ನಿಮಗೇನಾದರೂ ಅರ್ಥವಾಯಿತೇ???


ನನ್ನ ಹಿಂದಿನ ಬ್ಲಾಗ್ನಲ್ಲಿ ಯಾವುದಕ್ಕೂ ಸಲ್ಲದವನ ಬಗ್ಗೆ ಬರೆದಿದ್ದೆ. ತುಂಬಾ ಜನ ಓದಿದಿರಿ, ಬೆನ್ನು ಚಪ್ಪರಿಸಿದಿರಿ, ಹೃತ್ಪೂರ್ವಕ ಧನ್ಯವಾದಗಳು.
ಇವತ್ತು ನನ್ನ ಗೆಳೆಯನ ಹಿತವಚನಗಳ ಬಗ್ಗೆ ಬರೆಯುತ್ತೇನೆ. ಎಲ್ಲ ಗೆಳೆಯರೂ ಹೀಗಂತ ಅರ್ಥೈಸಬೇಡಿ. ಈ ನನ್ನ ಗೆಳೆಯ, ನನ್ನಂತೆ “ವೇಸ್ಟ್ ಬಾಡಿಗಳ” ಸಂಘದಲ್ಲೋಬ್ಬನು. ಆದರೆ ಅವನ  ಬಾಳಿನ ಒಳನೋಟ ಎಷ್ಟು ಅದ್ಭುತ ಅನ್ನೋದು ಸಮಯ ಬಂದಾಗಲೇ ತಿಳಿದಿದ್ದು. ಅವನೇನು ಮಹಾಮೇಧಾವಿಯಲ್ಲ. ಆದರೂ ಅವನ ಹಿತ ವಚನವನ್ನು ಶೇರ್ ಮಾಡಬೇಕು ಅನಿಸ್ತು.
 ದೇಶವನ್ನು ಬಿಟ್ಟು ಬರುವುದು ಸುಲಭದ ನಿರ್ಧಾರವಾಗಿರಲಿಲ್ಲ, ಅಗದೂ ಕೂಡ. ಇಷ್ಟು ವರ್ಷ ನನ್ನದು, ನಾನು ಎಂದು ಕೊಂಡದ್ದೆಲ್ಲ ಕೆಲವೇ ಕ್ಷಣದಲ್ಲಿ ಮಾಯವಾಗುವಂತ ಪರಿಸ್ಥಿತಿ. ಅಲ್ಲಿ ಹೇಗೋ? ಏನೋ ಎಂಬ ಆತಂಕ ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡಿದ್ದಂತೂ ಸತ್ಯ ಕಣ್ರೀ. ಇನ್ನೂ ಈ ವಿಷಯ ಆಪ್ತರಲ್ಲಿ ಹೇಳಿಕೊಂಡಿರಲಿಲ್ಲ. ನಾನು ಅಂದು ತುಂಬಾ ವಿಚಲಿತನಗಿದ್ದೆ. ಆಗ ನನ್ನ ಗೆಳೆಯನೋಬ್ಬನು ಅಚಾನಕವಾಗಿ ಮನೆಗೆ ಬಂದ, ಅವನು ಸುಮಾರು ೧೦ ವರುಷಗಳಿಂದ ವಿದೇಶದಲ್ಲಿ ವಾಸವಗಿದ್ದವನು,
ಅಮ್ಮ ಟೀ ಮಾಡಿ ತಂದುಕೊಟ್ಟರು. ಎಲ್ಲರ ಯೋಗ ಕ್ಷೇಮ ವಿಚಾರಿಸಿಯಾದ ಮೇಲೆ, ಅಪ್ಪ ಭಾರವಾದ ಮನಸ್ಸಿನಿಂದ “ ಮಗ, ನಮ್ಮನ್ನೆಲ್ಲ ಬಿಟ್ಟು ವಿದೇಶಕ್ಕೆ ಹೋಗುತ್ತಿದಾನೆ” ಅಂದರು. ಅವನು ನನ್ನನ್ನು ಒಮ್ಮೆ ದಿಟ್ಟಿಸಿ ನೋಡಿದ. ನನ್ನ ವ್ಯಾಕುಲತೆಯನ್ನು ಕ್ಷಣ ಮಾತ್ರದಲ್ಲಿ ಅರ್ಥೈಸಿ, “ಬಾ, ಹೊರಗೆ ಹೋಗಿ ಬರೋಣ ಅಂದ.” ನಾನು ಮೌನಿಯಾಗಿ ಅವರನ್ನು ಹಿಂಬಾಲಿಸಿದೆ. “ ಇಲ್ಲಿ ಎಲ್ಲಾದ್ರೂ ಸಿಗರೆಟ್ ಸೇದೊದಿಕ್ಕೆ ಜಾಗ ಇದಿಯಾ? ಬಾ ಕುಳಿತು ಮಾತಾಡೋಣ,” ಅಂದ . ನಮ್ಮ ಮನೆ ಇರುವ ಜಾಗ ಗುಡ್ಡ ಪ್ರದೇಶದಲ್ಲಿ ಇದೆ. ನಾನು ಗೋಣು ಅಲ್ಲಾಡಿಸುತ್ತ  ಅವನನ್ನು ಅರ್ಧ ಕಟ್ಟಿ ಪಾಳು ಬಿದ್ದಿದ್ದ ಮನೆಯೆಡೆಗೆ ಕರೆದು ಕೊಂಡು ಹೋದೆ.
