ಜೀವನ ಇಂದು ಮಗ್ಗುಲು ಬದಲಿಸಿತ್ತು

ಗುರು, ತಂದೆ, ತಾಯಿ, ಸಾವು

ಜೀವನದಲ್ಲಿ ಗುರು ಎಂಬ ಶಬ್ದ ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖವಾದದ್ದು. ತಂದೆ,ತಾಯಿ ಜೀವನದ ಮೊದಲ ಗುರುಗಳು. ನಮಗೆ ಜೀವನದಲ್ಲಿ ದಾರಿ ದೀಪವಗುವುದು ಗುರುಗಳ ಮಾರ್ಗದರ್ಶನ. ಅಪ್ಪ ಕಾಲದಲ್ಲಿ ಲೀನವಾಗಿ ಹೋದರು. ನಾನು ಜೀವನದ ದೊಡ್ಡ ಗುರುಗಳನ್ನು ಕಳೆದುಕೊಂಡು ಬಿಟ್ಟಿದ್ದೆ. ಅವರು ಕೊನೆಗೆ ಪಡುತ್ತಿದ್ದ ಕಷ್ಟ ಮಕ್ಕಳಾದ ನಮಗೆ ಸಹಿಸಲು ಅಸಾಧ್ಯವಗಿತ್ತು. ಇನ್ನು ಅವರೆಷ್ಟು ಮೌನವಾಗಿ ನರಳಾಡಿದರೋ ನನಗೆ ಗೊತ್ತಿಲ್ಲ. ಅಂದು ನಾನಿದ್ದ ಅಸ್ಪತ್ರೆಯ ವಾರ್ಡಿನಲ್ಲಿ ಎರಡು ಸಾವನ್ನು ಕಂಡೆ. ಇಬ್ಬರೂ ಎಪ್ಪತ್ತರ ಹರೆಯದವರು. ಸಾವಿಗಿಂತ ಮುಂಚೆ ಸಾಕಷ್ಟು ಹೋರಾಡಿದರು, ನರಳಿದರು ಆದರೆ ಸೋತರು. ಆದರೆ ಕಾಲವಾದ ನಂತರ, ದೇಹದ ಕಾವು ಅರುತ್ತಿರುವಾಗ ಒಂದು ಪ್ರಶಾಂತವಾದ ಪ್ರಭಾವಳಿಯನ್ನು ಕಂಡೆ. ಅದು ನನ್ನ ಭ್ರಮೆ ಇರಬೇಕೆಂದು ಅಂದು ಕೊಂಡೆ. ಆದರೆ ಇಬ್ಬರಲ್ಲೂ ಒಂದೇ ರೀತಿಯ ಭಾವನೆಗಳನ್ನು ಭ್ರಮಾಧೀನನಾಗಿ ಕಾಣಲು ಸಾಧ್ಯವೇ? ಅದೂ ಎಂಟು ಗಂಟೆಗಳ ನಡುವೆ?
