Friendship: ಗೆಳೆಯರಿರಬೇಕು ಯಾಕೆ ಗೊತ್ತಾ ???


Key words: Friendship, Joy, Bengaluru, Dental,ಗೆಳೆಯ, ಐಸ್ಕ್ರೀಂ


ಸರಕಾರಿ ನೌಕರರ  ಬದುಕು ಅಲೆಮಾರಿ ಬದುಕು. ಎಷ್ಟು ವರ್ಷಕ್ಕೆ ನಿಮಗೆ ವರ್ಗಾವಣೆ ಆಗುತ್ತದ್ದೋ ಅದು ನಿಮ್ಮ ಇಲಾಖೆಯ ಮೇಲೆ ಹೊಂದಿಕೊಂಡು ಇರುತ್ತದೆ. ನಮ್ಮ ತಂದೆಗೆ ಪ್ರತಿ ಮೂರು ವರುಷಕ್ಕೊಮ್ಮೆ ವರ್ಗಾವಣೆ ಆಗುತ್ತಿತ್ತು. ನಾವು ಒಂದು ಊರಿಗೆ ಬಂದು ಅಲ್ಲಿನ ಸಂಸ್ಕೃತಿ, ಭಾಷೆ, ಉಡುಗೆ ತೊಡುಗೆ, ಆಚಾರ-ವಿಚಾರದ ವೈವಿಧ್ಯತೆಯನ್ನು ತಿಳಿದುಕೊಳ್ಳುವುದರೊಳೊಗೆ ಅಪ್ಪನಿಗೆ ಬೇರೆಡೆ ವರ್ಗಾವಣೆ ಆಗುತ್ತಿತ್ತು. ಮತ್ತೆ ಪುನಃ ಹೊಂದಾಣಿಕೆಯ ಕಾರ್ಯ ಶುರುವಾಗುತ್ತಿತ್ತು. ಇದು ನೋವು ಹಾಗೂ ದಣಿವನ್ನು ಮೂಡಿಸುತಿತ್ತು. ಆಗ ನಮಗೂ ಎಲ್ಲರ ಹಾಗೆ ಒಂದೇ ಕಡೆ ಇರುವ ಭಾಗ್ಯವಿಲ್ಲವೇ ಭಗವಂತ ಎಂದು ಬೇಡಿಕೊಂಡದ್ದು ಉಂಟು. 

ಆಗ ಕಷ್ಟವೆನಿಸಿದರೂ ಇಂದು ಬಾಳಿನ ಪಯಣವನ್ನು ಮೆಲುಕು ಹಾಕುವಾಗ ನಾನು ಕಳೆದುಕೊಂಡದ್ದಕ್ಕಿಂತಲೂ ಪಡೆದುಕೊಂಡದ್ದೇ ಹೆಚ್ಚು. ಯಾವುದೇ ಊರಾಗಲಿ, ರಾಜ್ಯ, ದೇಶವಾಗಲಿ ಒಂದು ಎರಡು ದಿನ ಚಂದ ಕಂಡರೂ, ಅಲ್ಲಿ ಬಾಳಬೇಕಾದರೆ ನಿಮ್ಮ ಗೆಳೆಯರ ಬಳಗ ನಿಮ್ಮ ಕುಟುಂಬದಷ್ಟೇ ಮುಖ್ಯ. ಆ ಜಾಗದ ಮಧುರ ನೆನಪುಗಳು ಇವರಿಂದ ಮಾತ್ರ ಸೃಷ್ಟಿಸಲ್ಪದುತ್ತದೆ. ಗೆಳೆತನ ಎಂಬ ನಾಲ್ಕಕ್ಷರದ ಪದ ನಮ್ಮ ಜೀವನದ ಜೀವನಾಡಿ. ಒಳ್ಳೆಯ ಗೆಳೆಯರೋ, ಕೆಟ್ಟ ಗೆಳೆಯರೋ - ಇಬ್ಬರೂ ನಿಮ್ಮ ಜೀವನದ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತಾರೆ.