 ಅಲ್ಲಿ ಕುಳಿತರೆ ದೂರದಲ್ಲಿ ಸುಂದರವಾದ ತೆಂಗಿನ ತೋಟದ ನಡುವಿನಿಂದ ಅರಬ್ಬಿ ಸಮುದ್ರ ಕಾಣಿಸತ್ತದೆ. “ ಈ ದೃಶ್ಯ ಯಾವ ರೆಸಾರ್ಟಿಗೂ ಕಮ್ಮಿ ಇಲ್ಲ ಕಣೋ. ‘ಸೀ ಫೇಸಿಂಗ್, ನೇಚರ್ ಲೈಕ್’’ ಅಂತ ವ್ರಿತ್ತಪತ್ರಿಕೆಗಳಲ್ಲಿ ಬರುವ ಜಾಹಿರಾತುಗಳನ್ನು ನೋಡುವಾಗ ಸಹಜವಾಗಿಯೇ ನಗು ಉಕ್ಕುತದೆ. ನಮಗೆ ಹಿರಿಯರು ಕೊಟ್ಟ ಬಳುವಲಿಯನೆಲ್ಲ ಮಾರಿ ಅಪಾರ್ಟ್ ಮೆಂಟ್ ಗಳಲ್ಲಿ ಬಂದಿಯಗ್ತಿರೋ ನಮ್ಮ ಬುದ್ಧಿವಂತಿಕೆಗೆ ಏನು ತಾನೆ ಹೇಳೋಣ?” ಎಂದು ಮಾತು ಆರಂಭಿಸಲು ಪ್ರಯತ್ನಿಸಿದ . ಉತ್ತರ ಕೊಡುವ ಗೋಜಿಗೆ ನಾನು ಹೋಗಲಿಲ್ಲ. ಮಧ್ಯಾನದ ಉರಿ ಬಿಸಿಲಿನಲ್ಲಿ ಬೆಚ್ಚಗಿನ ಗಾಳಿ ಬೀಸುತ್ತಿತ್ತು. ಸಮುದ್ರದ ಅಲೆಗಳ ಅಬ್ಬರ ನಿಶ್ಯಬ್ದ ನೀರವತೆಯನ್ನು ಸೀಳಿ ನನ್ನ ಮನಸ್ಸಿನ ಪ್ರಕ್ಷುಬ್ಧತೆಯನ್ನು ಹೆಚ್ಚಿಸಿತ್ತು.
ನನಗೆ ಸಿಗರೇಟಿನ ವಾಸನೆ ಸೇರದು. ಅದಕ್ಕವನು ಕೊಂಚ ದೂರದಲ್ಲಿ ನಿಂತು ಸಮುದ್ರದೆಡೆಗೆ ಮೊಗ ಮಾಡಿ ಈ ಉರಿ ಬಿಸ್ಲಿನಲ್ಲೂ ಹೊಗೆ ಬಿಡಲು ಶುರು ಮಾಡಿದ. “ ಅಲ್ವೋ, ಈ ಉರಿ ಬಿಸಿಲಿನಲ್ಲೂ ಸಿಗರೇಟ್ ಬೇಕಾ?” ಎಂದು ಸಿಡುಕಿದೆ. “ಸರಿಯಾಗಿ ವಿಚಾರ ಮಾಡಿದ್ದೀಯ?” ಎಂದು ಗಂಭೀರ ವದನನಾಗಿ ಕೇಳಿದ. “ಗೊತ್ತಿಲ್ಲ.” ಅಂದೆ. “ಅದು ತುಂಬಾ ರೈಟ್ ಮೈಂಡ್ಸೆಟ್ ಕಣೋ .” ಎಂದು ಬೆನ್ನು ಚಪ್ಪರಿಸಿದ. ನಾನು ಗಲಿಬಿಲಿಗೊಂಡು ಅವನನ್ನೇ ಹುಬ್ಬೇರಿಸಿ ನೋಡಿದೆ. ಗೋಣು ಆಡಿಸುತ್ತ ಅವನು ಹೇಳಿದ “ ಜೀವನವನ್ನು ತುಂಬಾ ಸೀರಿಯಸ್ ಆಗಿ ತೊಗಬೇಡ. ರಿಲ್ಯಾಕ್ಸ್ ಮಾಡೋ. ಜೀವನ ಅನ್ನೋದೇ ಹೀಗೆ. ಒಂದು ವಸ್ತು ಸಿಕ್ಕರೆ ಇನ್ನೊಂದು ಸಿಗದು. ಈ ಬೇಕು ಬೇಡಗಳೇ ನಮ್ಮನ್ನು ನಮ್ಮ ಕಂಫರ್ಟ್ ಝೋನ್ನಿಂದ ಹೊರ ದೂಡಿ ಹೊಸ ಜೀವನದೆಡೆಗೆ ನೂಕುವುದು.”  
“ ಅಲ್ಲಾ! ಈ ವಚನಗಳು ನಿನ್ನ ಬಾಯಲ್ಲಿ ಸುಡುತ್ತಿರುವ ಹೊಗೆಸೊಪ್ಪಿನ ಪರಿಣಾಮನೋ ಹೇಗೆ ? ಅಥವಾ ವಿದೇಶಕ್ಕೆ ಹೋದ ಮೇಲೆ ಯಾವಾಗಲೂ ಹೀಗೇನ?” ಎಂದು ಅರಚಿದೆ. ಅವನು ರಿಯಾಕ್ಟ್ ಮಾಡಲಿಲ್ಲ . ನಾನು ಮೌನಕ್ಕೆ ಶರಣು ಹೋದೆ.
