚ್ಚಳಿಯದ ಅಸ್ಪಷ್ಟ ನೆನಪುಗಳು ಹಾಗೂ ಇನ್ನೊಂದು ವಿದೇಶಕ್ಕೆ ಹೊರಟ ಪ್ರಥಮ ವಿಮಾನ ಯಾನ.

ಆಗ ಮಂಗಳೂರಿನಿಂದ ಧಾರವಾಡಕ್ಕೆ ಕೆಲವೇ ಕೆಲವು ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಇದ್ದವು. ನನ್ನ ವಯಸ್ಸು ನನಗೆ ನೆನಪಿಲ್ಲ. ನನಗೆ ನೆನಪಿರುವುದು ಹಸಿರು ಬಣ್ಣದ ಪೈಂಟ್ ಹೊಡೆದ ಆ ಬಸ್ಸುಗಳ ಒಳಾಂಗಣ, ಹಸಿರು ಬಣ್ಣದ ಸಾಧಾರಣ ಸೀಟುಗಳು. ನಾನು ಅಮ್ಮನ ಬೆಚ್ಚಗಿನ ಒಡಲೊಳಗೆ ಸುರುಳಿ ಮಲಗುವ ಹುನ್ನಾರದಲ್ಲಿ ಇದ್ದೆ. ಅಮ್ಮನಿಗೆ ಅದು ಎಷ್ಟು ಕಷ್ಟವಗುತಿತ್ತೋ ನಾನರಿಯೆ.ಆಗ ಬಸ್ಸುಗಳಲ್ಲಿ ಕುಳಿತು ದೂರದ ಊರಿಗೆ ಪ್ರಯಾಣ ಮಾಡುವುದೇ ಒಂದು ರೋಮಾಂಚಕ ಅನುಭವ ಆಗಿತ್ತು. ಈಗಿನ ಐಶರಾಮಿ ಬಸ್ಸುಗಳ ಸೌಕರ್ಯ ಅಂದು ಇರಲಿಲ್ಲ. ಬಸ್ಸುಗಳಲ್ಲಿ ಪಯಣಿಸುವುದೆಂದರೆ ಇಂದಿನ ವಿಮಾನದಲ್ಲಿ ಪಯಣಿಸುವಷ್ಟೇ ಗೌರವ ಹಾಗೂ ದುಃಖದ ವಿಷಯವಾಗಿತ್ತು. ನಾವು ಊರಿಗೆ ಬಂದು ವಾಪಸ್ಸಾಗುವಾಗ ಸಂಭಂದಿಕರ ದಂಡೇ ಬಸ್ಸು ನಿಲ್ದಾಣದಲ್ಲಿ ಕೂಡಿರುತ್ತಿದ್ದರು. ಇನ್ನೊಮ್ಮೆ ಹಿಂತಿರುಗುವುದು ಎಂತೋ ಏನೋ. ಮುಂದಿನ ಸಲ ಊರಿನಲ್ಲಿ ಏನು ಬದಲಾವಣೆ ಆಗುವುದೋ ಏನೋ? ಎಂಬ ಅಳುಕು ಎಲ್ಲರ ಮನದಲ್ಲಿ ಅಡಗಿರುತಿತ್ತು. ಅಂದಿನ ಕಾಲದ ಲಗೇಜ್ ಬ್ಯಾಗ್ಗಳೆಂದರೆ ಕಬ್ಬಿಣದ ಟ್ರಂಕ್ ಗಳು. ಅವು ಒಂದು ಮಣ ಭಾರ, ಆದರೆ ಯಾರೂ ಅದನ್ನು ತೂಕ ಮಾಡಿ ಅದಕ್ಕೆ ಹಣ ತೆಗೆದು ಕೊಳ್ಳುತಿರಲಿಲ್ಲ. ಅದರೊಂದಿಗೆ ಎಲ್ಲಾ ಆಪ್ತರು ಕೊಡುವ ನೆನಪಿನ ಕಾಣಿಕೆಗಳು ಅವುಗಳ ಭಾರವನ್ನು ಹೆಚ್ಚಾಗಿಸುತ್ತಿದ್ದವು. ಅದನ್ನು ಬಸ್ಸಿನ ಟಾಪಿನಮೇಲೆ ಹೊತ್ತೊಯಲು ಕೂಲಿ ಆಳುಗಳ ದಂಡೇ ಇದ್ದರು. 

