ಸಾವಿನರಮನೆಯಲ್ಲಿ



ಸಾವೆಂಬುದು ಯಾರನ್ನೂ ಬಿಟ್ಟಿಲ್ಲ. ಹುಟ್ಟು ಎಂಬುದು ಹುಟ್ಟಿದಾಗಿಂದ, ಅದರೊಡನೆ ಸಾವು ಎಂಬುದು ಜನ್ಮ ತಾಳಿತ್ತು. ನಮಗೆ ಅದರ ಅರಿವಿದ್ದರೂ, ಅದು ಪರರಿಗೆ, ನಮಗೆ ತಟ್ಟಲಾರದು ಎಂಬ ಒಂದು ಹುಚ್ಚು ಧೈರ್ಯ ಆವರಿಸಿರುತ್ತದೆ.  ನನಗೂ ಕೂಡ ಹಾಗೆಯೇ ಹುಂಬು ಧೈರ್ಯವೊಂದು ಆವರಿಸಿ ಬಿಟ್ಟಿತ್ತು. ಈ ಆಸ್ಪತ್ರೆ ಎಂಬುದು ರೋಗದಿಂದ ಮುಕ್ತಿ ಪಡೆಯಲು ನಾವೇ ಕಟ್ಟಿಕೊಂಡ ಒಂದು ದೇಗುಲ. ಆದರೆ ಅದರೊಳಗಿನ ದೇವರು ಇನ್ನೂ ಜೀವಂತವಿದ್ದಾನೆಯೇ ಎಂಬುದು ಅವರವರ ಭಾವಕ್ಕೆ ಬಿಟ್ಟ ವಿಚಾರ.
ಅಂದು ಕೆಟ್ಟ ಗಳಿಗೆಯೊಂದು ಬಂದು ನಮ್ಮ ಮನೆಯ ಕದ ತಟ್ಟಿತ್ತು. ಅಪ್ಪ ಹಲವು ಬಾರಿ ಅಸ್ಪತ್ರೆಯ ಮುಖ ದರ್ಶನ ಮಾಡಿ ಬಂದಿದ್ದರು. ಈ ಡಯಾಬಿಟಿಸ್ ಹಾಗೂ ಹೈಪರ್ಟೆನ್ಶನ್ ಎಂಬ ಎರಡು ಮಾರಿಗಳು ಸದ್ದಿಲ್ಲದೆ ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಒಮ್ಮೆ ಒಳ ಹೊಕ್ಕಿತೆಂದರೆ ಮತ್ತೆ  ನಮ್ಮ ದೇಹವು ಸುಟ್ಟು ಬೂದಿಯಾದ ಮೇಲೆಯೇ ಅವಕ್ಕೆ ತೃಪ್ತಿ. ಇವು ಅಧುನಿಕ ಕಾಲದ ಚಂಡ-ಮುಂಡರು. ಈ ಹೆಮ್ಮಾರಿಗಳು ನಮ್ಮ ತಂದೆಯವರು ಕೇವಲ ೨೭ನೇ ವಯಸ್ಸಿನವರಾಗಿದ್ದಾಗಲೇ ಅವರನ್ನು ಪೀಡಿಸ ತೊಡಗಿದವು. ಆದರೆ ನಾವೆಲ್ಲರೂ ಎದೆಗುಂದದೆ ಅದರ ವಿರುದ್ದ, ಅದರೊಂದಿಗೆ, ಅದರ ಮೇಲೆ, ಅದರ ಕೆಳಗೆ, ಜೊತೆಗೆ, ಹೀಗೆ ಬದುಕುತ್ತಾ ಬಂದಿದ್ದೆವು. ಈ ಯುದ್ದವು ಸುದೀರ್ಘವಾದ, ದಶಕಗಳಷ್ಟು ಉದ್ದ ಸಾಗಿದ ಯುದ್ಧವಾಗಿತ್ತು. ಕೆಲೆವೊಮ್ಮೆ ನಾವು ಗೆದ್ದೆವೆಂದು ಅನಿಸಿತ್ತು. ಆದರೆ ಇದು ಹುಸಿ ಭಾವನೆ ಎಂದು ತಿಳಿಯಲು ಬಹುಕಾಲ ಬೇಕಾಗಲಿಲ್ಲ. ದಣಿವರಿಯದ  ಈ ಮಾರಿಗಳು, ದಿನ ಕಳೆದಂತೆ ಬಲಿಷ್ಠವಾಗುತ್ತಾ ಸಾಗಿ, ತಕ್ಕ ಸಮಯಕ್ಕೆ ಕಾದು, ದಾಳಿ ಮಾಡಿ ನಮ್ಮನ್ನು, ನಮ್ಮ ಅಂಗಾಂಗಳನ್ನು ಹರಿದು ಮುಕ್ಕುತ್ತವೆ ಮತ್ತು ತಮ್ಮ ಬಂಧು ಬಳಗದವರನ್ನು ಕರೆದು ನಮ್ಮನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತವೆ.
