ಸಾವೊಂದು ಸಾವಿರ ಜೀವನಕ್ಕೆ ದಾರಿ.........


 ಸಾವು, ಡೆತ್,ಜೀವನ, ಅಪ್ಪ,ವ್ಯಾಪಾರ, ನದಿ
ಸಾವು ಬಂದ ಅನಂತರ ಮೊತ್ತ ಮೊದಲು ಕೆಲಸ ಮಾಡಿದ್ದು ಕೇವಲ ಅಸ್ಪತ್ರೆಯ ಬಿಲ್ಲ್ ಕಟ್ಟಿದ್ದಲ್ಲ. ‘ಡೆತ್ ರಿಪೋರ್ಟ್’ ಅನ್ನು ಆಸ್ಪತ್ರೆಯಿಂದ ಪಡೆಯಲು ಮರೆಯಬೇಡ ಎಂದು ಹಿರಿಯರು ಹೇಳಿದರು.ಅಂತೆಯೇ ಮಾಡಿದೆ. ಆಮೇಲೆ ನೋಡುವ ಎಂದು ಹೇಳಿದರೆ ದಯವಿಟ್ಟು ಕೇಳಬೇಡಿ. ಆಮೇಲೆ ಅನಗತ್ಯ ಓಡಾಟಕ್ಕೆ ಕಾರಣವಾಗುತ್ತದೆ. ಆಮೇಲೆ ಸ್ಮಶಾನದಿಂದ ಪಂಚನಾಮೆ ಪತ್ರವನ್ನು ಪಡೆದುಕೊಂಡು, ಮಂಗಳೂರು ನಗರ ಪಾಲಿಕೆಗೆ ಹೋಗಿ ಡೆತ್ ಸರ್ಟಿಫಿಕೇಟಿಗೆ ಅರ್ಜಿಯನ್ನು ತೆಗೆದುಕೊಳ್ಳಿ. ತುಂಬಿ, ಎಷ್ಟು ಕಾಪಿ ಸಾಧ್ಯವೋ ಅಷ್ಟಕ್ಕೆ ಅರ್ಜಿ ಹಾಕಿ. ಇದು ಪ್ರತಿ ಒಂದು ಕಾರ್ಯಕ್ಕೆ ಮುಂದೆ ಸಹಕಾರಿ ಆಗುತ್ತದೆ.