 ವೇದೋಪನಿಷತ್ತುಗಳು ನಾವೆಲ್ಲರೂ ‘ಬ್ರಹ್ಮನ್’ ಎಂದು ಹೇಳುತ್ತದೆ. ಅದನ್ನೇ ಹಲವು ಮಹಾನುಭಾವರು ‘ಪರಬ್ರಹ್ಮ’ ಎಂದು ಕರೆದಿದ್ದಾರೆ. ಎಲ್ಲ ಚೈತನ್ಯವೂ ಒಂದೇ, ನಾವು ಭೂಮಿಗೆ ಬಂದ ಮೇಲೆ ಅದನ್ನು ವರ್ಗೀಕರಣಗೊಳಿಸಲು ಆರಂಭಿಸುತ್ತೇವೆ. ‘ನೀನು’ ‘ನಾನು’ ಎಂದು ಪ್ರತ್ಯೇಕಗೊಳಿಸಲು ಕಲಿಯುತ್ತೇವೆ ಎಂದು ತಿಳುಸುತ್ತವೆ. ನಮಗೆ ನಮ್ಮ ಹಿರಿಯರು ಇದನ್ನು ಬಾಲ್ಯದಿಂದ ಕಲಿಸುತ್ತಾರೆ. ಇದು ಇಲ್ಲಿ ಬದುಕಲು ಅನಿವಾರ್ಯವೂ ಹೌದು. ಆದರೆ ಜೀವನದ ಕೆಲವು ಕ್ಷಣಗಳಲ್ಲಿ ನಾವು ನಮ್ಮ ನಿಜವಾದ ಸ್ವರೂಪದೊಂದಿಗೆ ಮುಖಾಮುಖಿಯಗುತ್ತೇವೆ. ಅದು ನಾವು ಭಾವೋದ್ವೇಗದ ಪರಾಕಾಷ್ಟೆಯನ್ನು ತಲುಪಿದಾಗ. ಹೆತ್ತವರು ತಮ್ಮ ಮಕ್ಕಳನ್ನು ಮುದ್ದಿಸುವಾಗ, ತಾಯಿ ಮಗುವಿಗೆ ಹಾಲುಣಿಸುವಾಗ, ನಿಜ ಪ್ರೇಮಿಗಳು ಒಂದಾದಾಗ, ಸಂಗೀತ, ಆಟ ವಾಡುವಾಗ, ಕಲಾವಿದನು ತನ್ನ ಕಲಾಕೃತಿಯನ್ನು ಸೃಷ್ಟಿಸುವಾಗ,ನಾವು ಗಾಢ ನಿದ್ದೆಯಲ್ಲಿದ್ದಾಗ ಹಾಗೂ ಗೆಳೆಯರ ಮಿಲನವಗುವಾಗ, ಹೀಗೆ ಕೆಲವು ಉದಾಹರಣೆಯಷ್ಟೇ. ಇಂತಃ ಸಂದರ್ಭಗಳಲ್ಲಿ ನಮ್ಮ ಆತ್ಮದ ಸಕ್ಷತ್ಕರವಗುತ್ತದೆ ಎಂದು ಹೇಳಲಾಗಿದೆ.

ನನ್ನ ಬಾಲ್ಯದ ಗೆಳಯರ ಬಗ್ಗೆ ಆಮೇಲೆ ಬರೆಯುತ್ತೇನೆ. ನನ್ನ ಜೀವನದ ಒಂದು ಮುಖ್ಯ ಅವಿಭಾಜ್ಯ ಅಂಗ ಬೆಂಗಳೂರಿನ ‘ಸರಕಾರಿ ದಂತ ವಿದ್ಯಾಲಯ’. ನಾನು ವಿಧ್ಯಾಭ್ಯಾಸ ಆರಂಭಿಸಿದ್ದು ಬೆಂಗಳೂರಿನಲ್ಲಿ. ಅಂತೆಯೇ ಬ್ಯಾಚುಲರ್ ಡಿಗ್ರಿ ಮುಗಿಸಿದ್ದು ಕಾಕತಾಳಿಯವಾಗಿ ಆ ಮಹಾನಗರದಲ್ಲಿ. ಅದು ಮುಗಿಸಿ ಸರಿ ಸುಮಾರು ಇಪ್ಪತ್ತು ವರುಷವೇ ಕಳೆದು ಹೋಗಿದೆ.
Key words: Friendship, Joy, Bengaluru, Dental,ಗೆಳೆಯ, ಐಸ್ಕ್ರೀಂ