ನಮ್ಮ ನಡುವಿನ ಧೀರ್ಘ ಮೌನವನ್ನ ಅವನೇ ಸಿಗರೇಟ್ಟನ್ನು ಕಾಲಿನಲ್ಲಿ ಹೊಸಕಿ ಹಾಕಿ ಮುರಿದ.” ಗೊತ್ತು ಕಣೋ ನಿನ್ನ ಮೈಂಡ್ ಅಪ್ಸೆಟ್ ಆಗಿದೆ ಅಂಥ. ಅದಕ್ಕೆ ಸ್ವಲ್ಪ ನನ್ನ ಅನುಭವವನ್ನು ಹಂಚಿಕೊಳ್ಳೋಣ ಅಂದರೆ ಕತ್ತೆ ಥರ ಅರ್ಚತಾ ಇದಿಯಲ್ಲೋ. ಸುಮ್ಮನೆ ಇರೋದಿಕ್ಕೆ ಏನು ಕೊಡಬೇಕು. ಬಾಯಿ ಮುಚ್ಕೊಂಡು ಕೇಳೋ“ ಎಂದು ಗರಮ್ಮಾದ. ಪಾಪ! ಏಷ್ಟೊಂದುದು ದಿನ ಆದ್ಮೇಲೆ ನನ್ನನ್ನು ಹುಡುಕಿಕೊಂಡು ವಿದೇಶದಿಂದ ನೇರವಾಗಿ ನಮ್ಮ ಮನೆಗೆ ಬಂದಿದಾನೆ. ಅವನ ಕ್ಷೇಮದ ವಿಚಾರವನ್ನು ಕೇಳದೆ ನಾನು ಸಿಡುಕುವುದು ಎಷ್ಟು ಸರಿ, ನಾನು ತುಂಬಾ ಸ್ವಾರ್ಥಿ ಅನಿಸಿ ಕುಗ್ಗಿ ಹೋದೆ. ತಲೆ ತಗ್ಗಿಸ್ಸಿ ನೆಲದ ಮೇಲಿದ್ದ ಒಣ ಹುಲ್ಲುಗಳನ್ನು ಕೀಳ ತೊಡಗಿದೆ.
ಅವನು ಸೂಕ್ಷ್ಮವಾಗಿ ನನ್ನನ್ನು ಗಮನಿಸುತ್ತಿದ್ದ ಎಂದು ತಲೆ ಮೇಲೆ ಎತ್ತಿದಾಗಲೇ ಗೊತ್ತಾದದ್ದು.” ಅಯ್ತೆನಪ್ಪ ಗುರುವೇ? ನಿನ್ನನ್ನೇ ನೀನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸ್ಸಿ ತೀರ್ಪು ಕೊಟ್ಟಿದ್ದು?” ಎಂದು ವ್ಯಂಗ್ಯ ಮಿಶ್ರಿತ ಧ್ವನಿಯಲ್ಲಿ ಕೇಳಿದ. ಮತ್ತೆ ಮೌನಕ್ಕೆ ಶರಣಾದೆ. ಅವನೇ ಮುಂದುವರಿಸಿದ. “ ಕೆನ್ನೆ ಊದಿಸ್ಬೇಡ. ನನಗೂ ಮಾತಾಡಲು ಅವಕಾಶ ಕೊಡು.” ಎಂದು ಮೆಲುವಾಗಿ ನಕ್ಕ. ನಾನು ಧೀರ್ಘವಾದ ನಿಟ್ಟುಸಿರು ಬಿಟ್ಟು ಅವನಡೆಗೆ ನಿರುತ್ಸಾಹದ ದೃಷ್ಟಿ ಹಾಯಿಸಿದೆ. “ಈ ನಿಶಬ್ದತೆ, ನೀರವತೆ, ಮೌನ ಎಷ್ಟೊಂದು ಅರ್ಥಗರ್ಭಿತ ಅನ್ನೋದರ ಅರಿವಿದಯಾ ನಿನಗೆ?” ಎಂದು ನಕ್ಕು ಸುಮ್ಮನಾದ. ಮಂದವಾದ ತಂಗಾಳಿ ಬಿಸಿಲಿನ ಧಗೆಯನ್ನು ಕೊಂಚ ಕಮ್ಮಿ ಮಾಡಿತ್ತು.
 “ ಈ ಮಹಾಭಾರತ ಮಹಾಕಾವ್ಯವಿದೆಯಲ್ಲ,” ಎಂದು ಪೀಟಿಕೆ ಹಾಕಿದ.
” ತೊಗೋಳಪ್ಪ ವೇದಾಂತ ಶುರು ಹಚ್ಕೊಂಡ,+ ಅಂತ  ಮನದೊಳಗೆ ನಗು ತಡೆಯಲಾಗದೆ, ಉಸಿರು ಬಿಗಿ ಹಿಡಿದು ಮುಖ ಬೇರೆಡೆಗೆ ತಿರುಗಿಸಿದೆ.
