ಕಾಲವಾಗುವಾಗ ಕೋಲ ಕಟ್ಟುವವರು.




ನಮ್ಮ ಮನೆಗೆ ಸದ್ದಿಲ್ಲದೇ ಸಾವು ಹೆಜ್ಜೆ ಇಟ್ಟಿತು. ಅವರ ಪ್ರಾಣ ಹೋಗುವಾಗ ನಾನು ಅಪ್ಪನ ಬಳಿಯಲ್ಲಿಯೇ ಮಲಗಿದ್ದೆ. ಉಸಿರು ನಿಂತಾಗ ಬಳಿಯಲ್ಲೇ ಇದ್ದೆ. ಅವರ ECG ಅಡ್ಡವಾದ ಗೆರೆಯಾದಾಗ ಅಸಹಾಯಕನಾಗಿ ನಿಂತು ನೋಡಿದ್ದೆ. ಅವರು ಆಸ್ಪತ್ರೆಗೆ ಸೇರಿ ಮೂರು ವಾರಗಳು ಕಳೆದು ಹೋಗಿತ್ತು. ಅದಾಗ ಮನಸ್ಸಿಗೆ ಮೂಡಿ ಬಂದ ಪ್ರಥಮ ಭಾವನೆ ಇನ್ಸೂರೆನ್ಸ್ ಇದ್ದರೆ ಎಷ್ಟು ಸುಲಭವಾಗುತ್ತಿತ್ತು ಎಂಬುದು. ಯಾಕೆಂದರೆ ಅಸ್ಪತ್ರೆಯ ಫ್ಲೋರ್ ಕೂರ್ಡಿನೆಟರ್ ನನ್ನ ಕೈಯಲ್ಲಿ ದೊಡ್ಡ ಮೊತ್ತದ ಬಿಲ್ಲನ್ನು ಕೊಟ್ಟು ಕಟ್ಟೆಂದು ಅಪ್ಪಣೆ ಇತ್ತು ಹೋಗಿದ್ದಳು. ಅಪ್ಪ ಎಂದಿಗೂ ಇನ್ಸೂರೆನ್ಸ್ ಬಗ್ಗೆ ಯೋಚನೆ ಮಾಡಲಿಲ್ಲ. ನಾನು ಮಾಡಿ ಕೊಟ್ಟ ಇನ್ಸೂರೆನ್ಸ್ ಅನ್ನು ರಿನೀವ್ ಮಾಡಿಸಿರಲಿಲ್ಲ. ಅವರ ಕಾಲಕ್ಕೆ ಅಂತ ಒಂದು ಪರಿಕಲ್ಪನೆ ಇರಲಿಲ್ಲ. ಆಗಿನ್ನೂ ಹುಟ್ಟು, ಜೀವನ ಹಾಗೂ ಸಾವು ವ್ಯಾಪಾರವಾಗಿರಲಿಲ್ಲ. ಚಾರ್ವಾಕ ಸಿದ್ದಾಂತವು ಇನ್ನೂ ಮರುಹುಟ್ಟು ಪಡೆದಿರಲಿಲ್ಲ. ಆದರೆ ಈಗ ಎಲ್ಲವೂ ವ್ಯಾಪಾರವಾಗಿ ಬಿಟ್ಟಿದೆ. ಅಸ್ಪತ್ರೆಯ ಖರ್ಚು ವೆಚ್ಚ ನಾವೇ ಬರಿಸ ಬೇಕಾಗಿ ಬಂತು. ನಾನು ದೇಶ ಬಿಟ್ಟು ಮಲೇಷ್ಯಾಗೆ ಹೊಟ್ಟೆ ಪಾಡಿಗೆ ಹೋಗಿ ಕೆಲವೇ ವರ್ಷಗಳಾಗಿತ್ತು. ಹಾಗಾಗಿ ಹಣದ ಗಂಟೇನನ್ನು ರಾಶಿ ಹಾಕಿರಲಿಲ್ಲ. ತಾಯಿ ಸರಸ್ವತಿಯ ಕೃಪೆ ನನ್ನ ಮೇಲೆ ಅಪಾರವಾಗಿತ್ತು ಆದರೆ ಯಾಕೋ ತಾಯಿ ಲಕ್ಷ್ಮಿಯು ನನ್ನ ಮೇಲೆ ಸದಾ ಮುನಿಸಿ ಕೊಂಡಿರುತ್ತಾಳೆ. ಅವಳನ್ನು ಓಲೈಸುವ ಕಲೆ ಕರಗತವಾಗಿಲ್ಲ. ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಎಂಬ ಸಬ್ಜೆಕ್ಟ್ ನನಗೆ ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ.
ಹಾಗಾಗಿ ಕಷ್ಟದ ಸಮಯವನ್ನು ನಿಭಾಯಿಸುವುದು ಕೊಂಚ ಕ್ಲಿಷ್ಟಕರವಾದ ಕಾರ್ಯವಾಗಿತ್ತು . ಕೊನೆಗೆ ಅವರು ಕೊಂಚ ಹುಷಾರಾದ ಮೇಲೆ ನಾವು ವಿಧಿಯಿಲ್ಲದೇ ಜನರಲ್ ವಾರ್ಡಿಗೆ ಸೇರಿಸಬೇಕಾಯ್ತು. ಗುತ್ತಿಗೆ ಕೆಲಸವಾದ್ದರಿಂದ ರಜೆ ಸಿಗುವುದು ದುಸ್ತರವಾಯಿತು. ಆದರೂ ತಂದೆಯವರ ಆಹಾರ, ವಸತಿ , ಔಷಧಕ್ಕೆ ಯಾವುದೇ ತೊಂದರೆಯಾಗದಂತೆ ನನ್ನ ಕೈಲಾದಷ್ಟು ನೋಡಿಕೊಂಡೆ. ಇದಕ್ಕೆ ಸಾಕ್ಷಿಗಳು ಹಲವಾರು ಇವೆ. ನಾನು ಯಾರಿಗೂ ಅದನ್ನು ಕೊಡಬೇಕಾಗಿಲ್ಲ. ಯಾಕೆಂದರೆ ನಮ್ಮ ಪ್ರೀತಿ ಪಾತ್ರರಿಗೆ ಅದರ ಅವಶ್ಯಕಥೆ ಇಲ್ಲ. ಉಳಿದವರಿಗೆ ಅವರು ಕಟ್ಟಿಕೊಂಡ ವೇಷದ ಹಿಂದೆ ಕೊಟ್ಟರೂ ಕಾಣುವುದಿಲ್ಲ. ಈ ಕೋಲಕಟ್ಟುವವರು ಅಂದರೆ ಕಲಾವಿದರಲ್ಲ. ಇವರ ಬಗ್ಗೆ ನಾನು ಬರೆಯಲು ಕಾರಣ ರೆಕ್ಕೆ ಪುಕ್ಕ ಕಟ್ಟಿಕೊಂಡು ಎಲ್ಲೆಡೆಗೆ ಹರಡಿದ ಸುಳ್ಳು ವದಂತಿಗಳು.  ಇವರು ನಮ್ಮ ಸಮಾಜದ  ಒಂದು ಗಣಗಳು. ಇವು ಸಾವಿರಾರು ವರ್ಷದಿಂದ ಇದ್ದಿರಬಹುದು ಎಂದು ಮೂಕಜ್ಜಿಯ ಭಾಷ್ಯದಿಂದ ತಿಳಿಯುತ್ತದೆ. ಯಾರ ಮನೆಯಲ್ಲಾದರೂ ಏನಾದರೊಂದು ಕಷ್ಟ ಎದುರಾದರೆ, ಜನ್ಮವಾದರೆ, ಮನೆ ಕಟ್ಟಿದರೆ ಅಥವಾ ಸಾವಾದರೆ ಈ ಗಣಗಳ ಚಟುವಟಿಕೆ ಆರಂಭಗೊಳ್ಳುತ್ತವೆ. ಇವು ಆಕಾಶದಿಂದ ಉದುರುವುದಿಲ್ಲ. ಇವು ನಮ್ಮ ನಿಮ್ಮೊಡನೆ ಇದ್ದು ಹಿತೈಷಿಗಳಂತೆ ನಟಿಸುವ ಜನರು. ಇವು ಕೀಚಕನ ವಂಶದವರೆಂದು ಕಾಣುತ್ತದೆ.