ಇಷ್ಟು ವರ್ಷ ಕಳೆದರೂ ಅಪ್ಪ ಕಾಲವಾದ ನಂತರ, ಈ ನನ್ನ ಗೆಳೆಯರು ಕರೆ ಮಾಡಿ, ನಿನಗೇನು ಸಹಾಯ ಬೇಕು, ನಾವು ಸಾಹಾಯ ಮಾಡುತ್ತೇವೆ ಎಂದು ಮುಂದೆ ಬಂದರು. ನಾವೆಲ್ಲ ದೇಶದ ವಿವಿಧ ಭಾಗದಿಂದ, ಭಿನ್ನ ಸಂಸ್ಕಾರ, ಬದುಕಿನ ಪದ್ಧತಿ, ಅನುಭವದಿಂದ ಬಂದವರು. ಇವು ಯಾವುದೂ ನಮ್ಮ ಗೆಳೆತನಕ್ಕೆ ಅಡ್ಡಿಯಾಗಲಿಲ್ಲ. ನಾನು ಪ್ರಿ ಯೂನಿವರ್ಸಿಟಿ, ಸೀಇಟಿ ಕೌನ್ಸೆಲಿಂಗ್ ಮುಗಿಸಿ ಈ ಕಾಲೇಜು ಆರಿಸುವಾಗ ನನಗೆ ದಂತ ವೈದ್ಯರ ಬಳಿ ಹೋಗಿಯೇ ಗೊತ್ತಿರಲಿಲ್ಲ. ದಂತ ವೈದ್ಯಕೀಯದ ಬಗ್ಗೆ ಅರಿವೇ ಇರಲಿಲ್ಲ. ಅದು ಅಲ್ಲದೆ ನಾನು ಉತ್ತರ ಕರ್ನಾಟಕದ ‘ಕುಮುಟಾ’ ಎಂಬ ಚಿಕ್ಕದಾದ ಆದರೆ ಚೊಕ್ಕವಾದ ಸಣ್ಣ ಪಟ್ಟಣದಿಂದ ಪ್ರಿ ಯೂನಿವರ್ಸಿಟಿ ಮುಗಿಸಿ ಬಂದಿದ್ದೆ. ಈ ಮಹಾನಗರದ ವಿದ್ಯಾರ್ಥಿಗಳೊಂದಿಗೆ ಹೇಗೆ ವ್ಯವಹರಿಸುವುದೋ ಎಂದು ಚಿಂತೆ ಒಳಗೆ ಇತ್ತು. ಅದು ಅಲ್ಲದೆ ragging ಎಂಬ ಪಿಡುಗು ಮಹಾನಗರಗಳಲ್ಲಿ ಹೆಚ್ಚು ಎಂದು ಕೇಳಿದ್ದೆ.

ಹೀಗೆ ಪ್ರಥಮ ದಿನ ಬಂದಾಗ ಅಳುಕಿಕೊಂಡೆ ಬಂದಿದ್ದೆ. ಆದರೆ ನನಗೆ ಇದು ಯಾವ ಕೆಟ್ಟ ಅನುಭೂತಿ ಆಗಲಿಲ್ಲ. ಕೇವಲ ಬೆರಳೆಣಿಕೆಯಷ್ಟೇ ಹುಡುಗರು, ಬಾಕಿ ಹುಡುಗಿಯರೇ ಇದ್ದರು. ನಾನು ಇದ್ದ ಕುಮುಟಾದಲ್ಲಿ ಮಡಿವಂತರು ಜಾಸ್ತಿ. ಹುಡುಗ ಹುಡುಗಿಯರು ಮಾತನಾಡುವುದೇ ಒಂದು ಸಾಹಸವಾಗಿತ್ತು. ಹೀಗಿರುವಾಗ ಹೇಗಪ್ಪ ಐದು ವರುಷ ಕಳೆಯುವುದು ಎಂದು ಹಪಹಪಿಸಿದ್ದುಂಟು. ಸಮಯ ಸಾಗಿದಂತೆ ಹಂತ ಹಂತವಾಗಿ ನಮ್ಮ ಗೆಳೆತನ ಬೆಳೆಯಿತು. ನಂಬಿಕೆ ಬೆಳೆಯಿತು. ಬೇಧ ಭಾವಗಳೆಲ್ಲ ಮರೆತು ಹೋಯಿತು. ನಿಜವಾದ ಗೆಳೆಯರು ನಮ್ಮನ್ನು ಇದ್ದ ಹಾಗೇ ಸ್ವೀಕರಿಸುತ್ತಾರೆ. ನೀವು ಅವರ ಮುಂದೆ ತೋರಿಕೆಗಾಗಿ ಏನೂ ಮಾಡಬೇಕಿಲ್ಲ. ಹಾಗೇನಾದರೂ ಮಾಡಿದರೆ ‘ ಸಾಕು ಮಗನೆ, ಜಾಸ್ತಿ ಹಾರಡಬೇಡ, ಕೆಳಗೆ ಇಳಿ’ ಎಂದು ಜರ್ರನೆ ಧರೆಗಿಳಿಸುತ್ತಾರೆ. ಇದೇ ಹಿಂದಿಯಲ್ಲಿ “ ಹರ್ ಏಕ್ ಫ್ರೆಂಡ್ ಕಮಿನ ಹೋತಾ ಹೈ” ಎಂದು ವಿಖ್ಯಾತವಾಯಿತು. ಹೀಗೆ ಅನೇಕ ಗೆಳೆಯರನ್ನು ಸಂಪಾದಿಸಿಕೊಂಡೆ. ಏಳು ವರುಷ ಅಲ್ಲಿ ಕಳೆದದ್ದು ಗೊತ್ತೇ ಆಗಲಿಲ್ಲ.