ಈ ಸಾಮಾನು ಸರಂಜಾಮುಗಳು ಅವರ ಜೀವನಕ್ಕೊಂದು ದಾರಿ ಮಾಡಿತ್ತು . ಆದರೆ ಅವರಾರಿಗೂ ನಿಮಗೆ ವಿಮಾನ ನಿಲ್ದಾಣದಲ್ಲಿ ಸಿಗುವ ಅಚ್ಚು ಕಟ್ಟಾದ, ವಿವಿಧ ಶೈಲಿಗಳಲ್ಲಿ ಇಂಗ್ಲಿಷ್ ಮಾತನ್ನಾಡುವ ವೈಮಾನಿಕ ಸಂಸ್ಥೆಯ ಅಧಿಕಾರಿಗಳು, ಪರಿಚಾರಿಕೆಯರ ನಯ ನಾಜೂಕತೆಯ ನಾಟಕೀಯ ವ್ಯವಹಾರದ ಬಗ್ಗೆ ಅರಿವಿರಲಿಲ್ಲ. ಆದರೆ ಮಾನವೀಯತೆಯ ಹಾಗೂ ನಿಷ್ಕಲ್ಮಶ ಪ್ರೇಮದ ಅರಿವಿತ್ತು. ಅವರೆಂದಿಗೂ ಪಯಣಿಗರನ್ನು ದೋಚುತ್ತಿರಲಿಲ್ಲ. ಕೊಟ್ಟಷ್ಟು ಕಾಸನ್ನು ಕಿಸೆಯಲ್ಲಿ ನಗುತ್ತಾ ಸೇರಿಸಿಕೊಂಡು ಬೀಳ್ಕೊಡುತ್ತಿದ್ದರು. ಕಂಡಕ್ಟರ್ ಬಸ್ಸನ್ನು ಹತ್ತಿ ರೈಟ್ ಎಂದು ತೆಳು ಆದರೆ ಬಲವಾದ ನೈಲಾನ್ ಹಗ್ಗವನ್ನು ಎಳೆದು ‘ಟಿಂಗ್ ‘ ಎಂದು ಸದ್ದು ಮಾಡಿದನೆಂದರೆ ಎಲ್ಲರೂ ದುಃಖದ ಮಡುವಿನಲ್ಲಿ ಮುಳುಗಿ ಹೋಗುತ್ತಿದ್ದರು. ಪಯಣವು ದೂರವಿತ್ತು ನಿಜ ಆದರೆ ಭದ್ರತೆಯ ಭಯವಿರಲಿಲ್ಲ. ಹತ್ತಿರ ಕುಳಿತುಕೊಳ್ಳುವವರ ಬಗ್ಗೆ ಸಂಶಯವಿರುತ್ತಿರಲಿಲ್ಲ. ನಂಬಿಕೆಯೊಂದೇ ಆಧಾರವಾಗಿತ್ತು. ಮಾರು ದೂರದವರೆಗೆ ನೀವು ಯಾರು? ಯಾವ ಮನೆತನದವರು? ಎಲ್ಲದರ ಬಗ್ಗೆ ಎಲ್ಲರಲ್ಲಿಯೂ ಮಾಹಿತಿ ಇರುತಿತ್ತು.ಎಲ್ಲರೂ ಒಂದೇ ಕುಟುಂಬದವರಂತೆ ಜೊತೆ ಜೊತೆಯಾಗಿ ಪಯಣಿಸುತ್ತಿದ್ದರು.

ಇಂದು, ನಾನು ಸಾವಿರಗಟ್ಟಲೆ ಹಣ ಕೊಟ್ಟು ವಿಮಾನದ ಟಿಕೆಟ್ ಮಾಡಿಸಿದ್ದೆ, ಮೂರು ಗಂಟೆ ಮುಂಚೆ ಹೊರಟು, ಟಿಕೆಟ್ ಹಾಗು ಬೋರ್ಡಿಂಗ್ ಪಾಸನ್ನು ಪ್ರಿಂಟ್ ಮಾಡಿಸಿದೆ, ಇಲ್ಲದಿದ್ದರೆ ಅದಕ್ಕೂ ಐವತ್ತೋ ನೂರೋ ರೂಪಾಯಿಗಳ ಫೈನ್ ಬೀಳುತ್ತದೆ.  