 “ ನಗೋ ಮಗನೆ, ಆದ್ರೆ ನಾನು ಹೇಳಿದ್ದನ್ನು ಪೂರ್ತಿ ಮಾಡಿಯೇ ತಿರೋದು ಇವಾಗ.” ಅಂತ ಸೊಂಟದ ಮೇಲೆ ಕೈ ಇಟ್ಟ . ನಾನು ಅವನಿಗೆ ನಮಸ್ಕರಿಸುತ್ತ  ಮುಂದುವರಿಸಿ ಮಹಾಪ್ರಭುಗಳೇ ಎಂದು ಕೈ ಸನ್ನೆ ಮಾಡಿದೆ.
 “ ಮಹರ್ಷಿ ವೇದವ್ಯಾಸರು ಸೃಷ್ಟಿಸಿದ ಅರ್ಜುನ ಮತ್ತು ಕರ್ಣನ ಪಾತ್ರಗಲಳಿವೆಯಲ್ಲ, ಅವು ಕೇವಲ ಪಾತ್ರಗಳಲ್ಲ ಕಣೋ. ಇವೆರಡು ಪಾತ್ರಗಳು- ನಮ್ಮ ಜೀವನದಲ್ಲಿನ ನಿತ್ಯದ ಸವಾಲುಗಳನ್ನು ಎದುರಿಸುವಾಗ ಉಂಟಾಗುವ ದ್ವಂದ್ವ ಮನೋಸ್ತಿಥಿಗಳು. ಯಾವುದು ಸರಿ, ಯಾವುದು ತಪ್ಪು ಎಂದು ಮನದ ಒಳಗಿನ ಚಿಂತನ-ಮಂಥನಗಳಿವು. ಸುಮ್ಮನೆ ಹೆಸರು ಮಾತ್ರ ಬೇರೆ ಮೂಲ ಒಂದೇ. ಇಬ್ಬರೂ ಕುಂತಿ ಸುತರಲ್ಲವೇ? ಮೂಲತ: ಯಾರೂ ಕೆಟ್ಟವರಾಗಿರುವುದಿಲ್ಲ ಕಣೋ. ಸರಿ-ತಪ್ಪುಗಳ ವ್ಯಾಖ್ಯಾನ ನಾವು ಬದುಕುತ್ತಿರುವ ಸಮಾಜ, ಸಂಸ್ಕೃತಿಗಳ ನೀಡುತ್ತವೆ. ಎಲ್ಲರೂ ಅವರವರ ತಿಳುವಳಿಕೆ, ಅವರು ನಿಭಾಯಿಸಿದ ಪರಿಸ್ಥಿತಿಗಳಿಗೆ ಹೊಂದಿಕೊಂಡು ಜೀವನದಲ್ಲಿ ಉದ್ಭವವಾಗುವ  ಸಂಧರ್ಭಗಳಿಗೆ ರಿಯಾಕ್ಟ್ ಮಾಡ್ತಾರೆ.
ನಿನಗೆ ಯಾರು, ಯಾಕೆ, ಏನು ಮಾಡಿದರು, ಏಕೆ ಹೀಗಾಯ್ತು ಅಂತೆಲ್ಲ ತಲೆ ಕೆಡಿಸಬೇಡ. ನಿನ್ನ ಕೈಯಲ್ಲಿ ಇದ್ದಷ್ಟು ಮಾತ್ರವೇ ನಿನ್ನಿಂದ ಮಾಡಲಾಗುವುದು. ಬಾಕಿ ಎಲ್ಲ ವಿಧಿ ಕಣೋ. ನೀನು ಅದನ್ನ ಬದಲಿಸುತ್ತೀಯ ಅಂದು ಕೊಂಡರೆ ನಿನ್ನಷ್ಟು ದೊಡ್ಡ ಮೂರ್ಖ ಇನ್ನಾರೂ ಈ ಭೂಗೋಳದ ಮೇಲಿಲ್ಲ. ಪಾರ್ಥನ ಕಥೆ ನೋಡು. ಅವನು ತನ್ನ ಸಾಮರ್ಥ್ಯ ಹಾಗೂ ದೇವರ ಮೇಲೆ ವಿಶ್ವಾಸವಿಟ್ಟು ಅವನ ಕರ್ಮವನ್ನು ಮಾಡುತ್ತಾ ಸಾಗಿದ, ಸಫಲನಾದ.  ಅವನು ಸಾತ್ವಿಕ ಮನಸ್ಥಿತಿಯ ಪ್ರತಿನಿಧಿಯಾಗಿ ಕಾಣುತ್ತಾನೆ. ಅವನು ನನ್ನ ನಿನ್ನಂತೆ ಕಡಿಮೆ, ದೈವಾಂಶ ಸಂಭೂತನಂತೆ ಜಾಸ್ತಿ ಕಾಣುತ್ತಾನೆ. ಯಾಕೋ ನಮಗೆ ಆ ಕನೆಕ್ಷನ್ ಸಿಗೋದಿಲ್ಲ. ಅವನ ಕಥೆ ಜನ ಸಾಮಾನ್ಯರಿಗೆ ಎಲ್ಲಿ ತನಕ ಗೊತ್ತು? ಮಹಾಭಾರತ ಯುದ್ಧ ಮುಗಿಯೋ ತನಕ, ಅಷ್ಟೇ. ಬಬ್ರುವಾಹನನೊಂದಿಗೆ ಮುಖಾಮುಖಿ ಆದದ್ದು ನಮ್ಮ ಸಿನಿಮಾದವರಿಂದ ಇನ್ನೊಂದಷ್ಟು ಜನಕ್ಕೆ ಗೊತ್ತು.