ಒಟ್ಟಿಗೆ ಓದಿದೆವು, ಆಡಿದೆವು, ಸಿನಿಮಾ, ಐಸ್ಕ್ರೀಂ, ಪಾರ್ಟಿ, ಪ್ರವಾಸ ಅಂತ ಉಳಿದ ಹದಿಹರೆಯದ ಮಕ್ಕಳಂತೆ ಬಾಳಿನ ಪ್ರತಿ ಕ್ಷಣ ಸಂಪೂರ್ಣವಾಗಿ ಆನಂದದಿಂದ ಅನುಭವಿಸಿ ಕಾಲ ಕಳೆದವು. ಇಬ್ಬರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿ ಮುಳುಗಿದೆವು. ಇಂದಿಗೂ  ನನಗೆ ಅಲ್ಪ ಸ್ವಲ್ಪ ದಂತ ವಿದ್ಯೆ ಎಂಬುದು ತಿಳಿದಿದ್ದರೆ ಅದು ನಾನು ಬೆಂಗಳೂರಿನಲ್ಲಿ ಗಳಿಸಿದ ವೃತ್ತಿಪರ ಜ್ಞಾನ ಕಾರಣ.


ನಮ್ಮ ಮನಸ್ಸು ನಿಷ್ಕಲ್ಮಶವಾಗಿತ್ತು. ಇನ್ನೊಬರಿಗೆ ಕೆಟ್ಟದನ್ನು ಬಯಸುವುದಾಗಲಿ, ಅನಗತ್ಯ ರಾಜಕೀಯ ಮಾಡುವುದು, ಅನಗತ್ಯ ದೂರು ಕೊಟ್ಟು ಶಿಕ್ಷಕರಲ್ಲಿ ನಮ್ಮ ಬೇಳೆ ಬೇಯಿಸಿಕೊಳ್ಳುವುದು, ಅಧಿಕಾರ ಹೊಂದಿದವರ ಬಳಿ ಸಲಾಮು ಹೊಡೆದು ಇತರರಿಗೆ ಇಲ್ಲ ಸಲ್ಲದ ತೊಂದರೆ ಕೊಟ್ಟು ವಿಕೃತ ಆನಂದ ಪಡೆಯುವುದಾಗಲೀ, ನಾನು ಮೇಲು-ನೀನು ಕೀಳು ಎಂಬ ಭಾವನೆಯಾಗಲಿ ನಮ್ಮಲ್ಲಿ ಯಾರಿಗೂ ಇದ್ದದ್ದು ನನಗೆ ನೆನೆಪಾಗುತ್ತಿಲ್ಲ.”ನೀನು ಬಾಳು, ಇತರರನ್ನು ಬಾಳಲು ಬಿಡು” ಎಂಬುದೇ ಧ್ಯೇಯವಾಗಿತ್ತು.

ಯಾರಿಗೆ ಏನೇ ಕಷ್ಟ ಬಂದರೂ ಕ್ಲಾಸಿಗೆ ಕ್ಲಾಸೇ ಸಂಪೂರ್ಣ ಒಗಟ್ಟಿನಿಂದ ಎದುರಿಸುತ್ತಿದ್ದೆವು. ನಮ್ಮಲ್ಲಿ ಸಣ್ಣ ಪುಟ್ಟ ಹುಸಿ ಮುನಿಸು ಕೋಪಗಳಿದ್ದವು ನಿಜ. ಆದರೆ ಒಬ್ಬರನ್ನು ಒಬ್ಬರೂ  ಎಂದಿಗೂ ಬಿಟ್ಟು ಕೊಡಲಿಲ್ಲ. ಅದೊಕೊಂದು ಉದಾಹರಣೆ, ನಾನು ಅಂತಿಮ ವರುಷದಲ್ಲಿ ಇರುವಾಗ ಅಪ್ಪನಿಗೆ ಸುಮಾರು ಒಂದು ವರುಷದವರೆಗೆ ಮಧುಮೇಹ ಇನ್ನಿಲ್ಲದಂತೆ ಕಾಡಿತ್ತು. ಹಾಗಾಗಿ ನಾನು ಆಗಾಗ ‘ಸುಳ್ಯ’ ಎಂಬ ಚಿಕ್ಕ ಊರಿಗೆ ಪಯಣಿಸಬೇಕಾಗಿತ್ತು. ಅಲ್ಲಿಗೆ ಹೋಗಿ ಬರಲು ಅಂದು ಸರಿಯಾದ ಬಸ್ಸಿನ ವ್ಯವಸ್ಥೆ ಇರಲಿಲ್ಲ. ನನ್ನಲ್ಲಿ ಒಂದು ಕೆಟ್ಟ ಅಭ್ಯಾಸವಿದೆ, ಅಧಿಕಾರ ಹೊಂದಿದವರಿಂದ ಕೊಂಚ ದೂರವೇ ಉಳಿಯುತ್ತೇನೆ. ಯಾಕೆಂದರೆ ನಾವು ಅಪ್ಪಿ ತಪ್ಪಿ ಬೇರೆಯವರ ಬಗ್ಗೆ ಆಡಿದ ಕೆಟ್ಟ ನುಡಿ ಅವರಿಗೆ ನಾನು ಬಯಸದೇ ಇದ್ದರೂ ಕೆಟ್ಟದ್ದನ್ನೇ ಮಾಡುತ್ತದೆ ಹೊರತು ಒಳ್ಳೆಯದ್ದನಲ್ಲ. ಅದು ಇಂದಿಗೂ ಕೆಟ್ಟ ಅಭ್ಯಸವಾಗಿಯೇ ಉಳಿದುಕೊಂಡಿದೆ.