ಬದುಕುವ ಹೋರಾಟದಲ್ಲಿ  ಸೋತ ಅನಂತರ ಕೆಲವು ಗಳಿಗೆ ಒಳಗಾಗಿ ದೇಹದಲ್ಲಿ ನಿಧಾನವಾಗಿ ಸಾವಿನ ಅನಂತರದ ಜೈವಿಕ ಪ್ರಕ್ರಿಯೆಗಳು ಸಾಗುತ್ತವೆ. ಎಲ್ಲವೂ ಪ್ರಕೃತಿಯ ಅದ್ಭುತವೆಂದೇ ಹೇಳಬೇಕು. ಹೆಣ್ಣು ಗರ್ಭ ಧರಿಸುವಾಗ ಪ್ರಕೃತಿಯು ಸಂಭ್ರಮದಿಂದ ಅವಳನ್ನು ಒಂದು ಜೀವಾತ್ಮಕ್ಕೆ ಆಶ್ರಯ ನೀಡಲು ತಯಾರಿಸುತ್ತದೆ, ಅಂತೆಯೇ ಮರಣದ ಅನಂತರ ಪಾರ್ಥಿವ ಶರೀರವನ್ನು ಜೀರ್ಣಿಸುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಇದನ್ನು ಕೆಲವರು ಡಾಕ್ಟರೇಟ್ ಪದವಿಯ ವಿಷಯವನ್ನಾಗಿ ವಿಶದವಾಗಿ ಅಧ್ಯಯನ ಮಾಡಿದ್ದಾರೆ. ಇದು ಭೌತಿಕ ಶರೀರದಮೇಲೆ ಆಗುವ ಪರಿಣಾಮಗಳು ಮಾತ್ರ. ಆದರೆ ನಮ್ಮಲ್ಲಿ ಜೀವಂತವಾಗಿರುವಾಗ ಇರುವ ಪ್ರಜ್ಞೆಗೆ ಏನಾಗುತ್ತದೆ ಎಂಬ ಪ್ರಶ್ನೆ ಹಲವು ಕಾಲದಿಂದ ಮಾನವರಿಗೆ ಕಾಡಿದೆ. ನಮ್ಮ ಜೀವನ ಕೇವಲ ಒಂದು ಎಲೆಕ್ಟ್ರಿಕಲ್ ಸ್ವಿಚ್ನಂತೆ ಕರ್ಯವಹಿಸುತ್ತದೆಯೇ? ಅದು ಆನ್ ಆದಾಗ ಬದುಕು, ಆಫ್ ಆದಾಗ ಸಾವು. ಇಷ್ಟೇಯೇ ಜೀವನ? ನಮ್ಮ ಬಾಳಿಗೆ ಅರ್ಥವೇ ಇಲ್ಲವೇ? ನಾವು ಮಾಡುವ ಕರ್ಮಗಳಿಗೆ, ಭಕ್ತಿಗೆ, ಪಾಲಿಸುವ ನಿಯಮಗಳಿಗೆ ಅರ್ಥವೇ ಇಲ್ಲವೇ? ಇಂಥ ಸಾವನ್ನು ಕಂಡ ಅನಂತರ ಸಹಜವಾಗಿಯೇ ಮೂಡುವ ಪ್ರಶ್ನೆಗಳು ನನ್ನನ್ನು ಕೂಡ ಕಾಡಿದವು. 