ಈ ಬಾರಿ ಅಮ್ಮನಿಂದ ಕರೆ ಬಂದಾಗ, ಯಾಕೋ ನನಗರಿಯದೆ ನನ್ನ ಎದೆಯು ಸಣ್ಣಗೆ ಕಂಪಿಸಿದ್ದಂತೂ ಸತ್ಯ. “ ಅಪ್ಪ ಅನ್ನ ನೀರು ಎರಡನ್ನೂ ತ್ಯಾಗ ಮಾಡಿಬಿಟ್ಟಿದ್ದಾರೆ, ಕೇವಲ ಶ್ವಾಸ ಮಾತ್ರ ಚಲಿಸುತ್ತಿದೆ, ಬೇಗ ಬಾರಪ್ಪ.” ಅಂದಾಗ ನನ್ನ ತುಟಿಯಲ್ಲಿನ ನೀರಿನ ಪಸೆ ಅಳಿಸಿ ಹೋಗಿ ಕಣ್ಣಂಚಲ್ಲಿ ಕಂಬನಿಯಾಗಿ ನನಗರಿವಿಲ್ಲದೆ ಹರಿದು ಹೋದದ್ದು ಅರಿವಾಗಲೇ ಇಲ್ಲ.ಅದಕ್ಕೆ ಸಕ್ಷಿಯದದ್ದು ಮಲೇಷ್ಯಾದ ಒಂದು ಸುಂದರ ನಗರಿ ಮೆಲಕ. ನಾನಿಲ್ಲಿ ಬಂದು ಕೇವಲ ಮೂರೇ ವರ್ಷವಾಗಿದ್ದು. ಇದು ಇತಿಹಾಸದಲ್ಲಿ ಪ್ರಸಿದ್ದವಾದ ನಗರಿ. ನಮ್ಮ ಪೂಜ್ಯ ಪುರಾಣಿಕ ಕಥೆಗಳಾದ ರಾಮಾಯಣ, ಮಹಾಭಾರತದಲ್ಲಿ ಕೂಡ ಈ ನಗರಿಯ ಉಲ್ಲೇಖವಿದೆಯಂದು ವಾಡಿಕೆ ಇದೆ.