ಹಾಗಾಗಿ ಉಪ ಪ್ರಾಂಶುಪಾಲರಲ್ಲಿ ಹೇಳಲು ಸಾಧ್ಯವಾಗಲಿಲ್ಲ. ಅಂತೆಯೇ ಶಿಕ್ಷಕರಲ್ಲಿ ಎಲ್ಲರೂ ಒಳ್ಳೆಯವರಾಗಿರುವುದಿಲ್ಲ. ಅವರೂ ಮನುಷ್ಯರಲ್ಲವೇ? ಒಬ್ಬರು ನನ್ನಲ್ಲಿ ವಿನಾಕಾರಣ ನಖ-ಶಿಖಾಂತ ದ್ವೇಷ ಬೆಳೆಸಿಕೊಂಡಿದ್ದರು. ಅವರು ಹೋಗಿ ಉಪ ಪ್ರಾಂಶುಪಾಲರ ಬಳಿ ಇಲ್ಲ ಸಲ್ಲದು ಹೇಳಿ ಕಿವಿ ಚುಚ್ಚುತಿದ್ದರು. ನನ್ನ ಹಾಜರಿಯಲ್ಲಿ ವ್ಯತ್ಯಯವಾಗಿತ್ತು. ಆದರೆ ನಾನು ಮಾಡಬೇಕಾಗಿದ್ದ ಕೆಲಸಗಳನೆಲ್ಲ ನಾನು ಗೆಳೆಯರ ಸಹಾಯದಿಂದ ಮಾಡಿ ಮುಗಿಸಿದ್ದೆ. ಸ್ವತಂತ್ರವಾಗಿ ಅಭ್ಯಾಸ ಮಾಡಲು ನಾನು ಕಲಿತದ್ದು ಗೆಳೆಯರಿಂದಲೇ. ನಿಷ್ಠೆಯಿಂದ ನನ್ನ ಪಾಡಿಗೆ ಪಾಠವನ್ನು ಓದುತಿದ್ದೆ. ಅದು  ಎಷ್ಟೇ ಬಣ್ಣದ ಕಥೆಗಳನ್ನು ಕಟ್ಟಿ ಬೇರೆಯವರಿಗೆ ಕೆಟ್ಟದ್ದು ಬಯಸಿದರೂ ಒಬ್ಬ ನಿಷ್ಪಕ್ಷಪಾತಿಯಾದ ಗುರುವಿಗೆ ಸತ್ಯದ ಅರಿವು ಆಗಿಯೇ ಆಗುತ್ತದೆ. ಅಂತೆಯೇ ಉಪ ಪ್ರಾಂಶುಪಾಲರು ಆ ಶಿಕ್ಷಕರನ್ನು ಪೂರ್ಣವಾಗಿ ನಂಬದೆ ನನ್ನ ಕ್ಲಾಸಿನ ಬೇರೆ ವಿಧ್ಯಾರ್ಥಿಗಳಲ್ಲಿ ವಿಚಾರಿಸಿದರು. ಆಗ ಎಲ್ಲರೂ ಒಕ್ಕೊರಲಾಗಿ ನನ್ನ ಪರವಾಗಿ ನಿಂತು ಸತ್ಯವನ್ನೇ ಹೇಳಿದರು. ಅವರು ಹೈರಾಣಾಗಿ ಇವನ್ಯಾಕೆ ನನ್ನ ಬಳಿಯಲ್ಲಿ ಬಂದು ಇದೆಲ್ಲ ಹೇಳಲಿಲ್ಲ ಎಂದು ಪ್ರಶ್ನಿಸಿದರು. ಇಂದಿಗೂ ಅಧಿಕಾರ ಇರುವವರು ಇಲ್ಲದವರು ಎಂದು ನನಗೆ ಪ್ರತ್ಯೇಕಿಸಲು ಬರುವುದಿಲ್ಲ. ಗುಮಾಸ್ತನಿಂದ ಹಿಡಿದು ಉನ್ನತ ಮಟ್ಟದಲ್ಲಿ ಅಧಿಕಾರವಿರುವವವರ ವರೆಗೆ ಎಲ್ಲರನ್ನು ಸಮನಾಗಿ ಗೌರವದಿಂದ ಕಾಣಲು ನಾನು ಕಲಿತದ್ದು ಈ ಕಾಲೇಜ್ನಲ್ಲಿಯೇ. ಇದು ಸರಕಾರಿ ಸಂಸ್ಥೆಯಾದ್ದರಿಂದ ಎಲ್ಲರೂ ಸಮನರಾಗಿದ್ದರು. ನಾನು ಪರೀಕ್ಷೆ ಬರೆಯಲು ಹಾಗೂ ತೇರ್ಗಡೆಯಾಗಲು ಅವರು ಯಾವುದೇ ರೀತಿಯ ತೊಂದರೆ ಕೊಡಲಿಲ್ಲ. ಒಬ್ಬ ವಿಧ್ಯಾರ್ಥಿಗೆ ನಿಷ್ಠೆಯಿಂದ ಕಲಿಯಲು ಮನಸ್ಸಿದ್ದರೆ ಅವನಿಗೆ ನಿರ್ದಿಷ್ಠ ಹಾಜರಿ ಇರಬೇಕೆಂಬುದು ಸುಳ್ಳು ಎಂದು ಕಲಿತದ್ದು ಇಲ್ಲಿಯೇ. ನಾವು ಶಿಕ್ಷಕರಾಗಿ ಕಲಿಸುವತ್ತ ಧ್ಯಾನ ನೀಡಬೇಕು. ಅದು ಬಿಟ್ಟು ನಮ್ಮ ಪ್ರತಿಷ್ಠೆಯನ್ನು ತೋರಿಸಲು ಅಥವಾ ನಮಗೆ ಅವರು ಗೌರವ ಕೊಡಲಿಲ್ಲ ಎಂದೋ ಪೂರ್ವಗ್ರಹ ಪೀಡಿತರಾಗಿ ಅವರ ಯೋಗ್ಯತೆಯನ್ನು ಅಳೆಯುವುದು, ಶಿಕ್ಷೆ ಕೊಡುವುದು ಸೂಕ್ತವಲ್ಲ ಎಂದು ನನ್ನ ಅನಿಸಿಕೆ. ಅವರು ಕಲಿಯಲು ಬಂದಿದ್ದಾರೆ, ಅವರ ಕಲಿಕೆ ಇಲ್ಲಿಯೇ ನಿಲ್ಲುವುದಿಲ್ಲ. ಬದುಕು ಪಾಠ ಕಳಿಸಿ ಕೊಡುತ್ತದೆ. ನಾವು ಕೂಡ ಪರಿಪೂರ್ಣರಾಗಿರಲಿಲ್ಲ ಎಂಬುದು ಬೇರೆಯವರ ಯೋಗ್ಯತೆಯನ್ನು ಅಳೆಯುವಾಗ ನೆನಪಿಡಬೇಕು. ಅವರಿಗೆ ಬಾಳನ್ನು ಎದುರಿಸುವ ಕಲೆ ತಿಳಿಸಿಕೊಡಬೇಕು.  ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಅವರದೇ ವಿಶೇಷತೆ ಇರುತ್ತದೆ. ಅದನ್ನು ಗಮನಿಸಬೇಕು, ಉತ್ತೇಜನ ನೀಡಬೇಕು. ‘ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ’ ನಮಗೆ ಬೇಕಾದವರಿಗೆ ಒಂದು ಮಾಪನ ಉಳಿದವರಿಗೆ ಇನ್ನೊಂದು ಮಾಪನ ಎಂಬ ಧೋರಣೆಯನ್ನು ಮನಸ್ಸಿಂದ ತೊರೆಯಬೇಕು.