ಆದರೆ ಅಪ್ಪ ಇನ್ನೆಂದು ಬರಲಾರರು ಎಂಬ ಸತ್ಯ ಇನ್ನೂ ಮನದ ಆಳದಲ್ಲಿ ಅರಗಿಸಿ ಕೊಳ್ಳಲು ಆಗಿರಲಿಲ್ಲ. ಜೀವನದ ಬಗ್ಗೆ ಇನ್ನು ಕೂಡ ಆಳವಾದ ಅರಿವು ಮೂಡಿಸಿಕೊಳ್ಳ ಬೇಕೆಂದು ಮನಸ್ಸಿನಲ್ಲಿ ತುಡಿತ ಪ್ರಾರಂಭ ಆಯಿತು. ಆದರೆ ಅದಕ್ಕೆ ಸಮಯವಿರಲಿಲ್ಲ. ಯಾಕೆಂದರೆ ಆಸ್ಪತ್ರೆಯಲ್ಲಿ ರೋಗಿಗಳು ಸಾವು ಬದುಕು ನಡುವಿನ ಹೋರಾಟದಲ್ಲಿ ತೊಡಗಿದಾಗ ಅವರನ್ನು ಆರೈಕೆ ಮಾಡುವವರು ಕೂಡ ಮಾನಸಿಕ ತೊಳಲಾಟಕ್ಕೆ ಈಡಾಗುತ್ತಾರೆ. ನಮ್ಮ ಆಪ್ತರ ಅವಸ್ಥೆಯನ್ನು ಕಂಡು ಮನಸ್ಸು ಮಮ್ಮಲ ಮರುಗುತ್ತದೆ. ನಾವು ಪಟ್ಟ ಶ್ರಮಕ್ಕೆ ಒಳ್ಳೆಯ ಪ್ರತಿಫಲ ಬಂದರೆ ಜೀವನದಲ್ಲಿ ಏನೋ ಒಂದು ಸಾಧನೆ ಮಾಡಿದ ಭಾವವು ಮೂಡುತ್ತದೆ. ಆದರೆ ಸೋತರೆ ಒಂದು ರೀತಿಯ ಅಸಹಾಯಕತೆ, ಹತಾಶ ಭಾವನೆಗಳು ಮೂಡುವುದು ಸಹಜ. ಆದರೆ ರೋದಿಸುತ್ತ ಕೂರಲು ಜೀವನ ಬಿಡುವುದಿಲ್ಲ. ಆಸ್ಪತ್ರೆಯಿಂದ ಬಿಲ್ಲು ಕಟ್ಟಿ ನಮ್ಮವರನ್ನು ಬಿಡಿಸಬೇಕು,ಆಮೇಲೆ ಪಾರ್ಥಿವ ಶರೀರವನ್ನು ಮನೆಗೆ ಒಯ್ದು ಕ್ರಿಯಾ ಕರ್ಮಗಳನ್ನು ಪೂರೈಸಬೇಕು. ಹೀಗೆ ಹತ್ತು ಹಲವು ಕೆಲಸಗಳು ನಮಗಾಗಿ ಕಾದಿರುತ್ತವೆ,
ಇವೆಲ್ಲ ಕರ್ಮಗಳಿಗೆ ಒಬ್ಬನು ಉತ್ತರದಾಯಿತ್ವವನ್ನು ವಹಿಸಬೇಕಾಗುತ್ತದೆ. ಈ ಕೆಲಸವನ್ನು ಪೂರೈಸಲು ನಿಮಗೆ ಜಗತ್ತಿನ ಯಾವುದೇ ಲೀಡರ್ಶಿಪ್ ಟ್ರೈನಿಂಗ್ ಪ್ರೊಗ್ರಾಮ್ಮುಗಳು ತಯಾರಿಸಲು ಸಾಧ್ಯವಿಲ್ಲ. ಸಹಕರಿಸಲು ಅನೇಕ ಜನರು ಬರುತ್ತಾರೆ ನಿಜ. ಆದರೆ ಮನದ ಒಳಗಿನ ದುಃಖವನ್ನು ಅದುಮಿಕೊಂಡು ಮಾನಸಿಕ ಸ್ತಿಮಿತವನ್ನು ಕಳೆದುಕೊಳ್ಳದೆ ಇಡೀ ಕುಟುಂಬವು ಶೋಕತಪ್ತವಗಿರುವಾಗ ಮುಂದೆ ಮಾಡಬೇಕಾಗಿರುವ ಕರ್ಮಗಳನ್ನು ಮನಸಿನಲ್ಲಿ ಲೆಕ್ಕ ಹಾಕುತ್ತ ಅರ್ಥಿಕ, ಮಾನಸಿಕ ,ಸಾಮಾಜಿಕ, ದೈಹಿಕ ಕ್ಷಮತೆಗಳನ್ನು  ಕಾದಿರಿಸಿ ಕೊಳ್ಳುವುದು ಅತ್ಯಂತ ಕ್ಲಿಷ್ಟಕರವಾದ ಕಾರ್ಯ. ಇದನ್ನು ನಿರ್ವಹಿಸುವವರಿಗೆ ಗೂತ್ತು ಇದರ ಕಷ್ಟ. ನಾನು ಇದ್ಯಾವುದಕ್ಕೂ ತಯಾರಾಗಿರಲಿಲ್ಲವಾದ್ದರಿಂದ ಗಲಿಬಿಲಿಯಾದದ್ದು ಸತ್ಯ. ಯಾವ ಸ್ಮಶಾನಕ್ಕೆ ಕೊಂಡೊಯ್ಯ ಬೇಕು ? ಅಲ್ಲಿಯೇ ಯಾಕೆ? ನಿಮ್ಮ ತಂದೆಯವರ ಕೊನೆ ಅಸೆ ಅದಾಗಿತ್ತೆ ? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗುತ್ತದೆ. ಮತ್ತೆ ಯಾರು ನಿಮಗೆ ಸಹಕಾರ ಕೊಡುವರು? ಯಾರು ಇವರು ನಮ್ಮ ಕಾರ್ಯಕ್ಕೆಲ್ಲ ಬರಲಿಲ್ಲ, ನಾವೇಕೆ ಇವರ ಕಾರ್ಯಕ್ಕೆ ಸಹಕರಿಸಬೇಕು ಎಂದು ಮುಖ ತಿರುಗಿಸುವವರು? ಎಂದು ಲೆಕ್ಕಾಚಾರ ಹಾಕಲು ಸಾಧ್ಯವಿಲ್ಲ. ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಅಲ್ಲಿ ನಡಿಯುವ ವಿಧಿ ವಿಧಾನಗಳನ್ನು ನೋಡುತ್ತಾ ಅವುಗಳ ಅರ್ಥ ಏನಿರಬಹುದೆಂಬ ಕುತುಹಲವನ್ನು ಹತ್ತಿಕ್ಕುತ್ತ ಕಾರ್ಯ ನಿರ್ವಹಿಸುತ್ತಿರಬೇಕು. ಅಲ್ಲಿ ಯಾರು ಬರುತ್ತಾರೆ, ಯಾರು ಸಹಕರಿಸುತ್ತಾರೆ ಎಂಬುದು ಪೂರ್ವ ನಿರ್ಧರಿತ ಎಂದನಿಸುತ್ತದೆ. ನಾವು ಜೀವವಿರುವಾಗ ಇವನು ಬರುತ್ತಾನೆ ನಾನು ಸತ್ತಾಗ ಬರಬಹುದು, ಇವನು ಬರಲಾರ ಎಂದು ಅಂದು ಕೊಳ್ಳುವುದು ಶುದ್ಧ ಸುಳ್ಳು.