ಈ ಟಿಕೆಟ್ ಮಾಡಿದವ ನಾನೇ ಸ್ವಾಮಿ ಎಂದು ತಿಳಿಸಲು ಗುರುತಿನ ಚೀಟಿಯಾದ ಪಾಸ್ಪೋರ್ಟನ್ನು ಹಿಡಿದು ಒಳ ಹೋಗಲು ವಿಮಾನ ನಿಲ್ದಾಣದ ಹೊಸ್ತಿಲಲ್ಲಿ ನಿಂತಾಗ AK-47 ಪಿಸ್ತೂಲನ್ನು ಹೆಗಲಿಗೇರಿಸಿ ಕೊಂಡು ಭದ್ರತಾ ಸಿಬ್ಬಂದಿ ಟಿಕೆಟ್ ಪ್ರಿಂಟ್ ಔಟ್, ವೆಬ್ ಚೆಕ್ಕಿನ್ ಪತ್ರ, ಹಾಗೂ ಗುರುತಿನ ಚೀಟಿಯನ್ನು ಕೂಲಂಕುಷ ಪರಿಶೀಲನೆಯನ್ನು ಮಾಡಿದ, ಅವನಿಗೆ ಸಮಾಧಾನ ಅಥವಾ ಅಸಮಧಾನ ಆಗಿತ್ತೋ ತಿಳಿಯದು. ಒಮ್ಮೆ ಬಿಗು ಮುಖದಿಂದ ಅಡಿಯಿಂದ ಮುಡಿವರೆಗೆ ನೋಡಿದಾಗ ನನ್ನ  ಎದೆ ಒಂದು ಭಾರಿ ಝಲ್ ಆಯಿತು. ಅಯ್ಯೋ ರಾಮ ಈ ಟಿಕೆಟ್ ಮಾಡಿ ನಾನು ನನ್ನದಲ್ಲದ ಇನ್ನಾವುದೋ ಪಾಪಕ್ಕೆ ಜೈಲು ಕಂಬಿ ಎಣಿಸ ಬೇಕಾದೀತೇ ಎಂಬ ಸಂಶಯ ಮೂಡಿತು. ಒಳಗೆ ಸಾಗಿದ ಕೂಡಲೇ ನನ್ನನ್ನು ಹಾಗೂ ನನ್ನೋದಿಗೆ ಇದ್ದ  ಸಾಮಾನು ಸರಂಜಾಮುಗಳನ್ನು ಕೂಲಂಕುಷವಾಗಿ ಸ್ಕ್ಯಾನ್ ಮಾಡಲಾಯಿತು. ಆಮೇಲೆ ವೈಮಾನಿಕ ಸಂಸ್ಥೆಯ ಸುಸಂಸ್ಕೃತ ಅಧಿಕಾರಿಗಳೆಡೆಗೆ ನಡೆದೆ. ನನ್ನೊಂದಿಗೆ ಇದ್ದ ಲಗೇಜ್ ಹಾಗೂ ಬ್ಯಾಗನ್ನು ಆದಿಶೇಷನ ಬಾಲದಂತಿರುವ ಸರದಿಯಲ್ಲಿ ನಿಂತು ನನ್ನ ಸರದಿಗಾಗಿ ಕಾದೆ. ಎಲ್ಲಾ ಕಾಗದ ಪತ್ರವನ್ನು ಕೂಲಂಕುಷವಾಗಿ ಪರೀಕ್ಷಿಸಿದರು. ಆಗ ಅವರು ಕ್ಯಾಬಿನ್ ಲಗೇಜ್ನಿಂದ ಹಿಡಿದು ನನ್ನ ಬಳಿ ಇರುವ ಪ್ರತಿಯೊಂದು ವಸ್ತುವಿನ ತೂಕವನ್ನು ಅಳೆದರು. ಇವರು ಏಕೆ ನನ್ನ ತೂಕ ನೋಡಲಿಲ್ಲ ಎಂದು ಮುಗುಳ್ನಗು ತುಟಿ ಅಂಚಿನಲ್ಲಿ ಮೂಡಿತು.

ಆದರೆ ಆ ಖುಷಿ ಅಧಿಕ ಸಮಯ ಬಾಳಲಿಲ್ಲ. ಒಂದು ಬ್ಯಾಗಿನಲ್ಲಿ ಸ್ವಲ್ಪ ತೂಕ ಹೆಚ್ಚಿತ್ತು ಇನ್ನೊಂದರಲ್ಲಿ ಕಮ್ಮಿ. ನನ್ನ ಪ್ರಥಮ ಪ್ರಯಾಣವಾದ್ದರಿಂದ ಏನೂ ತೋಚದೆ ನಿಂತು ಬಿಟ್ಟೆ. ಇದನ್ನು ಗಮನಿಸಿದ ಸಿಬ್ಬಂದಿ, ನನ್ನ ಬಳಿ ಬಂದು ಎಲ್ಲಾ ಬ್ಯಾಗ್ ತೆರೆಸಿ, ಎಲ್ಲವನ್ನು ಸಮಾನವಾಗಿ ಹಂಚಿದ. ಆಮೇಲೆ ಅವರು ತೂಕವನ್ನು ಪರಿಶಿಲಿಸಲೇ ಇಲ್ಲ. ಕೊನೆಗೆ ಅವನ ಕೈನಲ್ಲಿ ಸಾವಿರ ರೂಪಾಯಿಯ ನೋಟನ್ನಿತ್ತೆ. ‘ನೀವು ಭಾರಿ ಫೈನ್ನಿಂದ ತಪ್ಪಿಸಿಕೊಂಡಿರಿ.’ ಎಂದು ಹಲ್ಲು ಕಿರಿದ. ನನ್ನ ಪುಣ್ಯಕ್ಕೆ ನಾನು ಕೊಂಚ ಹೆಚ್ಚಗಿನ ದುಡ್ಡನ್ನು ನನ್ನ ಬಳಿಇಟ್ಟುಕೊಂಡಿದ್ದೆ. ನೀವು ಕ್ರೆಡಿಟ್ ಕಾರ್ಡ್ನಿಂದ ಬುಕ್ಕಿಂಗ್ ಮಾಡಿದ್ದೀರಿ, ದಯವಿಟ್ಟು ತೋರಿಸಿ ಎಂದರು. ನಾನು ದುರಾದೃಷ್ಟಕ್ಕೆ ಅದನ್ನು ಪರ್ಸ್ನಲ್ಲಿ ಇಟ್ಟು ಮರೆತು ಬಂದಿದ್ದೆ. ಇನ್ನೇನು ಮಾಡ್ಲಿ ಎಂದು ತಿಳಿಯದಾದಾಗ ಮನೆಗೆ ದೂರವಾಣಿ ಕರೆ ಮಾಡಿ ಮಾತನಾಡಿಸಿದೆ, ಅದಕ್ಕೂ ಅವರು ಒಪ್ಪಲಿಲ್ಲ. ಕೊನೆಗೆ ಗೆಳೆಯನೊಬ್ಬನಲ್ಲಿ ಕೇಳಿದಾಗ whatsapp ನಲ್ಲಿ ಫೋಟೋ ತೆಗೆದು ಕಳುಹಿಸಲು ಹೇಳು ಎಂದನು. ಅದನ್ನು ತೋರಿಸಿದ ಮೇಲೆ ಸಮಾಧಾನವಾಯಿತು. ಇದು ಅದ ಕೂಡಲೇ ಇಮ್ಮಿಗ್ರೇಶನ್ ವಿಭಾಗಕ್ಕೆ  ಹೋಗಿ ಪಾಸ್ಪೋರ್ಟ್ ನಲ್ಲಿ ಸೀಲ್ ಹಾಕಿಸಲು ನಿಂತೆ. ಅಲ್ಲಿ ಸರದಿಯಲ್ಲಿ ನಿಂತಾಗ ನಾನು ಗಮನಿಸಿದ ಅಂಶಗಳೆಂದರೆ - ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲು ಸ್ವಲ್ಪ ತಡವರಿಸಿದರೂ ನಿಮ್ಮನ್ನು ಖೈದಿಯಂತೆ ವಿಚಾರಣೆ ಮಾಡುತ್ತಾರೆ. ನೀವು ನಿಮ್ಮ ಪಾಸ್ಪೋರ್ಟಿನ ಎಕ್ಷ್ಪೈರಿ ದಿನಾಂಕ ಹಾಗು ವೀಸಾವನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ ಮನೆಯಿಂದ ಹೊರಡಿ. ಇಲ್ಲವಾದರೆ ನೇರವಾಗಿ ಜೈಲಿನ ಕಂಬಿ ಎಣಿಸಬೇಕಾಗುತ್ತದೆ. ಯಾವುದೋ ಕೆಲಸಕ್ಕೆ ಹೊರಟು ಇನ್ನೆಲ್ಲೋ ತಲುಪಬೇಕಾಗುತ್ತದೆ. 