ನಮ್ಮ ನಿತ್ಯದ ತಿಂಡಿ,ಊಟ ಹಾಗೂ ಸಂಜೆಯ ಚಹಾ ನಮ್ಮ ಇನ್ನೊಂದು ಮನೆಯಂತೆ ಇದ್ದ ಕ್ಯಾಂಟೀನಿನಲ್ಲಿ ಮುಗಿದು ಹೋಗುತಿತ್ತು. ಬುತ್ತಿ ತಂದವರು ತರದವರೂ ಎಲ್ಲರೂ ಅಲ್ಲಿಗೆ ಬಂದೇ ಬರುತ್ತಿದ್ದರು.ಕುಂದಾಪುರದವರಾಗಿದ್ದ ಕ್ಯಾಂಟೀನಿನವರು ನಮ್ಮ ಬ್ಯಾಚ್ನೊಂದಿಗೆ ಅತ್ಯಂತ ಆತ್ಮೀಯತೆಯಿಂದ ಇದ್ದರು. ಕಾರಣ ಕೇಳಿದಾಗ, ನೀವು ಎಂದಿಗೂ ನಾವು ವೈದ್ಯರು ನೀನು ಒಬ್ಬ ಸಾಧಾರಣ ವ್ಯಕ್ತಿಯೆಂದು ಭೇಧ ಭಾವ ಮಾಡಲೇ ಇಲ್ಲ ಎಂದು ಹೇಳುತ್ತಿದ್ದರು. ಅಲ್ಲಿ ಆಗ ಪ್ರಖ್ಯಾತವಾಗಿದದ್ದು ಮೊಟ್ಟೆ ದೋಸೆ. ನಾವು ಸಾಲು ಸಾಲಾಗಿ ಇಟ್ಟ ಬೆಂಚಿನಲ್ಲಿ ಸಾಲು ಸಾಲಾಗಿ ಕುಳಿತು ಜೋರಾಗಿ ಕಾಗೆಗಳಂತೆ ಹರಟೆ ಹೊಡೆಯುತ್ತಿದ್ದೆವು. ಯಾರೇ ದೋಸೆ ಐಟಂ ಆರ್ಡರ್ ಮಾಡಿದರೆ, ಮಾಡಿದವರಿಗೆ ಕೊನೆಗೆ ಸಿಗುತ್ತಿದ್ದದ್ದು ಕೇವಲ ಬಟಾಟೆ ಮಾತ್ರ. ದಾರಿಯಲ್ಲೇ ಎಲ್ಲರೂ ಅದನ್ನು ತಿಂದು ಮುಗಿಸುತ್ತಿದ್ದರು. ಇದು ಸಲುಗೆಯಿಂದ ಹೊರತು ಬೇರೆ ಕಾರಣದಿಂದಲ್ಲ. ಆಮೇಲೆ ಬುತ್ತಿ ತಂದವರು ಅವರ ಬುತ್ತಿಯನ್ನು ಕೊಟ್ಟು ಉಳಿದವರ ಹೊಟ್ಟೆ ತುಂಬಿಸುತ್ತಿದ್ದರು. ನಾವೆಲ್ಲ ಒಂದೇ ಮನೆಯವರಂತೆ ಇದ್ದೆವು. ದೂರವಗುವಾಗ ಕಂಬನಿ ಸುರಿಸಿದೆವು, ಆದರೆ ಅದು ಕೇವಲ ತೋರಿಕೆಯ ಕಂಬನಿಯಾಗಿರದೆ ಹೃತ್ಪೂರಕವಾದ ಕಂಬನಿಯಾಗಿತ್ತು.ವಿದಾಯ ಸಮಾರಂಭದಲ್ಲಿ ಜನರು ಮನಸ್ಸಿನಲ್ಲಿ ಶಾಪ ಹಾಕುತ್ತ ತುಟಿಯಲ್ಲಿ ಗುಣಗಾನ ಮಾಡುತ್ತಾ ವಿಧ ವಿಧವಾದ ತಿಪ್ಪರಲಾಗ ಹಾಕುವುದನ್ನು ನಾನು ಇಂದಿನವರೆಗೂ ನೋಡುತಿದ್ದೇನೆ, ಮುಂದೆಯೂ ನೋಡುತ್ತೇನೆ.