ಎಲ್ಲವೂ ಮುಗಿದು, ಶವ ಸಾಗಿಸುವ ವಾಹನವು ಸ್ಮಶಾನದಲ್ಲಿ ನಿಂತಾಗ, ಇದೇ ಕೊನೆಯ ಬಾರಿ ತಂದೆಯ ಮುಖ ನೋಡುವುದು ಎಂದು ಅರಿವಾಗುವಾಗ ಓಡಲೊಡೆದು ಬರುವ ದುಃಖವು ಅವರ್ಣನೀಯ. ಪಾರ್ಥಿವ ಶರೀರದ ಮೇಲೆ ಒಂದೊಂದು ಕಟ್ಟಿಗೆಯನ್ನು ಇಡುವಾಗ ಸ್ವತಃ ನಮ್ಮ ಮೇಲೆ ಕಬ್ಬಿಣದ ಕಂಬಗಳನಿಟ್ಟ ಭಾವನೆ. ಇದೆಲ್ಲವನ್ನು ತೊರೆದು ಅಪ್ಪನ ಕೈ ಹಿಡಿದು, ಎಬ್ಬಿಸಿ, ಎಳೆ ಮಗುವಾಗಿದ್ದಾಗ ಅವರ ಹೆಗಲೇರಿ, ಇಲ್ಲಿಂದ ಬಹುದೂರ ಸಾಗುವ ಅಪ್ಪ ಎಂದು ಚೀರಿ, ಅವರನ್ನು ಕರೆದುಕೊಂಡು ಹೋಗುವ ಆಸೆ ಮನಸ್ಸಿಗೆ ಒಂದು ಮೂಲೆಯಲ್ಲಿ. ಆದರೆ ನೈಜತೆಯ ಅರಿವು, ಅಸಹಾಯಕನಾಗಿ ಅವರ ಪಾರ್ಥಿವ ಶರೀರಕ್ಕೆ ಕೊಳ್ಳಿ ಇಡುವಾಗ ಮನದಲ್ಲಿ ಇದ್ದ ಅರಣ್ಯ ರೋದನವು, ಕಂಬನಿಯು ಕಟ್ಟೆ ಒಡೆದು ಕಂಗಳಲ್ಲಿ ನದಿಯಂತೆ ಧುಮ್ಮಿಕ್ಕುತ್ತಿತ್ತು. ಅವರಿಗೆ ಸೂಜಿಯಿಂದ ಚುಚ್ಚುವಾಗ ನೋಡಲಾಗದ ನೋವು ಇನ್ನು ಕೊಳ್ಳಿ ಇಡಬೇಕೆಂದು ಅರಿವಾದಾಗ ಪೂರ್ಣ ದೇಹವು ಬೆವರಿ ಕಂಪಿಸಿದ್ದು ಸುಳ್ಳಲ್ಲ. ಅದೊಂದು ಕೇವಲ ಕೊಳ್ಳಿ ಇಡುವವನಿಗೆ ಮಾತ್ರ ತಿಳಿಯುವ ವೇದನೆ. ಹುಟ್ಟಿದ್ದಾಗಿಂದ ಆಲದ ಮರದಂತ್ತಿದ್ದ ಅಪ್ಪನ ಎದೆಯಲ್ಲಿ ಪ್ರೀತಿಯ ಕನಸ್ಸುಗಳ ಗೂಡು ಕಟ್ಟಿ ಮಾತ್ರ ಗೊತ್ತಿದವನಿಗೆ ಇಂದು ಕೊಳ್ಳಿ ಇಡಬೇಕೆಂದು ಅರಿವಾದಾಗ, ಹರಿಶ್ಚಂದ್ರನು ಸ್ಮಶಾನಪಾಲಕನಾಗಿ ರೋದಿವುಸುವುದನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುವ ರಾಘವಾಂಕನ ಪ್ರತಿಯೊಂದು ಪದಗಳು ಎದೆಯನ್ನು ಸೀಳಿದಂತೆ ಭಾಸವಾಗುತಿತ್ತು, ನಾವು ಅವರ ವಿದ್ವತ್ತಿನ ಬೇರುಗಳನ್ನು ಹಿಡಿದು ಜೋಕಾಲಿ ಆಡಿದ್ದ ನೆನಪು.
