ಯಾವುದಕ್ಕೂ ಸಲ್ಲದವನು

ಈ ಶೀರ್ಷಿಕೆ ನಾನು ಯಾಕೆ ಆಯ್ಕೆ ಮಾಡಿದೆನೆಂದು ಕುತೂಹಲ ನಿಮ್ಮಲಿದೆಯೇ? ಹಾಗಾದರೆ ನನ್ನ ಕಥೆ ಓದಿ.
ಹಣ ನಮ್ಮ ಜೀವನದ ಅವಿಭಾಜ್ಯ ಅಂಗ. ಹಣದ ಉಪಯುಕ್ತತೆ ನಮ್ಮೆಲ್ಲರಿಗೆ ಗೊತ್ತಿರುವಂಥ ವಿಷಯವೇ. ನಾನು ಬಾಲಕನಗಿದ್ದಾಗ ಹಣ ನನ್ನ ತಂದೆಯವರ ಹತ್ತಿರ ಇದೆ. ಅವರು ನಾನು ಚೆನ್ನಾಗಿ ಓದಿದರೆ ನನಗಿಷ್ಟವಾದ ಬಟ್ಟೆ, ಚಾಕಲೇಟ್, ಶಾಲೆಯ ಫೀ, ಹೀಗೆ ನೂರಾರು ವಸ್ತುಗಳು ಕೊಡಿಸುತ್ತಾರೆ ಎಂದು ಅಮ್ಮ ಪದೇ ಪದೇ ಹೇಳುತ್ತಿದ್ದ ಅರ್ಧ ಸತ್ಯವನ್ನು ನಂಬಿ, ಓದುವುದು ನನ್ನ ಧರ್ಮ, ಓದಿದರೆ ಎಲ್ಲವೂ ಸಿಗುವುದೆಂಬ ಭಾವನೆಯಿಂದ ಕಲಿತದ್ದೇ ಬಂತು. ನಮ್ಮದು ಹೇಳಿ ಕೇಳಿ ಮಧ್ಯಮ ವರ್ಗದ ಕುಟುಂಬ. ನಮಗೆ ಓದದೇ ಬೇರೆ ವಿಕಲ್ಪವೇ ಇರಲಿಲ್ಲ . ನಮ್ಮ ಕುಂದು ಕೊರತೆಗಳನ್ನು, ಹೆತ್ತವರು ಅದು ಹೇಗೋ ಹೊಟ್ಟೆ ಬಟ್ಟೆ ಕಟ್ಟಿ ತೀರಿಸಿದರು. ಇಬ್ಬರು ಮಕ್ಕಳ ಶಾಲೆ, ಬಟ್ಟೆ ಹಾಗು ಹಸಿವಿನ ಕೊರತೆಯನ್ನು ತಪಸ್ಸಿನಂತೆ ನಿಭಾಯಿಸುತಿದ್ದರು.
ನನಗೆ ಕಾಲೇಜು ಮೆಟ್ಟಿಲು ಏರಿದಾಗಲೇ ದುಡ್ಡಿನ ಮಹಿಮೆಯ ಕೊಂಚ ಅರಿವಾದದ್ದು ಕಣ್ರೀ. ಸಂಗಡಿಗರೆಲ್ಲ ಸ್ಪೆಷಲ್ ತರಬೇತಿ, ಅದು ಇದು ಅಂತ ಓಡಾಡ ತೊಡಗಿದಾಗ, ನನಗು ಅದು ಬೇಕೆಂದು ಅಮ್ಮನಲ್ಲಿ ಹಠ ಮಾಡಿದಾಗ, ಮಗುವಿನ ಅಸೆ ಪೂರಿಸಲಾಗದ ಅಸಹಾಯಕತೆ ಕೋಪದ ರೂಪ ತಾಳಿ ಚೆನ್ನಾಗಿ ತದುಕಿದ್ದಳು. ಆಗ ಅಪ್ಪ ಬಂದು ಕಣ್ಣಿರು ಒರಸಿ, ಅಪ್ಪಿಕೊಂಡು, ಸಾಂತ್ವನ ಗೈದಿದ್ದರು. ಸಹಪಾಠಿಗಳು ನಾವು ಆ ಇಂಜಿನಿಯರಿಂಗ್ ಕಾಲೇಜು, ಈ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಗಿಟ್ಟಿಸ ಬೇಕೆಂಬ ಹಠ ದೊಂದಿಗೆ ಓದುತಿದ್ದಾಗ, ಗುರಿ ಮರೆತ ಕೆಲವು ಸಂಗಡಿಗರೊಂದಿಗೆ, ಕ್ರಿಕೆಟ್, ನಾಟಕ, ಯಕ್ಷಗಾನ ಎಂದು ತಿರುಗಾಡಲು ಶುರು