ಅಂತೆಯೇ ನಮ್ಮ ತಂದೆ ಆಸ್ಪತ್ರೆಯಲ್ಲಿ ಸೇರಿದಾಗಿಂದ ಇವು ಹಿತೈಷಿಗಳ ಸೋಗಿನಲ್ಲಿ ಬಂದು ಹೋಗ ತೊಡಗಿದವು, ಇಲ್ಲಾ ಫೋನ್ ಮಾಡಿ ವಿಚಾರಿಸಲು ಆರಂಭಿಸಿದವು ಮತ್ತೆ ಕೆಲವು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತಿದ್ದೇವೆ, ನಿಮ್ಮ ತಂದೆಗೆ ಉತ್ತಮ ಚಿಕಿತ್ಸೆ ಕೊಡಿಸುತ್ತೇವೆ ಎಂದು ಆಶ್ವಾಸನೆ ನೀಡಿ ತಮ್ಮ ತಿಂಗಳ ಇನ್ಕ್ರಿಮೆಂಟನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಕೊಡುವ ಇನ್ನೊಂದು ವಿಧದ ಗಣಗಳು ಬಂದವು. ತಂದೆಯ ಮೇಲಿನ ಕಳಕಳಿಯಾಗಲಿ, ನಮ್ಮ ಅರ್ಥಿಕ ಸಂಕಷ್ಟವಾಗಲಿ ದೈಹಿಕ ಸಹಾಯ ಮಾಡುವ ಉದ್ದೇಶವಾಗಲಿ ಇವುಗಳಿಗೆ ಕನಸು ಮನಸ್ಸಿನಲ್ಲೂ ಇರಲಿಲ್ಲ. ಇವುಗಳ ಕಣ್ಣು ಹಾಯುತಿದ್ದದ್ದು ಕೇವಲ ಕುಂದು ಕೊರತೆಗಳತ್ತ. ಇದು ಯಾವ ವಾರ್ಡ್? ಯಾರು ಡಾಕ್ಟ್ರು? ಸ್ಪೆಷಲ್ ವಾರ್ಡಿಗೆ ಏಕೆ ಹಾಕಲಿಲ್ಲ? ಇನ್ಸೂರೆನ್ಸ್ ಮಾಡಿಸಲಿಲ್ಲವೇ? ಯಾಕೆ ? ಛೆ! ಈ ಆಸ್ಪತ್ರೆ ಒಂದು ಚೂರು ಸರಿಯಿಲ್ಲಪ್ಪ, ಯಾರು ಯಾರು ಬಂದು ಇವರನ್ನು ನೋಡಿಕೊಳ್ಳುತಿದ್ದೀರಿ? ಇಂತಹುದೇ ಸಾವಿರಾರು ಸಂಬಂಧವಿಲ್ಲದ ಅಹಂಕಾರದಿಂದ ಕೂಡಿದ ಪ್ರಶ್ನೆಗಳ ಸುರಿಮಳೆ. ಒಂದು ಬಾರಿಯೂ ಕೂಡ ಯೋಗಕ್ಷೇಮದ ಮಾತು ಹೊರಗೆ ಬರಲಿಲ್ಲ. ಕೆಲವೊಮ್ಮೆ ಮೊಸಳೆ ಕಣ್ಣೀರು ಬೇರೆ. ಇವುಗಳನ್ನು ಕಿತ್ತೊಗೆಯಲು ಸಾಧ್ಯವಿಲ್ಲ. ಏಕೆಂದರೆ ಇವು ಹತ್ತಿರದ ಗೆಳೆಯರು, ಸಂಬಂಧಿಗಳು. ಅಲ್ಲಿಯೇ ನಿಂತು ಕಷ್ಟ ಕಂಡು ಕೇಕೆ ಹಾಗುತ್ತ ನಗುತ್ತಿದ್ದವು. ಹೊರಗೆ ಹೋಗಿ whatsapp ಅನ್ನು ತೆರೆದು ಇಲ್ಲಸಲ್ಲದ ಆರೋಪಗಳನ್ನು, ನಿಜವನ್ನು ತಿರುಚಿ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿ, ಈ ಊರು, ಪಕ್ಕದ ಊರು ಹೀಗೆ ದೇಶ ವಿದೇಶದಲ್ಲಿ ಸುದ್ದಿ ಹಬ್ಬಿಸಿ ವಿಕೃತ ಆನಂದ ಪಡೆಯುವ ಪೈಶಾಚಿಕ ಪ್ರಾಣಿಗಳು.