 ಇಂದು ಆ ಆಲದ ಮರವೇ ಬೆಂಕಿಯ ಕೆನ್ನಾಲೆಗಳಲ್ಲಿ ಬೆಂದು ಭಸ್ಮವಗುತ್ತಿರುವಾಗ ಆಕಾಶವೇ ಕಳಚಿ ಬಿದ್ದಂತಾಯಿತು. ನಾನು ಸ್ವತಃ ತಂದೆಯಾದರೂ ಕೂಡ ಇಂದು ಅಪ್ಪನನ್ನು ಬಿಟ್ಟು ಬೇರಾರು ಬೇಕಾಗಿರಲಿಲ್ಲ. ಬೆಂಕಿಯ ಕೆನ್ನಲೆಗಳು ಆಗಸದತ್ತ ಚಾಚಿದಾಗ ಮಳೆಯ ಹನಿಗಳು ಚಿಟ ಚಿಟನೆ ಜಿನುಗಲು ಪ್ರಾರಂಭಿಸಿತು. ಇಂದು ಅವರ ಭೌತಿಕ ಶರೀರವು ದಟ್ಟ ಹೊಗೆಗಳೆಡೆಯಲ್ಲಿ ಚಿತಾಭಸ್ಮವಾಗುವುದರೆಡೆಗೆ ಹೆಜ್ಜೆ ಹಾಕಿತ್ತು. ಇನ್ನು ಎರಡು ದಿನ ಅವರ ದೇಹವು ಈ ಬ್ರಹ್ಮಾಂಡದ ಸಂಚಾಲಕನಾದ ಅಗ್ನಿಯಲ್ಲಿ ಶುದ್ಧವಾಗಿ ಭಸ್ಮವಾಗಿ ತ್ರಿವೇಣಿ ಸಂಗಮದಲ್ಲಿ ಹರಿಯಲು ಸಜ್ಜಾಗುತಿತ್ತು. ಜೀವನ ಇಂದು ಮಗ್ಗುಲು ಬದಲಿಸಿತ್ತು . ಹುಟ್ಟು, ವಿಧ್ಯಾಭ್ಯಾಸ, ಕೆಲಸ, ಮದುವೆ , ಮಕ್ಕಳು ಹಾಗೂ ಆಪ್ತರ ಸಾವು ಹೀಗೆ ಜೀವನದ ವಿರಾಟ ಸ್ವರೂಪದ ದರ್ಶನವಾಗಿತ್ತು.
ಅದೇ ಸಮಯದಲ್ಲಿ ಕೇರಳ ಹಾಗೂ ಕೊಡಗಿನಲ್ಲಿ ಪ್ರಕೃತಿಯ ರುದ್ರ ನರ್ತನದಲ್ಲಿ ಮಡಿದ ಅನೇಕ ಜೀವಗಳಿಗೆ ಚಿರಶಾಂತಿ ದೊರಕಲೆಂದು ಮನ ಹಾರೈಸಿತ್ತು. ಆದರೆ ಈ ಮರಣ ಪ್ರಕ್ರಿಯೆಯು ಮತ್ತೊಂದು ಜೀವಗಳಿಗೆ ಜೀವನದ ದಾರಿ ಎಂಬ ಅರಿವು ಮೂಡಿದ್ದು ಸ್ಮಶಾನಕ್ಕೆ ಬೇಕಾದ ಹಾಗೂ ನಂತರದ ಪ್ರಕ್ರಿಯೆಗಳಿಗೆ ಪರಿಕರಗಳನ್ನು ಕೊಂಡುಕೊಳ್ಳುವಾಗಲೇ. ಒಬ್ಬ ವ್ಯಕ್ತಿಯ ಸಾವು ಇನ್ನೊಬ್ಬ ವ್ಯಕ್ತಿಗೆ ಬಾಳಾಗ ಬಲ್ಲದೆಂಬುದು ಅರಿತದ್ದು ನಾನೀಗಲೇ.....
Final word- ಈ ಬ್ಲಾಗ್ನಿಂದ ಜೀವನದಲ್ಲಿ ತಂದೆ ಸಾವಿಗೀಡಾದಾಗ ಕೊಳ್ಳಿ ಇಡುವವನ ಆಂತರ್ಯದಲ್ಲಿ ಉಂಟಾಗುವ ಸಂಘರ್ಷಾತ್ಮಕ ಬಿರುಗಾಳಿಯ ಕಿರುಪರಿಚಯ ನೀಡಿದ್ದೇನೆ.

Comments

Unknown said…
Our sincere prayers to your family. I don’t have words to console you. Tc

Popular posts from this blog

ನಿಮಗೇನಾದರೂ ಅರ್ಥವಾಯಿತೇ???

ಸಾವಿನರಮನೆಯಲ್ಲಿ

ಕೆಲಸದ ಸ್ಥಳದಲ್ಲಿನ ರಾಜಕೀಯ- Office politics