ಅದೇ ಕರ್ಣನನ್ನು ನೋಡು. ಅವನೊಬ್ಬ ದುರಂತ ನಾಯಕ. ಅದೆಷ್ಟು ಜನ ಅವನನ್ನು ಅಧರಿಸಿ ಕಥೆ, ಕಾವ್ಯ, ಸಿನಿಮಾಗಳನ್ನು ಮಾಡಿಲ್ಲ? ಕಾರಣವೇನು ಎಂದು ಹುಡ್ಕುತ್ತಾ ಸಾಗಿದಾಗ ಉತ್ತರ ದೊರೆಯುತ್ತದೆ. ಕರ್ಣ ಯಾವತ್ತೂ ತನಗೆ ಎದುರಾದ ಪರಿಸ್ಥಿತಿಗಳನ್ನು ಒಪ್ಪಲಿಲ್ಲ. ಹೆಜ್ಜೆ ಹೆಜ್ಜೆಗೂ ಹೋರಾಡುತ್ತಾ ಸಾಗಿದ. ಅವನಿಗೆ ಸಾಮರ್ಥ್ಯದ ಮೇಲೆ ನಂಬಿಕೆ ಇತ್ತು, ಆದರೆ ದೇವರ ಮೇಲೆ ಇರಲಿಲ್ಲ. ಅವನ ಜೀವನದ ಪರಿಸ್ಥಿತಿ ಅವನ ನಡುವಳಿಕೆಗೆ ಕಾರಣವಾಗಿರಬಹುದು.
 ಆದರೆ ಕರ್ಣನು ನಮಗೆ ಯಾಕೆ ಇಷ್ಟ ಆಗತಾನೆ ಅಂದರೆ ಅವನು ಜನಸಾಮಾನ್ಯನಂತೆ ಕಾಣುತಾನೆ. ಅವನು ದಾನಶೂರನೆಂದು ಇಷ್ಟ ಆಗೋದಲ್ಲ, ಯಾರೂ ಸುಮ್ಮ ಸುಮ್ಮನೆ ಕೇಳಿದವರಿಗೆ ದಾನ ಮಾಡೋಲ್ಲ ಕಣೋ. ಯಾರು ಪರ್ಫೆಕ್ಟ್ ಅಲ್ಲ ಅನ್ನೋದಕ್ಕೆ ಅವನು ಉತ್ತಮವಾದ ಉದಾಹರಣೆ.  ಅವನಿಗೆ ಯಾವುದೇ ಗೈಡ್ ಇರಲಿಲ್ಲ. ಕೆಲವರಿಗೆ ಮಾರ್ಗದರ್ಶಕರು ಸಿಗುತ್ತಾರೆ, ಕೆಲವರಿಗೆ ಸಿಗೋದಿಲ್ಲ. ಜೀವನದ ಪ್ರತಿ ಹಂತದಲ್ಲೂ ಅವನು ತನ್ನ ದಾರಿಯನ್ನು ತಾನೆ ಕಂಡುಕೊಳ್ಳಬೇಕಾಗಿ ಬರುತ್ತದೆ.
ನಾವೆಲ್ಲರೂ ಅಧುನಿಕ ಜೀವನ ಶೈಲಿಯಲ್ಲಿ  ನಿರಂತರವಾಗಿ ಸರಿ-ತಪ್ಪು, ಸ್ಪರ್ಧೆ-ಪ್ರತಿಸ್ಪರ್ಧೆ, ಗೆಲುವು-ಸೋಲು, ಭದ್ರತೆ-ಅಭದ್ರತೆ, ಜಯ-ಅಪಜಯ ಗಳ ನಡುವೆ ತೊಳಲಾಡುತ್ತಲೇ ಇರುತ್ತೇವೆ. ಯಶಸ್ಸನ್ನು ಪಡೆಯಲು, ಜೀವನದಲ್ಲಿ ಏನನ್ನೋ ಸಾಧಿಸಲು, ಏನು ಮಾದಿದರೂ ಸೈ ಎಂಬ ಧೋರಣೆಯೊಂದಿಗೆ ಸಾಗುತ್ತೇವೆ, ಸಾಧನ ಮುಖ್ಯವಲ್ಲ, ಸಾಧನೆ ಮುಖ್ಯ ಎಂಬುದು ಈಗಿನ ಮಂತ್ರ. ಅದಕ್ಕೆ ನಾವಿಬ್ಬರೂ ಹೊರತಲ್ಲ. ಕೆಲವರಿಗೆ ಒಂದು ಹೊತ್ತಿನ ಅನ್ನ, ಇನ್ನು ಕೆಲವರಿಗೆ ಅಗಾಧ ಹಣ ಸಂಪಾದನೆ ಮಾಡುವ ಛಲ, ಮತ್ತು ಉಳಿದವರಿಗೆ ಜನಪ್ರಿಯತೆ, ಸ್ಟಾರ್ಡಂ, ಆಧ್ಯಾತ್ಮ, ವಿದ್ಯೆಯಲ್ಲಿ ಸಾಧನೆ, ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಇದರಲ್ಲಿ ಒಂದು ಕಾರಣಕ್ಕೆ ನಾನು ನನ್ನವರನ್ನು ತೊರೆದು ಹೋದೆ. ಈಗ ನೀನು ಅದೇ ಪಥದಲ್ಲಿ ನಿಂತಿದ್ದೀಯ.” ಎಂದು ನಕ್ಕು ಕೊಂಚ ಕ್ಷಣ ಸುಮ್ಮನಾದ. ಜೇಬು ತಡಕಾಡಿ ಇನ್ನೊಂದು ಸಿಗರೆಟ್ಟನ್ನು ಹಚ್ಚಿದ.ಅವನು ವಿಚಲಿತನಾಗಿದ್ದ. ನಾನು ಮೂಕಪ್ರೇಕ್ಷಕನಾಗಿದ್ದೆ. ನನ್ನ ಗೆಳೆಯನ ಆಂತರ್ಯವನ್ನು ನಾನು ಅರಿಯಲೇ ಇಲವಲ್ಲ ಎಂದು ಪಶ್ಚಾತಾಪ ಮೂಡಿತು.
“ ಆಗಲೇ ಕಣೋ ಕರ್ಣ ಪ್ರಸ್ತುತನಾಗುತ್ತಾನೆ. ಅವನಲ್ಲಿ ಅಗಾಧವಾದ ಸಾಮರ್ಥ್ಯವಿತ್ತು, ಪರಾಕ್ರಮವಿತ್ತು, ಕುಂತಿ-ಸೂರ್ಯ ದೇವರ ರಕ್ತವಿತ್ತು, ರಾಜ್ಯವಿತ್ತು. ಅದರೂ ಅವನಿಗೆ ಅರ್ಜುನನ್ನು ಸೋಲಿಸುವುದು ಒಂದೇ  ಜೀವನದ ಧ್ಯೇಯವಾಗಿ ಬಿಟ್ಟಿತ್ತು. ಹಾಗಾಗಿ ಧುರ್ಯೋಧನನ ಸಂಗ ಮಾಡಲು ಹೇಸುವುದಿಲ್ಲ.  ಇದರಿಂದ ಅವನಿಗೆ ಧರ್ಮ-ಅಧರ್ಮಗಳು ಎದುರಿಗೆ ಬಂದಾಗ ಯಾವುದನ್ನೂ ಆರಿಸಬೇಕೆಂದು ತಿಳಿಯದೆ ಎಡವುತ್ತಾ ಸಾಗುತ್ತಾನೆ. ಅವನ ಜೀವನದಲ್ಲಿ ಹಲವು ಅಪಚಾರವಾಗಿತ್ತು ನಿಜ. ಕರ್ಣ ಜನಿಸಿದ ಕೂಡಲೇ ತಾಯಿ, ಶಿಕ್ಷಣದಲ್ಲಿ ಗುರುಗಳು ಹಾಗೂ  ಯುದ್ಧದಲ್ಲಿ ಅವನು ಕಲಿತ ವಿದ್ಯೆ ಎಲ್ಲವೂ ಅವನನ್ನು ಕೈಬಿಟಿತ್ತು, ಆದರೆ ಅವನು ಗುರಿಯನ್ನು ತೀರಿಸುತ್ತೇನೆ ಅಥವಾ ಮಡಿಯುತ್ತೇನೆ ಎಂದು ಬಾಳಿದ ಛಲಗಾರ. ಅವನು ಯುದ್ದ ಭೂಮಿ ಬಿಟ್ಟು ಓಡಲಿಲ್ಲ. ಕೊನೆಗೆ ಅವನಿಗೆ ಜೀವನಕ್ಕಿಂತ ಸಾವೇ ಪ್ರೇಯಸಿ ಅಗಿ ಬಿಡುತ್ತಾಳೆ.
 ಆದರೆ ಅಪಚಾರವನ್ನು ಎದುರಿಸಲು ಅವನು ತೆಗೆದುಕೊಂಡ ನಿರ್ಧಾರಗಳು. ಅವನು ಆಯ್ಕೆ ಮಾಡಿದ ಕರ್ಮ ಪಥವು ಅವನ ದುರಂತ ಅಂತ್ಯಕ್ಕೆ ನಾಂದಿ ಹಾಡಿದವು. ಆಮೇಲೆ ಅವನಿಗೆ ಪಶ್ಚಾತಾಪವಾದರೂ ಕಾಲ ಮಿಂಚಿ ಹೋಗಿತ್ತು. ಅಂತೆಯೇ ಅವನು  ನಮ್ಮ ನಕಾರಾತ್ಮಕ ಭಾವನೆಗಳ ಪ್ರತಿನಿಧಿಯಾಗಿ ಕಾಣುತ್ತಾನೆ.  ನಕಾರಾತ್ಮಕತೆಯೇ ಅವನ ಜೀವನದ ಏಕಮೇವ ಗುರಿಯಾಗಿ ಬಿಡುತ್ತದೆ.  ನಿನ್ನಷ್ಟು ನಾನು ಓದಿಲ್ಲ ಕಣೋ, ಆದರೆ ಜೀವನವೆಂಬ ಪಾಠಶಾಲೆ ಸಾಕಷ್ಟು ಅನುಭವ ನೀಡಿದೆ.