ಮತ್ತೆ ಇವು ಪುನಃ ಬಂದು ವಕ್ಕರಿಸುವುದು ಸಾವು ಸಂಭವಿಸಿದಾಗ. ನಾವು ಶೋಕದ ಕಡಲಿನಲ್ಲಿ ಮುಳುಗಿರುವಾಗ ಇವು ಮಾರ್ಗದರ್ಶಿಯ ರೂಪದಲ್ಲಿ ಅಥವಾ ಇಡೀ ಪ್ರಹಸನವನ್ನು ನೋಡಿ ವಿಕೃತ ಖುಷಿಪಡಲು ಬಂದು ಸೇರುತ್ತವೆ. “ಅವನು ನನಗೆ ೧೨ ಘಂಟೆಗೆ ಫೋನ್ ಮಾಡಿದ, ಬರಲು ಕಾರು ಕಳಿಸಲಿಲ್ಲ, ನಾನು ಮುಖ್ಯಸ್ಥ , ನನ್ನ ಮನಸ್ಸಿಗೆ ಬಂದಂತೆ ಕಾರ್ಯ ನಡಿಯಬೇಕು, ಏಕೆಂದರೆ ನಾನು ಸ್ವರ್ಗಕ್ಕೆ ಕಳಿಸುವವನು, ನೀವು ಮಾಡುವುದೆಲ್ಲ ಕೇವಲ ಅನುಕೂಲ ಶಾಸ್ತ್ರ, ನಮ್ಮ ಊರಿನ ಯಾವುದೇ ಕಾರ್ಯಕ್ಕೆ ಕುಟುಂಬ ಸಮೇತರಾಗಿ ಬರಲಿಲ್ಲ, ನಮಗೆ ಆಮಂತ್ರಣ ಪತ್ರಿಕೆ ಕಳಿಸಲಿಲ್ಲ- ಹೀಗೆ ದೂರುಗಳು  ಒಂದೋ ಎರಡೋ? ಸಹಸ್ರಾರು.  ಇವುಗಳ  ಅಹಂಕಾರದ ಚುಚ್ಚು ಮಾತುಗಳು ಎಂತಹ ಗಟ್ಟಿ ಮನಸ್ಸನ್ನು ಭೇದಿಸಿ ಸೀಳ ಬಲ್ಲವು. ನಾವು ಮಾನಸಿಕ, ಆರ್ಥಿಕ ಹಾಗೂ ಸಾಮಾಜಿಕ ರೀತಿಯಲ್ಲಿ  ತತ್ತರಿಸುವಾಗ ಇವುಗಳು ಪರ್ವ ಆಚರಿಸುವವು.
ಇದುವೇ ಗಣಗಳಿಂದಾಗಿ ಮೂಕಜ್ಜಿ ಮೂಕಳಾದಳಲ್ಲವೇ? ಈ ಗಣಗಳು ದೈವಿಕ ಸೃಷ್ಟಿಯೇ.” ನಿಂದಕರಿರಬೇಕು ಬಾಳಲ್ಲಿ ...” ಎಂದು ಮಹಾತ್ಮರು ಹೇಳಿದ್ದು ಸುಳ್ಳಲ್ಲ. ಈ ಗಣಗಳೇ ನಮಗೆ ಜೀವನದಲ್ಲಿ ಮರುಹುಟ್ಟು ಪಡೆಯಲು, ಜೀವನವನ್ನು ಮತ್ತೆ ಹಳಿಗೆ ತರಲು ಪ್ರೇರಕ ಶಕ್ತಿಯಾಗುತ್ತವೆ. ಈ ಕೋಲ ಕಟ್ಟುವ ಗಣಗಳ ಬಗ್ಗೆ ಮಾತನ್ನು ಆಡುತ್ತಾ ಕಷ್ಟದ ಸಮಯದಲ್ಲಿ ದೇವರಂತೆ ಸಹಾಯ ಮಾಡುವ ನಿಜವಾದ ಬಂಧುಗಳನ್ನು ಸ್ಮರಣೆ ಮಾಡದಿದ್ದರೆ ಈ ಲೋಕದ ಮೇಲಿನ ವಿಶ್ವಾಸವೇ ಮಾಯವಾಗಿ ಬಿಡುತ್ತದೆ. ಇಂಥಃ ಪ್ರಾತಃಸ್ಮರಣೀಯ ಜನರಿರುವುದರಿಂದಲೇ ಈ ಜಗತ್ತು ಮತ್ತು ಕಾಲಗಳು ನಡೆಯುತ್ತಿವೆ. ಇಂತಹ ದೇವಗಣಗಳಿಗೆ ಸಾಷ್ಟಾಂಗ ನಮಸ್ಕಾರಗಳು.