ಹಬ್ಬ ಬಂದರೆ ಮತ ಜಾತಿ ಭೇಧವಿಲ್ಲದೆ ಎಲ್ಲರೂ ಉತ್ಸವ ಆಚರಿಸುತ್ತಿದ್ದೆವು. ಈದ್ ಬಂದಾಗ ಮನೆಯಿಂದ ಬಿರಿಯಾಣಿ ಗೆಳೆಯರು ಹೊತ್ತುಕೊಂಡು ಬರುತ್ತಿದ್ದರೆ ಕ್ಯಾಂಟೀನಿನ ಪಕ್ಕದ ಸೈಕಲ್ ಸ್ಟ್ಯಾಂಡಿನಲ್ಲೇ ಮಾಂಸ ಖಾಲಿಯಗುತಿತ್ತು. ಎಲ್ಲರೂ ಬೆಂಗಳೂರೆಂದರೆ ಮೋಸದ ನಗರಿ, ಒಬ್ಬರನ್ನೊಬ್ಬರು ಹಚ್ಚಿಕೊಳ್ಳುವುದಿಲ್ಲ  ಎಂದೆಲ್ಲಾ ಹೇಳುತ್ತಾರೆ. ಆದರೆ ನಾನು ಕಂಡ ಗೆಳೆಯರು ನನಗೆ ಆಧಾರವಾಗಿ ನಿಂತರು.  