ಆದರೆ ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ನಮಗೆ ದುರಂತ ನಾಯಕರೇ ಹತ್ತಿರವಾಗುತ್ತಾರೆ. ಇದು ಒಂದು ಮನುಷ್ಯ ಸಹಜವಾದ ಮನಸ್ಥಿತಿ. ಒಂದು ರೀತಿಯ ಮಾಯೆ ಅದು. ಅವರು ಹೋರಾಡಿ ಸಾಯುತ್ತಾರೆ. ಅದು ನಮ್ಮ ಹೋರಾಟದಂತೆ ಭಾಸವಗುತ್ತದೆ. ಅವರ ಸಾವು ನಮ್ಮ ಜೀವನದಲ್ಲಿ ಇರುವ ಅಸಹಾಯಕತೆಯ ಸಾವೆಂದು ಭಾವಿಸಿ ಧನ್ಯರಗುತ್ತೇವೆ.
ನಿನ್ನ ಪರಿಸ್ಥಿತಿಯು  ಚನ್ನಾಗಿ ಅರಿವಿದೆ ನನಗೆ. ಆದ್ರೆ ನೀನು ಕರ್ಣನನ್ನು ಅರಿಸುತ್ತಿಯೋ ಇಲ್ಲ ಅರ್ಜುನನನ್ನು, ಯೋಚನೆ ಮಾಡಿ ನಿರ್ಧಾರ ಮಾಡು. ಕರ್ಣ-ಅರ್ಜುನರಿಬ್ಬರೂ  ನಿಜ ಜೀವನದಲ್ಲಿ ಸುಖಿಯಾಗಿದ್ದರೇ? ಖಂಡಿತ ಇಲ್ಲ. ಹಾಗೆಯೇ ಜೀವನ ನಾವು ವಿಶ್ರಾಂತಿಯಿಂದಿರಲು ಬಿಡುವುದಿಲ್ಲ. ಪ್ರತಿ ಹಂತದಲ್ಲೂ ಕರ್ಣ-ಅರ್ಜುನರಿಬ್ಬರೂ  ಎದುರಾಗುತ್ತ ಇರುತ್ತಾರೆ ಕಣೋ.” ಸುಮ್ಮನಾದ.
“ ನೀನು ಗೂಡಾರ್ಥದಲ್ಲಿ ಮಾತಾಡ ಬೇಡ ಕಣೋ . ನಂಗೆ ನಿನ್ನ ಈ ರೂಪ ಕೊಂಚನೂ ಇಷ್ಟವಾಗಿಲ್ಲ. “ ಎಂದು ಅಸಮಾಧಾನವನ್ನು ಸೂಚಿಸಿದೆ . ಇಂದು ಯಾಕೋ ಅವನು ಸುಮ್ಮನಾಗುವ ಲಕ್ಷಣ ಕಾಣಲಿಲ್ಲ.
 “ ಕರ್ಣನು ಅವಕಾಶಕ್ಕಾಗಿ ಗುರುಗಳಿಂದ ಗುರುಗಳೆಡೆಗೆ, ದೇಶದಿಂದ ದೇಶಕ್ಕೆ ಅಲೆದಾಡಿದ. ತಾನು ಸಾಯುತ್ತೇನೆಂದು  ಅರಿವಿದ್ದರೂ ಕವಚ ಹಾಗು ಕುಂಡಲಗಳನ್ನು ತ್ಯಾಗ ಮಾಡಿದ ಮಹಾನುಭಾವ. ಇದು ನಮ್ಮಲ್ಲಿ ಅವನ  ಪ್ರತಿ ಅನುಕಂಪವನ್ನು ಹೆಚ್ಚಿಸುತ್ತದೆ. ಅವನ ತ್ಯಾಗ, ಅವನಲ್ಲಿದ್ದ ಕುಂದು ಕೊರತೆಯನ್ನು ಮುಚ್ಚಿ ಹಾಕಿ ಬಿಡುತ್ತದೆ. ಹಾಗಾಗಿ ವಿಧಿಯನ್ನು ತೆರೆದ ಮನಸ್ಸಿನಿಂದ ಅಪ್ಪಿಕೋ. ಮುಂದಡಿ ಇಟ್ಟ ಮೇಲೆ ಹಿಂಜರಿಯಬೇಡ. ಈಗ ನಿನಗೆ ಅರ್ಥವಾಗಿರಬಹುದು ಯಾಕೆ ಕೆಲವರಿಗೆ ಜೀವನದಲ್ಲಿ ಮನ್ನಣೆ  ದೊರಕುತ್ತದೆ ಮತ್ತೆ ಕೆಲವರಿಗೆ ದೊರಕುವುದಿಲ್ಲವೆಂದು. ನಾವು ಕರ್ತವ್ಯ ನಿಭಾಯಿಸಬೇಕು ಅಷ್ಟೇ. ಇನ್ನೊಬ್ಬರ ಮನ್ನಣೆಗೋಸ್ಕರ ಬಾಳಬೇಡ. ನೀನು ನಿರ್ಧಾರ ತೆಗೊವಾಗ, ಯಾರ ಮೇಲೆಯೂ ಹಗೆಯಾಗಲಿ, ಬೇಜಾರಗಲಿ ಮನಸ್ಸಿನಲ್ಲಿ ಇಟ್ಟುಕೊಳ್ಳ ಬೇಡ. ನಿನ್ನ ಹೃದಯ ಏನು ಹೇಳುತ್ತದೆಯೋ, ಅದನ್ನು ಕೇಳು. ನಿರಾಳವಾದ ಮನದಿಂದ, ನಿನ್ನ ಹಾಗೂ ನಿನ್ನನ್ನು ನಂಬಿದವರ ಒಳಿತಿಗಾಗಿ ನಿರ್ಧಾರ ತೆಗೋ. ನಿನ್ನಲ್ಲಿ ಇನ್ನೊಂದು  ಕಳಕಳಿಯ ವಿನಂತಿ, ನೀನು ಪಾಠ ಹೇಳುವ ವೃತ್ತಿಯನ್ನು ಅಯ್ದುಕೊಂಡಿದ್ದೀಯ, ಗುರು ದ್ರೋಣರಂತೆ ಸ್ವಜನ ಪಕ್ಷಪಾಥಿಯಾಗಿ ಇನ್ನೊಂದು ಕರ್ಣ, ಏಕಲವ್ಯರನ್ನು ಶೃಷ್ಟಿಸಬೇಡ.ಪ್ಲೀಸ್!..” ಅವನು ಗದ್ಗದಿತನಾಗಿದ್ದ. ಕಣ್ಣಾಲಿಗಳಲ್ಲಿ ಕಣ್ಣೀರು ತುಂಬಿ ಕೊಂಡಿತ್ತು.