ಹಚ್ಚಿ ಕೊಂಡಿದ್ದೆ. ಅದು ಜೀವನದ ಪರ್ವ ಕಾಲ. ಕ್ವಾಲಿಟಿ ಆಫ್ ಲೈಫ್ ತುಂಬಾನೆ ಚೆನ್ನಾಗಿತ್ತು. ಹ್ಯಾಪಿನೆಸ್ ಇಂಡೆಕ್ಸ್ ಉನ್ನತ ಮಟ್ಟದಲ್ಲಿತ್ತು. ಹಾಗಂತ ಯಾವುದರಲ್ಲೂ ಅಂಕಗಳು ಕಮ್ಮಿ ಆಗಲಿಲ್ಲ. ಆದರೆ ಜೀವನದಲ್ಲಿ ಫೋಕಸ್ ಇಲ್ಲ ಅಂತ ಅನೇಕ ಅಧ್ಯಾಪಕರು ತೆಗಳುತಿದ್ದರು. ಹೆತ್ತವರು ತುಂಬಾ ಕಲಿತವರೇನಲ್ಲ, ಹಾಗಾಗಿ ಅವರಿಗೆ ಇದರ ಮರ್ಮ ಅರಿವಾಗಲಿಲ್ಲ. ನನಗೂ ಅರಿವಾಗಲಿಲ್ಲ. CET ಪರೀಕ್ಷೆ ಫಲಿತಾಂಶ ಕೂಡ ಹಾಗೇ ಬಂತು .
ಮೆಡಿಕಲ್ಗೆ ಒಂದು ಚೂರು ರಾಂಕ್ ಕಮ್ಮಿ, ಇಂಜಿನಿಯರಿಂಗ್ಗೆ ಒಳ್ಳೆ ಕಾಲೇಜು ದೊರಕಲಿಲ್ಲ ಕಣ್ರೀ. ಕೊನೆಗೆ ಮನೆಯವರ ಆಸೆಯಂತೆ ವೈದ್ಯಕೀಯ ಕಾಲ್ಲೆಗಿನಲ್ಲಿ ಅಡ್ಮಿಶನ್ ಸಿಕ್ತು ಕಣ್ರೀ. ಅದು ಸರಕಾರೀ ದಂತ ವೈದ್ಯಕೀಯ ಕಾಲೇಜು. ಫೀಸ್ ಕಮ್ಮಿ, ಕೊನೆಯ ವರ್ಷ stipend ಬೇರೆ ಕೊಡುತ್ತಾರೆ, ತಂದೆ ತಾಯಿಗೆ ಹೊರೆಯಾಗುವುದಿಲ್ಲ ಎಂಬ ಗುರಿ ಇಟ್ಟುಕೊಂಡು BDS ಮುಗಿಸಿದ್ದಾಯಿತು. ಆದ್ರೆ ಇಲ್ಲಿ ಅನೇಕ ವಿಧದ ಸಹಪಾಟಿಗಳಿದ್ದರು. ಒಂದು ಪಂಗಡದವರು, ನಾವು ಓದಿ ಅಮೆರಿಕಾಕ್ಕೆ ಹೋಗಬೇಕೆಂಬ ಗುರಿ ಇಟ್ಟುಕೊಂಡವರು, ಹೋದರು ಕೂಡ. ಇನ್ನೊಂದು, ಓದಿ ಮಾಸ್ಟರ್ಸ್ ಮುಗಿಸಬೇಕು ಎಂದಿದ್ದವರು. ಉಳಿದವರು, ಬಡ ಕುಟುಂಬದಿಂದ ಬಂದವರು, ಸರಕಾರೀ ನೌಕರಿಗಾಗಿ ಕಾಯುತಿದ್ದವರು. ಇವೆಲ್ಲದರ ಮಧ್ಯದಲ್ಲಿ ನನ್ನಂಥ  ಮಧ್ಯಮ ವರ್ಗದವರು ಇದ್ದರು ಕಣ್ರೀ. ಒಂದೋ ಮಾಸ್ಟರ್ಸ್, ಇಲ್ಲ ಸರಕಾರೀ ನೌಕರಿಗೆ ಕಾಯುತಿದ್ದವರು. ಬೇರೆ ದೇಶಕ್ಕೆ ಹೋಗಿ ಕಲಿಯುವಸ್ಟು ದುಡ್ಡಿರಲಿಲ್ಲ ನೋಡಿ. ಹಾಗಾಗಿ ಚಾತಕ ಪಕ್ಷಿಯಂತೆ ಇವೆರಡಕ್ಕೆ ಕಾದಿದ್ದೆ ಬಂತು. ಒಂದು ದಿನ ಎರಡು ಕೂಡ ಜೊತೆ ಜೊತೆಯಾಗಿ ಬಂದು ಬಿಟ್ಟಿತು. ಯಾವುದಕ್ಕೆ ಸೇರುವುದು, ಏನು ಮಾಡುವುದು ತಿಳಿಯದಾಯಿತು.