ಅದನ್ನು ದಾಟಿದ ಮೇಲೆ ಇನ್ನೊಂದು ಭದ್ರತಾ ತಪಾಸಣೆ ಇತ್ತು. ಅಲ್ಲಿ ನಿಮ್ಮ ಬೆಲ್ಟ್ , ಶೂ, ಪವರ್ ಬ್ಯಾಂಕ್ , ಮೊಬೈಲ್ ಚಾರ್ಜರ್ , ಲ್ಯಾಪ್ ಟಾಪ್ , ಪರ್ಸ್ ಹೀಗೆ ಬಹುತೇಕ ಲಗೇಜ್ ಅನ್ನು ಹೊರ ತೆಗಿಸಿ ತಪಾಸಣೆ ಮಾಡುತ್ತಾರೆ. ಕೆಲವೊಮ್ಮೆ ಅಧಿಕಾರ ಕೈಗೆ ಬಂದು ಬಿಟ್ಟರೆ ಅದನ್ನು ಸರಿಯಾಗಿ ಬಳಸಲು ಬರದವರು ಅಮಾಯಕರ ಮೇಲೆ ಅದನ್ನು ತೀರಿಸಿ ಬಿಡುತ್ತಾರೆ. ಅದೇ ನಿಮ್ಮ ಕೈ ಚೀಲದಲ್ಲಿ ವಿಸ್ಕಿ ಇಲ್ಲ ಸ್ಕಾಚ್ ದೊರಕಿದರೆ ಇನ್ನಿಲ್ಲದ ಮರ್ಯಾದೆ ನೀಡುತ್ತಾರೆ. ಮದ್ಯದ ಹಾಗೂ ಹಣದ ಗುಣವೇ ಅಂತಹುದು . ಅಂತ್ಯ ಕಾಲದಿಂದ ಅನಂತ ಕಾಲದ ವರೆಗೆ ಅದರ ಗುಣ ಬದಲಾವಣೆ ಆಗುವುದೇ ಇಲ್ಲ. ಭದ್ರತಾ ಸಿಬ್ಬಂದಿಗಳು ತಮ್ಮ ಜೀವನದ ಹಂಗು ತೊರೆದು ಕೆಲಸ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ಆದರೆ ಬಡಪಾಯಿ ಪ್ರಯಾಣಿಕನು ಕೆಲವೊಮ್ಮೆ ಪಡಬೇಕಾದ ಬವಣೆಯನ್ನು ಬರೆದಿದ್ದೇನೆ.ಇದೆಲ್ಲ ಮುಗಿದ ಮೇಲೆ ನಿಮ್ಮ ಮನಸ್ಥಿತಿ ಇನ್ನೂ ಸರಿಯಾಗಿಯೇ ಇದ್ದರೆ ಅದು ವಿಮಾನ ಸಂಸ್ಥೆಯ ಅಧಿಕಾರಿಗಳು ಮತ್ತೆ ಪರೀಕ್ಷೆಗೆ ಒಡ್ಡುತ್ತಾರೆ. ಕಾಯುವಾಗ ನಿಮ್ಮನ್ನು ನೀವು ಖರೀದಿಸಿದ ಟಿಕೆಟಿನ ಅನುಗುಣವಾಗಿ ವಿಂಗಡಣೆ ಮಾಡುತ್ತಾರೆ. ಅಂತೆಯೇ ನಿಮ್ಮನ್ನು ನೂಕುನುಗ್ಗಲು ಇಲ್ಲದೆ ಒಳಗೆ ಬಿಡುತ್ತಾರೆ. ಮುಂಚೆ ಬ್ಯಾಗಿಗೆ ಟ್ಯಾಗ್ ಒಂದು ಕಟ್ಟುತ್ತಿದ್ದರು.ಅದು ಎಲ್ಲಾದ್ರೂ ಅಪ್ಪಿತಪ್ಪಿ ಬಿದ್ದು ಹೋಯಿತೆಂದರೆ ದುರಂತ ಕಾದಿರುತಿತ್ತು. ನಿಮ್ಮನ್ನು ಕೆಲವೊಮ್ಮೆ ಮತ್ತೆ ಭದ್ರತಾ ತಪಾಸಣೆಗೆ ಕೊಂಡೊಯ್ಯುತ್ತಾರೆ.