 ಗೆಳೆಯರೊಬ್ಬರು ಅನುಭವ ದಿಂದ ಹೇಳಿದ ಮಾತಿದು. ಮನೆಯವರು ಯಾರಾದರೂ ಸಾವಿನ ಹಾದಿ ಹಿಡಿದರೆ, ಆಗ ಅವರನ್ನು ನೋಡಿಕೊಳ್ಳುವ “ಜವಾಬ್ದಾರಿ ಹೊತ್ತುಕೊಳ್ಳುವವರಿಗೆ’ ಮೂರು ಹಂತಗಳಲ್ಲಿ ಕಷ್ಟ ಎದುರಾಗುತ್ತದೆ. ನಾನು ಯಾಕೆ ಹಾಗೆ ಹೇಳಿದೆ ಎಂದರೆ ಇದು ಅನೇಕರ ಅನುಭವ. ಕೆಲವರು ಮಾತ್ರ ಸ್ವಯಂ ಸ್ಫೂರ್ತಿಯಿಂದ ಜವಾಬ್ದಾರಿಯನ್ನು ಆರಿಸುತ್ತಾರೆ ಪೂರೈಸುತ್ತಾರೆ. ಉಳಿದವರು ಕೇವಲ ದುಃಖಿಸಿ ಅಗತ್ಯವಾದ ಸಮಯದಲ್ಲಿ ನುಣುಚಿ ಕೊಳ್ಳುತ್ತಾರೆ. ಆ ಸಾವಿನ ಸಾಕ್ಷಾತ್ ದರ್ಶನವಾದಗಲೂ ವಿಧ ವಿಧದ ಲೆಕ್ಕಾಚಾರ ಹಾಕುತ್ತ ಕುಳಿತು ಆಶ್ಚರ್ಯ ಮೂಡಿಸುತ್ತಾರೆ. ಈಗ ನೀವು ಜವಾಬ್ದಾರಿ ಹೊತ್ತುಕೊಂಡೀರೆಂದರೆ ನಿಮಗೆ ಪ್ರಥಮ ಹಂತದ ನರಕ ಆಸ್ಪತ್ರೆಯಲ್ಲಿ ದರ್ಶನವಾಗುತ್ತದೆ. ನೀವು ನಿಮ್ಮ ಮನೆಯವರ ಸಾವಿನಿಂದ ಬಳಲಿ ಬೆಂಡಾದಿರೆಂದು ಅಂದು ಕೊಂಡರೆ ಸ್ವಲ್ಪ ತಾಳಿರಿ, ಎರಡನೆ ಹಂತ ಅಂತ್ಯಸಂಸ್ಕಾರ ಹಾಗೂ ಅದಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಅನೇಕ ಕಷ್ಟ ಕೋಟಲೆಗಳು ಎದುರಾಗುತ್ತವೆ. ಅದರಲ್ಲಿ ಕೆಲವನ್ನು ನಾನು “ ಕಾಲ ಬಂದಾಗ ಕೋಲ ಕಟ್ಟುವವರು” ಎಂಬ ಶೀರ್ಷಿಕೆ ಅಡಿ ಹಿಂದಿನ ಬ್ಲಾಗ್ನಲ್ಲಿ ಬರೆದಿದ್ದೇನೆ. ಇನ್ನು ಮೂರನೆ ಹಂತದ ನರಕ ದರ್ಶನವಾಗುವುದು ನೀವು ಸರಕಾರೀ ಆಫೀಸುಗಳಲ್ಲಿ ಅಲೆದಾಡ ಬೇಕಾಗಿ ಬರುವಾಗ. ಆದರೆ ಕೆಲವು ವಿಚಾರಗಳನ್ನು ನೀವು ಭಾವುಕರಾಗದೆ ಮುಂಜಾಗ್ರತೆಯನ್ನು ವಹಿಸಿದರೆಂದರೆ ಬದುಕಿಕೊಳ್ಳಬಹುದು. ಇದು ಇಂಟರ್ನೆಟ್ ಯುಗವಾದುದರಿಂದ ಗೂಗಲ್ ನಿಮಗೆ ಪೂರ್ವಭಾವಿ ತಯಾರಿನಡೆಸಲು ಸಹಾಯಕವಾಗುತ್ತದೆ. ‘ಅರಿವೇ ಗುರು’ ಎಂಬ ವಾಕ್ಯವನ್ನು ಸದಾ ನೆನಪಿಡಿ.

ಅಂತ್ಯಕ್ರಿಯೆಗೆ ಬೇಕಾಗುವ ಸಾಮಾನು ಸರಂಜಾಮುಗಳನ್ನು ಹುಡುಕಲು ಹೊರಟೆವು. ಅಚ್ಚರಿ ಕಾದು ಕುಳಿತಿತ್ತು. ಅದು ಒಂದು ನಾವು ಕಂಡೂ ಕಾಣದಿರುವ ಅದ್ಭುತ ಜಗತ್ತು. ಕಾವೂರು, ಸೆಂಟ್ರಲ್ ಮಾರ್ಕೆಟ್, ಊರ್ವ ಮಾರ್ಕೆಟ್ ಹೀಗೆ ಪ್ರತಿಯೊಂದು ಮೂಲೆ ಮೂಲೆಗಳಲ್ಲಿ ಚಟ್ಟಿ, ಬುಟ್ಟಿ, ಹೂವು, ಬೇರು, ಊದುಬತ್ತಿ, ಭೆರಣಿ, ಗಂಧ, ಕುಂಕುಮ, ಶವಕ್ಕೆ ಹೊದಿಸಲು ಬೇಕಾದ ಬಟ್ಟೆ, ಶವ ಸಂಸ್ಕಾರ ಮಾಡುವವರಿಗೆ ಬೇಕಾದ ಪರಿಕರಗಳು, ಹೀಗೆ ಶವ ಸಂಸ್ಕಾರಕ್ಕೆ ಬೇಕಾಗುವ ಎಲ್ಲ ವಸ್ತುಗಳು ನನಗೆ ಅರಿವು ಬಂದ ಮಟ್ಟಿಗೆ, ಮೇಲಿನ ಮಾರ್ಕೆಟ್ಗಳಲ್ಲಿ ದೊರೆಯುತ್ತವೆ. ಪ್ರಾಯಶಃ ಸಾವಿನ ಬಗ್ಗೆ ಬರೆಯುವವರು ಕಡಿಮೆ. ಹಾಗಾಗಿ ಇಂಟರ್ನೆಟ್ ಜಾಲಾಡಿದಾಗ ಸರಿಯಾದ ಮಾಹಿತಿ ದೊರೆಯಲಿಲ್ಲ. ದಿನ ನಿತ್ಯ ವಸ್ತುಗಳನ್ನು ಮಾರಾಟ ಮಾಡುವವರಿಗೂ ಇವರಿಗೂ ಒಂದು ದೊಡ್ಡ ವ್ಯತ್ಯಾಸವಿತ್ತು. ಇವರೆಲ್ಲ ಅನೇಕ ತಲೆಮಾರುಗಳಿಂದ ಈ ಉದ್ಯೋಗ ಮಾಡುತ್ತ ಬಂದಂಥವರು. ಎಲೆ ಮರೆಯ ಕಾಯಿಯಾಗಿ ಅಳಿಲು ಸೇವೆ ಮಾಡುತ್ತಾ ಬಂದವರು. ಆದರೆ ಇವರಲ್ಲಿ ಅಹಂಭಾವ ಇರಲಿಲ್ಲ, ಅನುಕಂಪವಿತ್ತು.