ಮೆಲಕ ನಗರದ ಬಗ್ಗೆ ಮಾತನಾಡುವಾಗ, ಅಲ್ಲಿನ ಭೂತದ ಕಥೆಗಳ ಬಗ್ಗೆ ಹೇಳದೆ ಇರಲಾಗದು. ಈ ಕಥೆಗಳನ್ನು  ನಂಬಿದವರಿಗೆ ಭೂತಗಳು ಉಂಟು, ನಂಬದಿರದವರಿಗೆ ಇಲ್ಲ. ಈ ನಗರಿಯ ಬಗ್ಗೆ ಬರೆಯ ಬೇಕಾದರೆ ಒಂದು ಹೊಸ ಪುಸ್ತಕವೇ ಬರೆಯಬೇಕಾದೀತು. ನಾನು ಕೆಲಸ ಮಾಡುವ ಕಟ್ಟಡವು ನಿಂತಿರುವುದೇ ಒಂದು ಹಳೇ ಚೀನಿ ಸ್ಮಶಾನದ ಮೇಲೆ. ನನ್ನ  ಗೆಳೆಯರ ಸಂಗದವರು ಬುದ್ಧಿ ಬಂದಾಗಿನಿಂದಲೂ ಈ ಭೂತ ಪ್ರೇತ ಕಥೆಗಳನ್ನು ಕೇಳಿ, ನಿಜವೆಂದು ನಂಬಿ ನಟ್ಟು ನಡು ರಾತ್ರಿಯಲ್ಲಿ ಸ್ಮಶಾನದಲ್ಲಿ ಹುಡುಕಾಡಿದಂಥ ಮಂದ ಬುದ್ಧಿಗಳು.
ಅದೇ ಕುಥೂಹಲದಿಂದ ಮೆಲಕ ನಗರಿಯ ಭೂತ ಪ್ರೇತಗಳ ಕಥೆಯನ್ನು ಕೇಳಿ, ರಾತ್ರಿ ಒಬ್ಬನೇ ಹುಡುಕಾಡಿ ಚಿತ್ರ-ವಿಚಿತ್ರ ಅನುಭವಗಳಾದದ್ದು ಸತ್ಯ. ಇದನ್ನು ನಂಬದವರ ಬಳಿ ಹೇಳಿ ಗೇಲಿಮಾಡಿಸಿಕೊಂಡದ್ದು  ಕೂಡ ಸತ್ಯ. ಅಂದು ಬೆದರಿಸಿದ್ದ ಗಣಗಳು, ಇಂದು ನಾನು ಹೊರಟಾಗ “ ನಿನ್ನ ತಂದೆಗೆ ನಿನ್ನ ಪ್ರೀತಿಯ ಬಂಧನದಿಂದ ಬಿಡುಗಡೆಯನ್ನು ನೀಡು. ಅವರು ಚಿರಶಾಂತಿಯುಳ್ಳ ಲೋಕಕ್ಕೆ ಸಾಗುತ್ತಾರೆ. ಮಕ್ಕಳ ಪ್ರೀತಿಯ ಬಂಧನಕ್ಕೆ ಸಿಲುಕಿ ನರಳುತ್ತಿದ್ದಾರೆ, ಮುಕ್ತಿ ನೀಡು.” ಎಂದು ಪರಿ ಪರಿಯಾಗಿ ನನ್ನ ಕಿವಿಯಲ್ಲಿ ಉಸುರಿದಂತೆ ಭಾಸವಾಯಿತು. ಅದು ವಾಸ್ತವವೋ ಇಲ್ಲ ಭ್ರಮೆಯೋ ಒಂದು ನನಗೆ ಅರ್ಥವಾಗಲಿಲ್ಲ. ಆದರೆ ಮುಂದೆ ನಡೆಯುವ ಘಟನಾವಳಿಗಳ ಫಲಿತಾಂಶ ನನ್ನ ಒಳಮನಸ್ಸಿಗೆ ಅದಾಗಲೇ ತಿಳಿದಿತ್ತೋ ಏನೋ ಎಂಬಂತೆ ಕಣ್ಣೀರ ಕೋಡಿಯೇ ಧಾರಾಕಾರವಾಗಿ ಹರಿಯತೊಡಗಿತು. ಹೇಗೋ ನನ್ನನ್ನು ನಾನು ಸಂಭಾಳಿಸಿಕೊಂಡು ಫ್ಲೈಟ್ ಟಿಕೆಟ್ ಬುಕ್ ಮಾಡಿ ಕುಟುಂಬ ಸಮೇತನಾಗಿ ಹೊರಟೆ. ಗಡಿಬಿಡಿಯಲ್ಲಿ ನನ್ನ ಇಷ್ಟ ದೇವರಿರುರುವ ಮೊಬೈಲ್ ಫೋನ್ ಕಳೆದು ಹೋದಾಗ ಅಶುಭದ ಸೂಚಕವೆಂದು ನನ್ನ ಅವೈಜ್ಞಾನಿಕ ಮನಸ್ಸಿಗೆ ಅನಿಸಿತು. ಆದರೆ ನನ್ನ ಅಧುನಿಕ ಶಿಕ್ಷಣವನ್ನು ಪಡೆದ ವೈಜ್ಞಾನಿಕವಾದ ಮನಸ್ಸು ಮಾತ್ರ ಪ್ರಮಾಣವಿಲ್ಲದೆ ಯಾವುದನ್ನೂ ಒಪ್ಪಲು ಸಿದ್ಧವಿರಲಿಲ್ಲ.