 ಅಂತು ಇಂತು ವಿಮಾನವನ್ನೇರಿದಾಗ ಸುಸ್ತಾಗಿ ಬಿಟ್ಟಿತ್ತು. ಬ್ರಿಟಿಷರು ನಮಗೆ ಸ್ವಾತಂತ್ರ್ಯ ಕೊಟ್ಟು ಎಪ್ಪತ್ತೊಂದು ಸಂವತ್ಸರಗಳು ಕಳೆದು ಹೋದರೂ ಅವರು ಬಿಟ್ಟು ಹೋದ ವಿಭಾಗಿಸಿ ಆಳುವ ಪದ್ಧತಿಯನ್ನು ನಾವು ಚೆನ್ನಾಗಿ ಉಳಿಸಿದ್ದೇವೆ, ಬಳಸಿದ್ದೇವೆ ಹಾಗೂ ಇತರರಿಗೂ ಕಲಿಸುತ್ತಿದ್ದೇವೆ. ಸಹ ಪ್ರಯಾಣಿಕರು ಗಂಭಿರವದನರಾಗಿ ತಮ್ಮ ಕೆಲಸದಲ್ಲಿ ಮುಳುಗಿದ್ದರು. ನೀವು ಬಸ್ಸಿನಲ್ಲಿ ಹರಟೆ ಹೊಡೆದಂತೆ ಇಲ್ಲಿ ಹರಟಲು ಪ್ರಯತ್ನಿಸಿದರೆ ಇವನು ಯಾವ ಜಗತ್ತಿನ ಪ್ರಾಣಿ ಎಂದು ಎಲ್ಲರೂ ನಿಮ್ಮನ್ನು ದಿಟ್ಟಿಸುತ್ತಾರೆ. ವಿಮಾನವು ಗಗನಕ್ಕೆರುವಾಗ ಹಾಗೂ ಇಳಿಯುವಾಗ ಜೀವ ಬಾಯಿಗೆ ಬಂದಿತ್ತು. ಮಧ್ಯದಲ್ಲಿ ನಾವು ಮೋಡಗಳ ಮೇಲಿಂದ ಹಾರುತ್ತಿದ್ದೆವು. ದೂರ ದೂರದವರೆಗೂ ವಿಸ್ತರಾವಾದ ನೀಲಿ ಭಾನು ಹಾಗೂ ನನ್ನ ಮನದಲ್ಲಿ ನೆಲದಿಂದ ಹಾರಾಡುವ ಬಿಳಿ ಹತ್ತಿಯ ಮುದ್ದೆಯಂತೆ ತೋರುತ್ತಿದ್ದ, ಅನೇಕ ಕನಸ್ಸುಗಳ ಚಿತ್ತಾರವನ್ನು ಮೂಡಿಸಿದ ಮೋಡಗಳು ಕೇವಲ ದಟ್ಟ ಹೊಗೆಯಂತೆ ತೋರಿ ಭ್ರಮನಿರಸನವಾದಂತೆ ಅನಿಸಿತ್ತು. ಆಗಸದ ಮೇಲಿಂದ ಕಂಡ ಮತ್ತು ನೆಲದ ಮೇಲಿಂದ ಕಂಡ ಮೋಡಗಳು ಒಂದೇ ವಸ್ತುವಿನ ಭಿನ್ನ ರೂಪವಾಗಿದ್ದವು. ಇದು ಯಾವುದೇ ವಸ್ತುವನನ್ನು ಸಮಗ್ರವಾಗಿ ಅಧ್ಯಯನ ಮಾಡುವಾಗ ಸಮಗ್ರ ದೃಷ್ಟಿಕೋನದ ಅಗತ್ಯವನ್ನು ನನಗೆ ತಿಳಿ ಹೇಳಿತ್ತು.

ಆಗ ನೆನಪಾಯಿತು ಬಾಲ್ಯದ ಆ ದೃಶ್ಯ - ಕಂಡಕ್ಟರ್ ಬಂದು ಬಸ್ ಹೊರಟ ಮೇಲೆ ನಮಗೆ ಟಿಕೆಟ್ ಕೊಡಲು ಬರುತ್ತಿದ್ದ. ಅವನಿಗೆ ಅವನ ಪ್ರಯಾಣಿಕರ ಮೇಲೆ ಅಪಾರವಾದ ನಂಬಿಕೆ ಇತ್ತು. ಮುಂಗಡವಾಗಿ ಸೀಟ್ ಕಾದಿರುಸುವ ವ್ಯವಸ್ಥೆ ಅಂದು ಇರಲಿಲ್ಲ. ಬಸ್ ವೇಗ ಪಡೆದು ಕೊಂಡಂತೆ, ಕಿಟಕಿಯ ಗ್ಲಾಸ್ಸುಗಳು ಒಂದೊಕ್ಕೊಂದು ಹೊಡೆದುಕೊಂಡು ತನ್ನದೇ ಶೈಲಿಯ ಲಾಲಿ ಹಾಡುತ್ತಿದ್ದವು. ಕಂಡಕ್ಟರ್ ಮಂದ ಬೆಳಕಿನಲ್ಲಿ ಒಂದು ಚೂರೂ ತೊಳಲಾಡದೆ ನಿಂತ್ಕೊಂಡು ತನ್ನ ಕಾಗದದ ಚೀಟಿಯಲ್ಲಿ ಅದೇನನ್ನೋ ಬರೆಯುತ್ತಿದ್ದ. ಹೀಗೆ ಹಿಂಬದಿಯಿಂದ ಶುರು