 ಈ ಇಂಟರ್ನೆಟ್ ಯುಗದಲ್ಲಿ, ಕೋಟಿಗಟ್ಟಲೆ ವ್ಯವಹಾರ ನಡೆಸುವ ದಿನಗಳಲ್ಲಿ, ನಾವೇ ಸರಿ ಎಂದು ಇತರರನ್ನು ಕ್ಷಣ ಮಾತ್ರದಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವರಿಗೆ ಶಿಕ್ಷಿಸಲು ತಯಾರಿರುವ ಜನಗಳ ಎಡೆಯಲ್ಲಿ, ಸ್ವಜನ ಪಕ್ಷಪಾತ, ಸಂಪತ್ತನ್ನು ಕೂಡಿಸಿ ಇಡಲು,ಪ್ರದರ್ಶಿಸಲು ಹೆಣವನ್ನು ಕೂಡ ಬಿಡದಿರುವು ಈ ದಿನಗಳಲ್ಲಿ,  ನಮ್ಮಲ್ಲಿ ಕಳೆದು ಹೋಗಿರುವ  ಅಥವಾ ಮರೆಮಾಚಿ ಹೋಗಿರುವ ಒಂದು ಮಾನವೀಯ ಗುಣವಾದ ‘ಅನುಕಂಪ’ ಈ ಮಾರಾಟ ಮಾಡುವವರಲ್ಲಿ ಕಂಡು ಬರುತ್ತದೆ. ನೊಂದುಕೊಂಡು ಬರುವ ತಮ್ಮ ಗ್ರಾಹಕರ ನೋವು ಇವರಿಗೆ ತಿಳಿದಿದೆ. ಪ್ರೀತಿಯಿಂದ ಮಾತನಾಡಿಸಿ ಯಾವುದೇ ಚರ್ಚೆ ಮಾಡದೇ, ವಿಶೇಷವಾದ ದರವನ್ನು ಅನಗತ್ಯವಾಗಿ ಹೇರದೆ ತಮ್ಮ ಉದ್ಯೋಗವನ್ನು ನಡೆಸುತ್ತ ಬದುಕು ಸಾಗಿಸುತ್ತಾರೆ. ಇವರು ಯಾವುದೇ ರೇಟಿಂಗ್ ಗೋಸ್ಕರ ಇಲ್ಲ ಫೀಡ್ಬ್ಯಾಕ್ ಫಾರ್ಮ್ ಗೋಸ್ಕರ ಕೆಲಸ ಮಾಡುವುದಿಲ್ಲ. ಆದರೆ ನೊಂದವರು ತಮಲ್ಲಿ ಬಂದು ನೋವನ್ನು ಹಂಚಿಕೊಂಡು ಹೋಗಲಿ ಎಂಬ ಧ್ಯೇಯವನ್ನ ಇಟ್ಟುಕೊಂಡು ವ್ಯವಹಾರ ಮಾಡುತ್ತಾರೆ. ಹೀಗೆ ಬಂದು ಹೋಗುವವವರ ಆಶಿರ್ವದಕ್ಕೆ ಭಾಜನರಾಗುತ್ತಾರೆ. ಇವರು ಆಗರ್ಭ ಶ್ರೀಮಂತರಲ್ಲ, ಆದರೆ ತಕ್ಕ ಮಟ್ಟಿಗೆ ನೆಮ್ಮದಿಯ ಬದುಕು ನಡೆಸುತ್ತಾರೆ. ತಮ್ಮಲ್ಲಿ ಇಲ್ಲದ ಪರಿಕರಗಳನ್ನು ವಿಧೇಯತೆ ಇಂದ ನಿರಾಕರಿಸಿ, ಬೇರೆ ಎಲ್ಲಿ ಸಿಗುವುದೆಂದು ಸ್ವಯಂ ಕೆಲವು ಕೆಲಸದವರನ್ನು ಕಳುಹಿಸಿ ತೋರಿಸಿ ಕೊಡುತ್ತಾರೆ. ಇಂಥವರು ಈಗಲೂ ಇದ್ದಾರೆಯೇ ಎಂದು ಹುಬ್ಬೇರಿಸುವಂತೆ ಮಾಡುತ್ತಾರೆ. ಇವರು ಇಂದಿನ ಫೋರ್ಬ್ಸ್, ಟ್ರಂಪ್, ಇಂತಹ ಮಹಾನುಭಾವರ ಸರಿಸಮಾನರಲ್ಲ ಆದರೂ ಇವರು ಅವರ ಸನ್ನಡತೆ ಇಂದ ನಿಮ್ಮ ಹೃದಯಕ್ಕೆ ಹತ್ತಿರವಾಗುತ್ತಾರೆ.

ಹೇಳಿದ ಸಮಯಕ್ಕೆ ಬಾಳೇಕಾಯಿ ತಂದುಕೊಡುವುದಿರಲಿ, ಒಳ್ಳೆಯ ಕುಂಬಳಕಾಯಿ, ಉತ್ತಮ ಮಟ್ಟದ ಬಾಳೆದಿಂಡು ಹೀಗೆ ಪಟ್ಟಿ ಬೆಳೆಯುತ್ತ ಹೋದಂತೆ ಇವರು ನಿಮ್ಮ ಮನಸಿನಲ್ಲಿ ದೊಡ್ಡ ಜಾಗವನ್ನು ಪಡೆಯುತ್ತಾ ಹೋಗುತ್ತಾರೆ. ಇನ್ನು, ನಾವು ಹೋದ ಬೋಳಾರದ ಸ್ಮಶಾನದ ಸಿಬ್ಬಂದಿಯನ್ನು ಸ್ಮರಿಸಲೇಬೇಕು. ಇಲ್ಲದಿದ್ದರೆ ಅಪಚಾರವಾಗುತ್ತದೆ. ನಾವು ದೂರದ ಊರಿಂದ ಬಂದವರೆಂದು ಅರಿವಾದ ಕೂಡಲೇ, ಅಯ್ಯೋ ನಿಮ್ಮ ಊರಿನ ಪಕ್ಕದ ಇಂಥಃ ಜಗದಲ್ಲಿ ಇತ್ತಲ್ಲ ಅಣ್ಣ, ಇಷ್ಟು ದೂರ ಬರುವ ಕಷ್ಟ ಏಕೆ ತಂದು ಕೊಂಡಿರಿ, ಅದು ಈ ನೋವಿನ ಸಂದರ್ಭದಲ್ಲಿ? ಎಂದು ಮರುಕದಿಂದ ಪ್ರಶ್ನಿಸುತ್ತಾರೆ. ಈ ಭಾವ ಎಷ್ಟು ಜನ ವ್ಯಾಪಾರಿಗಳಲ್ಲಿ ನೀವು ಕಾಣಬಲ್ಲಿರಿ ಹೊರ ಜಗತ್ತಿನಲ್ಲಿ? ಇಂಥವರು ಎಲ್ಲ ಕಡೆಯಲ್ಲಿ ಕೂಡ ಇರುತ್ತಾರೆ. ಆದರೆ ಅಧಿಕಾರ, ದರ್ಪ, ಅಹಂಕಾರಗಳ ಎಡೆಯಲ್ಲಿ ಕರಗಿ ಹೋಗುತ್ತಾರೆ. ಆದರೆ ಇವರೇ ಮಾನವತೆಯಲ್ಲಿ ಅಪಾರವಾದ ನಂಬಿಕೆ, ಭರವಸೆ ಮೂಡಿಸುತ್ತಾರೆ.