ಕೊನೆಯದೊಂದು ಮಾತು. ನಾನು ಸಾವಿನ ಅರಮನೆಯಲ್ಲಿ ನಿರಂತರ ಹತ್ತಕಿಂಥ ಹೆಚ್ಹು ದಿನಗಳಿದ್ದೆ. ಆದರೆ ಯಮನು ಕೋಣದ ಮೇಲೆ ಭೀಕರ ರೂಪದಲ್ಲಿ ಬಂದದ್ದನ್ನು ಕಾಣಲಿಲ್ಲ. ಅವನು ಸುತ್ತಮುತ್ತಲೇ ಇದ್ದ ಅರಿವಾಗುತ್ತಿತ್ತು. ಪ್ರಾಣ ಪಕ್ಷಿ ಹಾರಿ ಹೋಗುವ ಕೆಲವು ಜೀವಾತ್ಮರನ್ನು ಕಂಡೆ. ಇದು ಅವನ ಇರುವಿಕೆಯನ್ನು ಸಾರಿ ಹೇಳುತ್ತಿತ್ತು. ಆದರೆ ಎಲ್ಲಿಯೂ ಅವನ ಭೀಭತ್ಸ ಸ್ವರೂಪವನ್ನು ಕಾಣಲಿಲ್ಲ . ಪ್ರಾಣವು ಹೋಗುವವರೆಗೆ ನರಳಾಡುತ್ತಿದ್ದವರು ಕೊನೇ ಗಳಿಗೆಯಲ್ಲಿ ಶಾಂತರಾದರು. ಮೂಕಜ್ಜಿಯು ಸುಬ್ರಾಯ ಭಟ್ಟರಲ್ಲಿ “ ಯಾಕೆ ಸಾಯಲು ಹೆದರಬೇಕು? ಅದು ಅಮ್ಮನ ಮಡಿಲಿಗಲ್ಲವೇ ಹೋಗುವುದು? ಯಾರಾದರು ತಾಯಿಯ ಬಳಿಗೆ ಹೋಗುವಾಗ ಅಳುವರೆ?” ಎಂದು ಮುನಿಸಿನಿಂದ ಕೇಳುತ್ತಾಳೆ. ಅವಳ ಮಾತಿನ ಒಳಾರ್ಥದ ಪ್ರಾತ್ಯಕ್ಷಿಕೆ ನನಗಾಗ ಆಯಿತೆ? ಇಲ್ಲವೇ? ನಾನರಿಯೆನು. ಆದರೆ ಇದೊಂದು ಮಾತ್ರ ಅರ್ಥವಾಯಿತು . ಆ ಮಹಾತಾಯಿ “ಬಾ ಕಂದ” ಎಂದು ಪ್ರೀತಿಯಿಂದ ಕರೆಯುತ್ತಾಳೆ. ನಾವು ಅಮ್ಮನೆಡೆಗೆ ಸಾಗುತ್ತೇವೆ. ಅವಳೊಂದಿಗೆ ಹೋದವರು ಎಂದಿಗೂ ತಿರುಗಿ ಬರುವುದಿಲ್ಲ. ತಾಯಿಯನ್ನು ಬಿಟ್ಟು ಮಗುವು ಎಂದಾದರೂ ಹಿಂತಿರುಗಿ ಬರುವುದುಂಟೆ? ಜನನವೂ ಅವಳಿಂದ, ಮರಣವೂ ಅವಳೆಡೆಗೆ, ನಡುವಲ್ಲಿ ಜೀವನ ಪಯಣ. ಯಮ ಕಿಂಕರರು ಭೀಕರ ಮನುಷ್ಯ ಸ್ವರೂಪಿ ಜೀವಿಗಳಾಗಿರದೆ, ವೈಜ್ಞಾನಿಕ ದ್ರಿಷ್ಟಿಯಿಂದ ನೋಡಿದರೆ ಸೂಕ್ಷ್ಮ ಕ್ರಿಮಿಗಳಾದ - ಬ್ಯಾಕ್ಟೀರಿಯಾ ಹಾಗು ವೈರಸ್ಗಳೆ ಇರಬಹುದಲ್ಲವೇ?ತಂದೆಯವರು ಕೂಡ ತಮ್ಮ ಅಮ್ಮನೊಂದಿಗೆ ಹೋದರು ತಿರುಗಿ ಬಾರದ ಲೋಕಕೆ. ನಾನು ತಬ್ಬಲಿಯಾದೆನು ತಕ್ಕ ಮಟ್ಟಿಗೆ, ಆದರೆ ಮೂಕಜ್ಜಿ ಹೇಳುವಂತೆ, ಎಲ್ಲೆಡೆಯೂ ಆ ಮಹಾತಾಯಿ ಇರುವಾಗ ನಾವು ತಬ್ಬಲಿಯಗುವುದು ಅದರೂ ಹೇಗೆ?


Comments

Popular posts from this blog

ಮದುವೆಯಾಗಲಿ ಸರಿ ಹೋಗ್ತಾನೆ ಅಂತಾರಲ್ಲ ಯಾಕೆ?

ನಿಮಗೇನಾದರೂ ಅರ್ಥವಾಯಿತೇ???

ಸಾವಿನರಮನೆಯಲ್ಲಿ