ಮಾಡಿದವನು ಮುಂದಿನ ಗಿರಾಕಿಯವರೆಗೆ ಸಾಗಿ ಎಲ್ಲರ ಕ್ಷೇಮ, ಮನೆತನ ಎಲ್ಲಾ ವಿಚಾರಿಸಿ ಬಿಡುತ್ತಿದ್ದ. ಕೆಲವರಿಗೆ ವೈದ್ಯಕೀಯ ತೊಂದರೆಗಳಿದ್ದರೆ ಅದರ ಬಗ್ಗೆ ಕೂಲಂಕುಷವಾಗಿ ತಿಳಿದು ಕೊಂಡು ಆಗಾಗಲೇ ಧ್ಯಾನಸ್ಥನಾಗಿದ್ದ ಚಾಲಕನಿಗೆ ಕೂಡ ಮುಂಚೆಯೇ ತಿಳಿಸಿಬಿಡುತ್ತಿದ್ದ. ಹೆಣ್ಣು ಮಕ್ಕಳು, ಹೆಂಗಸರು ಹಾಗು ಮಕ್ಕಳನ್ನು ಹೊತ್ತು ಕೊಂಡವರು, ವಯಸ್ಸಾದವರು ಇದ್ದಾರೆ ಹೇಗಾದರೂ ಮಾಡಿ ಒಂದು ಸೀಟ್ ಕೊಡಿಸುತ್ತಿದ್ದ. ಇಲ್ಲವಾದರೆ ತನ್ನ ಸೀಟನ್ನೇ ನೀಡಿಬಿದುತ್ತಿದ್ದ. ದಾರಿಯಲ್ಲಿ ಬರುವ ಪ್ರತಿಯೊಂದು ಆಸ್ಪತ್ರೆ , ಊಟದ ತಾಣಗಳು ಹಾಗೂ ಆಸ್ಪತ್ರೆಗಳ ಬಗ್ಗೆ ಕೂಲಂಕುಷವಾದ ಜ್ಞಾನವಿಟ್ಟುಕೊಳ್ಳುತ್ತಿದ್ದ. ಆಮೇಲೆ ಡ್ರೈವರ್ ಒಂದೊಂದಾಗಿ ಲೈಟ್ ಆರಿಸುತ್ತಾ ಕೊನೆಗೆ ಎಲ್ಲಾ ಲೈಟ್ ಆರಿಸಿ ಬಿಡುತ್ತಿದ್ದ. ಬಸ್ಸು ತೊಟ್ಟಿಲಿನಂತೆ ಆಡುತ್ತಾ ಸಾಗುವಾಗ ಅಮ್ಮನ ಬೆಚ್ಚಗಿನ ಒಡಲಿನಲ್ಲಿ ನಿದ್ರೆಯ ಮಂಪರು ಆವರಿಸಿದ್ದೆ ಗೊತ್ತಾಗುತ್ತಿರಲಿಲ್ಲ. ರಾತ್ರಿ ಪೂರ್ತಿ ಸಂಚಾರ ಮಾಡಿ ಮುಂಜಾನೆ ಆ ರವಿಯು ಬಾನಿನಲ್ಲಿ ತಾವರೆಯಂತೆ ಅರಳುತಿದ್ದಂತೆ ಧಾರವಾಡ ತಲುಪುತ್ತಿತ್ತು. ನಾನು ಹೆಚ್ಚಾಗಿ ಘಾಡವಾದ ನಿದ್ದೆಯ ಮಂಪರಿನಲ್ಲಿ ಇದ್ದರೂ ಬಸ್ಸು ತಡ ರಾತ್ರಿ ಹೋಟೆಲಿನಲ್ಲಿ ಅಥವಾ ಶೌಚ ಮಾಡಲು ಅಪ್ಪ ಹೊರಗೆ ಕರೆದು ಕೊಂಡು ಹೋದಾಗ ನಕ್ಷತ್ರಗಳು ತುಂಬಿದ ಕಪ್ಪನೆಯ ಆಕಾಶ, ಅದಕ್ಕೆ ಬೆಳಕಿನ ತಿಲಕವಿಟ್ಟಂತೆ ಬೆಳಗುತ್ತಿದ್ದ ಸುಂದರ ಚಂದ್ರ, ಕಾಡಿನಲ್ಲಿ ಝೇಂಕಾರ ಮಾಡುತ್ತಿದ್ದ ಕ್ರಿಮಿ ಕೀಟಗಳ ವಾದ್ಯ, ಈ ದೃಶ್ಯಗಳು ಸಣ್ಣವನಾದರೂ ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಇಂದಿಗೂ ಉಳಿದು ಬಿಟ್ಟಿದ. ಪ್ರಕೃತಿಯ ವಿಸ್ಮಯದ ಪೂರ್ಣ ಅನುಭೂತಿ ಪಡೆಯಲು ಸಹಾಯ ಮಾಡಿತು.