ಪ್ರೀತಿಯ ಅಪ್ಪನವರ ಚಿತಾಭಸ್ಮವನ್ನು, ಇವರು ತಮ್ಮವರೆನೋ ಎಂಬಂತೆ ನಯ ನಾಜುಕತೆಯಿಂದ ಕಾದು, ಬೇರೆ ಬೇರೆ ಚಿತಾಭಸ್ಮಗಳು ಒಂದಕ್ಕೊಂದು ಬದಲಾಗದಂತೆ ಜಾಗ್ರತೆವಹಿಸುತ್ತಾರೆ. ಇಂಥ ವಿಷಯದಲ್ಲಿ ಮುಗ್ಧರಾದ ನನ್ನಂಥವರಿಗೆ, ಮನಪೂರ್ವಕವಾಗಿ ಸಹಾಯಮಾಡಿ ದಾರಿ ದೀಪವಾಗುತ್ತಾರೆ. ಎಲ್ಲಿಂದ ಅಸ್ಥಿಗಳನ್ನು ಹೆಕ್ಕಬೇಕು, ಹೇಗೆ ಕಟ್ಟಿಡಬೇಕು, ಯಾವ ಜಾತಿಯವರ ಪದ್ಧತಿ ಹೇಗೆ, ಹೀಗೆ ಅವರು ಜ್ಞಾನದ ಕಜಾನೆಯೆ ಆಗಿದ್ದಾರೆ. ಅವರ ಅನುಭವ ಅವರನ್ನು ಹಿರಿಯರನ್ನಾಗಿಸಿದೆ. ಇವರಿಗೆ ಶಿರ ಬಾಗಿ ನಮಸ್ಕರಿಸಲು ನಿಮಗೆ ಯಾವುದೇ ಲಜ್ಜೆ ಮೂಡುವುದಿಲ್ಲ. ಉಳಿದ ಆಸ್ತಿಯನ್ನು ಮೈತುಂಬಿ ಹರಿಯುತ್ತಿರುವ ಗುರುಪುರ ನದಿಗೆ ಹರಿಬಿಡಲು ಸ್ವಂತ ಮಗನಂತೆ ಕಾಳಜಿ ವಹಿಸುತ್ತಾರೆ. ಅಲ್ಲಿ ನೀರಿದೆ, ಇಲ್ಲಿ ಕಲ್ಲಿದೆ, ಕಲಿಡಬೇಡ ಅಣ್ಣ ಎಂದು ಆತ್ಮೀಯತೆಯಿಂದ ಮಾರ್ಗದರ್ಶನ ಮಾಡುತ್ತಾರೆ. ಇವರಲ್ಲಿ ಇರುವ ವಿಧೇಯತೆ, ಕಾರ್ಯತನ್ಮಯತೆ, ಪ್ರೀತಿ ನಿಮಗೆ ಯಾವುದೇ ಕಾರ್ಪೊರೇಟ್ ಜಗತ್ತಿನಲ್ಲಿ ಅಥವಾ ಶೇರು ಮಾರುಕಟ್ಟೆಯಲ್ಲಿ ಸಿಗಲಾರದು.ಇವರಲ್ಲಿ ಗ್ಲಾಮರ್ ಇಲ್ಲ, ಆಸಕ್ತಿದಾಯಕ ಕಥೆಯಿಲ್ಲ ಎಂದು ಇವರ ಬಗ್ಗೆ ಯಾರೂ ದೃಷ್ಟಿ ಹಾಯಿಸುವುದಿಲ್ಲ. ಆದರೆ ತಾರೆಯೊಬ್ಬಳು ಈ ಸೀರೆ ಧರಿಸಿದಳು, ಆ ಕನ್ನಡಕ ಹಾಕಿದಳು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಚಿತ್ರ ವಿಚಿತ್ರ ಸೆಲ್ಫಿಗಳು,ವೀಡಿಯೊಗಳು ವೈರಲ್ ಆದಾಗ, ಹೆಡ್ಲೈನ್ಸ್ ಆದಾಗ ಮುಗುಳ್ನಗು ಒಂದು ಮನಸಲ್ಲಿ ಮೂಡಿ ಮುಸ್ಸಂಜೆಯ ಸೂರ್ಯಾಸ್ತಮಾನದಲ್ಲಿ ಕರಗಿಹೋಗುತ್ತದೆ.