“ಅಯ್ಯೋ ದೇವರೇ! ಇಷ್ಟು ಹೊತ್ತು ಕಪಿ ಮುಂಡೆದು ನನಗೆ ತಿಳಿ ಹೇಳ್ತಾ ಇದ್ದಾನೆ ಅಂದು ಕೊಂಡರೆ ಇವನು ಇವನ ಜೀವನದ ಬಗ್ಗೆ ಹೇಳ್ತಾ ಇದ್ದ. ಲೋ! ಬಲು ಸ್ವಾರ್ಥಿ ಕಣೋ ನೀನು. ಒದ್ದ ಅಂದ್ರೆ ..” ಅಂದು ಅವನ ತಲೆಯನ್ನು ಹೆಗಲ ಮೇಲಿಟ್ಟುಕೊಂಡು ಬೆನ್ನು ತಟ್ಟಿದೆ.
 “ ಏನೋ ನೀನು? ನಾನೇನೋ ವಿದೇಶ ಹೇಗಿದೆ? ಏನು ತೆಗೆದುಕೊಂಡು ಹೋಗ್ಬೇಕು? ಏನು ಮಾಡಬೇಕು ಅಂತ ಕೆಳುತಿಯಾ ಅಂದು ಕೊಂಡ್ರೆ, ನೀನೊಳ್ಳೆ ವೇದ ಪಾಠ ಮಾಡಿಸಿಕೊಂಡಿಯಲ್ಲೋ.” ಎಂದು ನಗುತ್ತ ಹೆಗಲಿನ ಮೇಲೆ ಕೈ ಹಾಕಿದ.
“ ಬಾ, ಪಾರ್ಟಿ ಕೊಡ್ಸೋ ಮಗನೇ. ಎಣ್ಣೆ ಹಾಕಿಸ್ತಿಯೆನೋ? ಗೊತ್ತಪ್ಪ ನೀನು ಕುಡಿಯಲ್ಲ ಅಂತ. ಅದಕೆ ಉಳಿದವರೂ ಎಂಜಾಯ್ ಮಾಡಬಾರದ? ಇದು ಒಳ್ಳೆ ಕಥೆ ಆಯಿತಲ್ಲ..” ಎಂದಾಗ ನಗು ಕೇಕೆಯಾಗಿ ಬದಲಾಗಿತ್ತು. ತಂಗಾಳಿಯು  ಜೋರಾಗಿ ಬೀಸಲು ಪ್ರಾರಂಭಿಸಿತ್ತು. ಸೂರ್ಯನ ಧಗೆಯು ಕಮ್ಮಿಯಾಗಿತ್ತು. ಮನಸ್ಸು ತಿಳಿಯಾಗಿತ್ತು. ” ಅಯ್ಯೋ ಗುರುಗಳೇ, ನೀವು ನನ್ನನ್ನ ಇನ್ನೂ ಜಾಸ್ತಿ ಕನ್ಫ್ಯೂಸ್ ಮಾಡಿದ್ರಲ್ಲ.” ಎಂದು ಮಂದಹಾಸ ಬೀರಿದೆ. “ ಏನೋ ಸುಡುಗಾಡು ಮಾಡಿ,ನಿನ್ನ ಬಿರಿದ ಮೊಗದಲ್ಲಿ ಸ್ಮೈಲ್ ಬರುವಂತೆ ಮಾಡಿದ್ನಲ್ಲ ಅಷ್ಟು ಸಾಕು ನನಗೆ.” ಎಂದ. ಇದಕ್ಕೆ ಹೇಳೋದು ಗೆಳೆಯರಿರಬೇಕು. ಆದ್ರೆ ಅವನು ಹೇಳಿದ್ದ ಮಾತಿನ ಮರ್ಮ ಪೂರ್ತಿಯಾಗಿ ಅರ್ಥವಾಗಿಲ್ಲ. ನಿಮಗೇನಾದ್ರೂ ಅರ್ಥ ಆಯ್ತಾ........


Comments

Popular posts from this blog

ಸಾವಿನರಮನೆಯಲ್ಲಿ

ಕೆಲಸದ ಸ್ಥಳದಲ್ಲಿನ ರಾಜಕೀಯ- Office politics