ಬೆಳಿಗ್ಗೆ ಕಣ್ಣು ಬಿಟ್ಟಾಗ ಧಾರವಾಡ ತಲುಪಿತ್ತು. ಅಲ್ಲಿ ಒಬ್ಬ ಟಾಂಗಾದವನು ನಮಗಾಗಿ ಪ್ರೀತಿಯ ಹೂ ನಗುವೊಂದನ್ನು ಚೆಲ್ಲಿ “ ಬನ್ರಿ ಸಾಹೇಬ್ರೆ! ಬಹಳ ದಣಿದಿದ್ದೀರೀ ಅಂತ ಕಾಣಿಸ್ತದೆ, ಟಾಂಗಾ ಹತ್ರಿ, ನಿಮ್ಮ್ ಮನಿಗಿ ಬಿಡ್ತಿನಿ.” ಎಂದು ಎಲೆ ಅಡಿಕೆಯ ಕಲೆ ತುಂಬಿದ ಹಲ್ಲು ಬಿಟ್ಟು ಒಲೈಸುತಿದ್ದ, ಹತ್ತಿರದಲ್ಲೇ ಹದಿ ಹರೆಯದ ಹಸಿ ಶೇಂಗ ಮಾರುವವಳು ಒಂದು ಕಟ್ಟು ನನ್ನ ಕೈನಲ್ಲಿ ನೀಡಿ “ಇದು ನಿಮ್ಮ ಮಗಂಗೆ ಸಾಹೇಬ್ರ, ಇದನ್ನ ನೋಡಿದ್ರೆ ನನ್ನ ಮಗುನ್ನ ನೋಡಿದಂಗೆ ಆಗ್ತೈತಿ.” ಅಂಥ ನಕ್ಕು ಓಡಿ ಹೋಗುತಿದ್ದಳು. ಅಪ್ಪನಿಗೆ ಪರಿಚಯವಿದ್ದುದರಿಂದ ಮನಸದಾಗ ಬಂದು ದುಡ್ಡು ತೆಗೆದುಕೊಳ್ಳುತ್ತಿದ್ದಳು. ಸುತ್ತಲು ಕುದುರೆ ಲದ್ದಿ, ಕೊಳೆತ ತರಕಾರಿಗಳ ವಾಸನೆ ತುಂಬಿತ್ತು ಆದರೆ ಜನರ ಮನಸ್ಸು ಪ್ರಾಂಜ್ವಲವಾಗಿತ್ತು. ಅಥವಾ ನನ್ನ ಮನಸ್ಸು ಆ ಎಳೆಯ ಪ್ರಾಯದಲ್ಲಿ ಶುದ್ಧವಗಿತ್ತೋ ತಿಳಿಯದು.

ಇಂದು ವಿಮಾನ ಕ್ವಾಲಲಂಪುರ್ ನಿಲ್ದಾಣದಲ್ಲಿ ಬಂದಿಳಿದಿತ್ತು. ಸುತ್ತಲೂ ಅತ್ಯಂತ ಶುಭ್ರವಾದ, ಹವಾನಿಯಂತ್ರಿತ ನಿಲ್ದಾಣ. ಆದರೆ ಮತ್ತೆ ಅದೇ ಭದ್ರತಾ ತಪಾಸಣೆ, ಹತ್ತುವಾಗಿನ ರೀತಿ ನಿಯಮಗಳ ಪುನರಾವರ್ತನೆ. ಎಲ್ಲರೂ ಅವರ ಅವರ ಮೊಬೈಲಿನ ಲೋಕದಲ್ಲಿ ಮುಳುಗಿದ್ದರು. ಹೊರಗೆ ಬಂದೆ, ಹಸಿವಾಗಿತ್ತು. ಶೇಂಗಾಮಾರುವವಳು ಕಾಣಿಸಲಿಲ್ಲ. ಆದರೆ ಅಂದವಾದ ಪ್ಯಾಕೆಟಿನಲ್ಲಿ ಅಚ್ಚುಕಟ್ಟಾಗಿ ಶೇಕರಿಸಿದ್ದ ಒಣ ಶೇಂಗಾವನ್ನು, ಹಾಗೂ ಬಾಟಲಿನಲ್ಲಿ ತುಂಬಿಸಿಟ್ಟಿದ್ದ ನೀರನ್ನು ಮೊದಲು ದುಡ್ಡು ಕೊಟ್ಟು ಖರೀದಿಸಿದೆ. ಆದರೆ ಅವಳು ನೀಡಿದ ಆ ಮಮಕಾರ ತುಂಬಿದ ಹಸಿ ಶೇಂಗಾವೇ ನೂರು ಪಟ್ಟು ವಾಸಿ ಅನಿಸಿತು. ಅದರಲ್ಲಿ ಹಸಿರು ಎಲೆ ಇತ್ತು, ಬಿತ್ತಿದ ಮಣ್ಣಿನ ಸುಗಂಧವಿತ್ತು....


Comments

Popular posts from this blog

ಮದುವೆಯಾಗಲಿ ಸರಿ ಹೋಗ್ತಾನೆ ಅಂತಾರಲ್ಲ ಯಾಕೆ?

ನಿಮಗೇನಾದರೂ ಅರ್ಥವಾಯಿತೇ???

ಸಾವಿನರಮನೆಯಲ್ಲಿ