ಯಾವುದೇ ಸಂಶಯವಿಲ್ಲ. ಅವರು ಅವನ ಆರಾಧಕರು, ಅವನ ಭೋಧನೆಯನ್ನು ತಮ್ಮದೇ ವಿಧಾನದಲ್ಲಿ ಪಾಲಿಸುತ್ತಾರೆ. ನಾನು ಇವರಲ್ಲಿ ಅದೇ ಪ್ರಶ್ನೆ ಕೇಳಿದಾಗ ಅವರ ಉತ್ತರ ಮಾರ್ಮಿಕವಾಗಿತ್ತು .” ಅಣ್ಣ! ನಮಗೆ ಇದು ನಿತ್ಯ ಕಾಯಕವೇನೋ ಸರಿ . ಆದರೆ ಸಾವು ನಿತ್ಯ ಸತ್ಯ ಎಂಬುದರ ಅರಿವು ನಮಗೂ ಇದೆ. ಒಂದು ಸಾವು ಬಂದಾಗ ನಮ್ಮ ಜೀವನಕ್ಕೆ ದಾರಿ ಟಿಸಿಲೊಡೆಯುತ್ತದೆ ನಿಜ. ಆದರೆ ಇದೆ ಸಾವು ಮುಂದೊಂದು ದಿನ ನಮಗೂ ಬರುತ್ತದೆ ಎಂಬುದರ ಸ್ಪಷ್ಟ ಅರಿವು ನಮಗಿದೆ.” ಈ ಅರಿವು ನಮ್ಮ ನಾಗರೀಕ ಪ್ರಪಂಚದಲ್ಲಿ ಎಲ್ಲೊ ಕಳೆದು ಹೋಗಿ, ಮಾಯಾ ಲೋಕದಲ್ಲಿ ಸಿಲುಕುವ ನಮಗೆ ಇವರು ಗೌಣವಾಗಿ ದೃಷ್ಟಿಯಿಂದ ಮಂದವಾಗುತ್ತಾರೆ. ಒಂದು ಸಾವು ಸಾವಿರಾರು ಜೀವನಕ್ಕೆ ದಾರಿ ಮಾಡಿಕೊಡುತ್ತದೆಂದು ನಾವು ಅನಿಮಲ್ ಪ್ಲಾನೆಟ್ ಅಥವಾ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ನಲ್ಲಿ ನಿತ್ಯ ನೋಡುತ್ತೇವೆ. ಆದರೆ ನನಗೆ ಇದರ ಸಾಕ್ಷಾತ್ಕಾರವಾದದ್ದು ಅಪ್ಪ ಕಾಲವಾದಾಗ. ಹೊಸದೊಂದು ಲೋಕದ ದರ್ಶನವಾಗಿ ಮೂಕಸ್ಮಿತನಾದೆ, ಚಿರಋಣಿಯಾದೆ.
ಈ ಬ್ಲಾಗಿನಿಂದ ನೀವು ಇಂಥಹುದೇ ಸಾವು ಇದಿರಿಸುವ ಪರಿಸ್ಥಿತಿಯಲ್ಲಿ ಇದ್ದರೆ ನಿಮ್ಮ ಮನಸ್ಸಿಗೆ ಒಂದಷ್ಟು ತಂಗಾಳಿಯಂತೆ ತಂಪೆರೆಯಲಿ ಎಂದು ಭಾವಿಸುವೆನು.

Comments

Popular posts from this blog

ಮದುವೆಯಾಗಲಿ ಸರಿ ಹೋಗ್ತಾನೆ ಅಂತಾರಲ್ಲ ಯಾಕೆ?

ನಿಮಗೇನಾದರೂ ಅರ್ಥವಾಯಿತೇ???

ಸಾವಿನರಮನೆಯಲ್ಲಿ