ಅಂದಿನಂತೆ ಇಂದಿಗೂ ಆಗಾಗ ಕಿತ್ತಾಡಿಕೊಂಡು, ಮರು ಕ್ಷಣ ನಗಿಸಿ, ನಗುತ್ತಾ ವಯಸ್ಸು ನಲವತ್ತಾ ದರೂ, ಹದಿನೆಂಟು ದಾಟಿ ಬಂದ ಹರೆಯದ ಮಕ್ಕಳಂತೆ ಆಟವಾಡುತ್ತೇವೆ. ಎಲ್ಲರೂ ಅವರವರ ರೀತಿಯಲ್ಲಿ ಸಾಧನೆ ಮಾಡಿದರೂ ಯಾರೂ ಕೊಂಚ ಕೂಡ ಅಹಂ ಅಥವಾ ದೊಡ್ಡಸ್ತಿಕೆ ಇಲ್ಲದೆ  ಒಡನಾಡುತ್ತಾರೆ. whatsappನ ಉತ್ತಮ ಉಪಯೋಗಗಳಲ್ಲಿ ಸಂಪರ್ಕ ಸಾಧನೆ ಕೂಡ ಒಂದು. ಇದು ನಾವು ಸಂಪರ್ಕದಲ್ಲಿರಲು ಸಹಾಯ ಮಾಡಿದೆ. ನಾನು ಕಾಲೇಜ್ ನಲ್ಲಿ ಇರುವಾಗಲೇ ಕೇಳಿದವರಿಗೆ ಕವನಗಳನ್ನು ಬರೆದು ಕೊಡುತ್ತಿದ್ದೆ. ಹಾಗಾಗಿ ಮಹಾನ್ ಕವಿಯಾದ ಕಾಳಿದಾಸನಿಗೆ ನಾನು ದೊಡ್ಡ ಅಪಮಾನವೆಂದು, ಹಾಗು ಕೋಳಿ ತಿನ್ನುತ್ತಿದ್ದರಿಂದ ನನಗೆ ಇಂದಿಗೂ ‘ ಕೋಳಿದಾಸ’ ಎಂಬ ಕಿರೀಟವನ್ನು ಕೊಟ್ಟಿದ್ದಾರೆ. ನಿಮಗೆ ಸಾವಿರ ವಂದನೆಗಳು.
ನಿನ್ನೆ ನನ್ನ ಹುಟ್ಟುಹಬ್ಬ. ಆದರೆ ಅಪ್ಪ ತೀರಿಹೋದ ಕಾರಣ ನನಗೆ ಅದನ್ನು ಆಚರಣೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಇವರು ಸುಭಾಶಯಗಳ ಮಹಾಪೂರವನ್ನೇ ಹರಿಸಿ ನನಗಾಗಿ ಕವನವೊಂದನ್ನ ಬರೆದು ಅರ್ಪಿಸಿದರು. ನನ್ನ ಕೃತಜ್ಞತೆಯನ್ನು ತಿಳಿಸಲು ಪದಗಳೇ ಇರಲಿಲ್ಲ. ಇವರಿಗಾಗಿ ಲೇಖನವನ್ನು ಬರೆಯಲು ತುಂಬಾ ಇದ್ದದ್ದರಿಂದ ನನಗೆ ಸುಸ್ತಾಗಿದೆ “ ತುಂಬಾ ಥ್ಯಾಂಕ್ಸ್” ಯೆಂದಷ್ಟೇ ಹೇಳಿದೆ. ಆದರೆ ಜತನದಿಂದ ಅವರಿಗಾಗಿ ಬರೆದ ಈ ಲೇಖನವನ್ನು ನಮ್ಮ ಬ್ಯಾಚ್ನವರಿಗೆ ಸಮರ್ಪಿಸುತ್ತಿದ್ದೇನೆ. ಎಲ್ಲರೂ ಆರೋಗ್ಯ, ಐಶ್ವರ್ಯ, ಮನ ಶಾಂತಿಯಿಂದ ನೂರು ವರ್ಷ ಬಾಳಲಿ ಎಂದು ಹಾರೈಸುತ್ತೇನೆ. ನಮ್ಮ ಸುಮಧುರ ಗೆಳೆತನ ಹೀಗೆಯೇ ಮುಂದುವರೆಯಲಿ ಎಂದು ಆ ಭಗವಂತನಲ್ಲಿ ಹೃತ್ಪೂರ್ವಕವಾಗಿ ಕೇಳಿಕೊಳ್ಳುತ್ತೇನೆ. ನಮ್ಮ ಬ್ಯಾಚ್ ನ ಬಗ್ಗೆ ಪೂರ್ತಿಯಾಗಿ ಬರೆದರೆ ಒಂದು ಕಾದಂಬರಿಯನ್ನೇ ಬರೆಯಬಹುದು....





final word Hope you guys liked this article on friendship

Comments

Unknown said…
Very well written Rajesh.

Popular posts from this blog

ಮದುವೆಯಾಗಲಿ ಸರಿ ಹೋಗ್ತಾನೆ ಅಂತಾರಲ್ಲ ಯಾಕೆ?

ನಿಮಗೇನಾದರೂ ಅರ್ಥವಾಯಿತೇ???

ಸಾವಿನರಮನೆಯಲ್ಲಿ