ಈ ಯುದ್ಧದಲ್ಲಿ ಗೆದ್ದೇ ತೀರಬೇಕೆಂಬ ಛಲದೊಂದಿಗೆ ನಮ್ಮೂರಿಗೆ ಬಂದಿಳಿದೆ. ತಂದೆಯವರು ಪ್ರಜ್ಞೆಯನ್ನು ಕಳೆದುಕೊಂಡು ICU ನಲ್ಲಿ ಜೀವನ ಮರಣದ ಹೋರಾಟದಲ್ಲಿ ಮಲಗಿದ್ದರು. ಆ ದೃಶ್ಯ ಮನಸ್ಸನ್ನು  ಕಂಗೆಡಿಸತೊಡಗಿತ್ತು, ಧೈರ್ಯವೆಲ್ಲ ಉಡುಗಿ ಹೋಗಿ ವ್ಯಾಕುಲತೆಯು ಮನೆಮಾಡತೊಡಗಿತ್ತು. ಅಲ್ಲಿ ಬರುತ್ತಿದ್ದ ರಾಶಿ ರಾಶಿಯಾದ, ದುಗುಡ ದುಮ್ಮಾನಗಳಿಂದ ಕೂಡಿದ, ಹೊಸ ಹೊಸ ಜನಸಾಮಾನ್ಯರ ದಂಡು ಮನದಲ್ಲಿ ದಿಗಿಲು ಮೂಡಿಸಿತ್ತು. ಅನೇಕ ಜನರು, ವೈವಿಧ್ಯ ಸಂಸ್ಕಾರ, ನಡವಳಿಕೆ ಆದರೆ ಭಾವ ಮಾತ್ರ ಒಂದೇ – ಉಮ್ಮಳಿಸಿ ಬರುವ ದುಃಖ,
ಅಲ್ಲಿ ಯಮ ದೂತನಂತೆ ನಿಂತಿದ್ದ ಸೆಕ್ಯೂರಿಟಿ ಗಾರ್ಡ್ನಲ್ಲಿ ಅನುಮತಿಯನ್ನು ಕೇಳಿ ಹೊರಗೆ ಓಡೋಡಿ ಬಂದು, ಒಂದು ಸಲ ಸ್ವಚ್ಛವಾದ ತಾಜಾ ತಂಗಾಳಿಯನ್ನು ಸೇವಿಸಿದಾಗ ನಾನು ಜೀವಂತವಾಗಿರುವ ಅನುಭೂತಿ ಮನಸ್ಸಿನಲ್ಲಿ ಮೂಡಿ, ಬದುಕಿನ ಬಗ್ಗೆ ಮಗದೊಮ್ಮೆ ಕೊಂಚ ಆಶಾಭಾವನೆ ಉದಯಿಸಿತ್ತು. ದಿಕ್ಕು ತೋಚದೇ ನನ್ನ ಅಂಥರಂಗವು ಸೆಳೆದೆಡೆಗೆ ಹೆಜ್ಜೆ ಹಾಕಿದೆ. ನನ್ನ ಕಾಲುಗಳು ನನ್ನನ್ನು ಒಂದು ಪುಸ್ತಕಾಲಯದ ಮುಂದೆ ತಂದು ನಿಲ್ಲಿಸಿತ್ತು. ಯಾಕೋ ಏನೋ ನನಗೆ ತಿಳಿಯಲಿಲ್ಲ. ನೇರವಾಗಿ ನನ್ನನ್ನು ಅಲ್ಲಿ ಸುಂದರವಾಗಿ ಜೋಡಿಸಲಾಗಿದ್ದ ಪುಸ್ತಕಗಳೆಡೆಗೆ ಕೊಂಡೊಯ್ದಿತು. ಏನು ಕೊಂಡುಕೊಳ್ಳ ಬೇಕೆಂಬ ಕಿಂಚಿತ್ ಅರಿವು ನನಗಿರಲಿಲ್ಲ. ಆದರೆ ನನ್ನ ಕೈಗಳು ಒಂದು ಪುಸ್ತಕವನ್ನು ಆಗಲೇ ಆರಿಸಿ ಬಿಟ್ಟಿದ್ದವು. ಕಣ್ಣು ಬಿಟ್ಟು ನೋಡಿದೆ . ಅದು ಕಾರಂತರ ಜ್ಞಾನಪೀಠ ಪುರಸ್ಕಾರ ಪಡೆದ “ಮೂಕಜ್ಜಿಯ ಕನಸುಗಳು.”
ನಾನು ಮೌನವಾಗಿ ಹಣವನ್ನು ಪಾವತಿಸಿ ಮೂಕಜ್ಜಿಯನ್ನು ನನ್ನ ಹೃದಯ ಹತ್ತಿರ ಇಟ್ಟುಕೊಂಡು ICU ಎಡೆಗೆ ಹೊರಟೆ. ಈಗ ಮೂಕಜ್ಜಿ ಮತ್ತು ಸುಬ್ಬಣ್ಣರ ಪ್ರಭಾವವೇನೋ ಅರಿಯೆ, ನನ್ನ ಎದುರಿಗಿರುವ ಆಸ್ಪತ್ರೆಯು, ಮೂಕಜ್ಜಿಯ ಕನಸಿನಲ್ಲಿ ಬರುವ ಅನೇಕ ಕಥೆಗಳಲ್ಲಿ ಸೇರಿ, ಒಂದು ಹೊಸ ಕಥೆಯಾದಂತೆ ಅನುಭೂತಿಯಾಗಿ, ಒಂದು ಸಾವಿನ ಅರಮನೆಯಂತೆ ಬದಲಾಗಿದ್ದು ಅರಿವಿಗೆ ಬಂತು.” ಹೌದು... ಇದು ಯಾವುದೋ ಒಂದು ಕಾಲದಲ್ಲಿ ಶತ್ರು ಸೈನಿಕರನ್ನು ಶಿಕ್ಷಿಸುವ ಪಾಳು ಅರೆಮನೆ ಆಗಿರಬೇಕು. ಈಗ ಇವತ್ತಿಗೆ ಈ ರೂಪ ಹೊತ್ತು ನಿಂತಿದೆ. ಋಣಾನುಬಂಧ ನಿನ್ನನ್ನು ಇಲ್ಲಿಗೆ ಕರೆದು ತಂದಿದೆ ಕಂದಾ.”  ಎಂದು ಮೂಕಜ್ಜಿ ನನ್ನ ಕಿವಿಯಲ್ಲಿ ಉಸುರಿದಂತೆ ಭಾಸವಾಗಿ ಮೈಯೆಲ್ಲಾ ಬೆವರಿ ಹೋಯಿತು.


Comments

Popular posts from this blog

ಮದುವೆಯಾಗಲಿ ಸರಿ ಹೋಗ್ತಾನೆ ಅಂತಾರಲ್ಲ ಯಾಕೆ?

ನಿಮಗೇನಾದರೂ ಅರ್ಥವಾಯಿತೇ???