ತಂದೆ ಯವರು ಜೇವನ ಪೂರ್ತಿ ಸರಕಾರಿ ನೌಕರಿಯಲ್ಲಿ ಜೀವನ ಕಳೆದವರು. ನೀನು ಸರಕಾರಿ ನೌಕರಿಗೆ ಸೇರಿಕೋ ಎಂದು ಅದೀಶವಿತ್ತರು. ಆದ್ರೆ ಅವಾಗ ಕಾಂಟ್ರಾಕ್ಟ್ ನೌಕರಿಯಲ್ಲಿ ಕೇವಲ ೪೦೦೦ ರೂ. ಸಂಬಳ ದೊರಕುತ್ತಿತ್ತು. ಆಗ ಹಿರಿಯ ಗೆಳೆಯರೊಬ್ಬರು ಮಾಸ್ಟರ್ಸ್ ಮಾಡು ಜಾಸ್ತಿ ಸಂಬಳ ಸಿಗುತ್ತೆ ಎಂದು ಸಲಹೆ ನೀಡಿದರು. ಸರಿ ಎಂದು ಮಾಸ್ಟರ್ಸ್ ಮಾಡಿದ್ದಾಯ್ತು . ಕೆಲಸ ಹುಡುಕುವಾಗ ಅರಿವಾಯ್ತು, ಇನ್ಫ್ಲುಯೆನ್ಸ್ ಇದ್ದರೆ ಮಾತ್ರ ನೌಕರಿ ಸಿಗುವುದೆಂದು ಎಲ್ಲರೂ ಸಲಹೆಯನ್ನಿತ್ತರು. ಕೊನೆಗೆ ಹೇಗೋ ಕೆಲಸ ದೊರಕಿತು. ಸಂಬಳ ಮಾತ್ರ ೧೦೦೦೦ರೂ. ದೊರಕಿತು. ಅದ್ರಲ್ಲಿ ಟ್ಯಾಕ್ಸ್ ಬೇರೆ ಕಟ್ಟಬೇಕಿತ್ತು. ಆಗ ಅರಿವಾಯ್ತು  ಮಧ್ಯಮ ವರ್ಗದವರು ಯಾವಾಗಲೂ ಮಧ್ಯಮ ವರ್ಗದವರಾಗಿಯೇ ಇರುವರೆಂದು. ನಿಮಗೆ ಸಂಬಳ ಕೇಳಲು ಬರದಿದ್ದರೆ ನೀವು ಸರಕಾರಿ ನೌಕರಿಗೆ ಮಾತ್ರ ಫಿಟ್ ಎಂದು. ಆಗ ಟಿವಿಯಲ್ಲಿ ಫಣಿ ರಾಮಚಂದ್ರರವರ ಧಾರಾವಾಹಿಯ ಹಾಡೊಂದು ನೆನಪಾಯಿತು..”ವೇಸ್ಟ್ ಬಾಡಿಗಳು .....”
 ತಂದೆಯವರು ರಿಟೈರ್ಡ್ ಆದರು, ಆಗ ಮನೆಯ ಜವಾಬ್ದಾರಿ ತಲೆಯ ಮೇಲೆ ಬಿದ್ದಿತು. ಸಾಲ ಸೋಲ ಮಾಡಿ ತಂಗಿಯ ಮದುವೆ ಮಾಡಿದ್ದಾಯ್ತು. ವೈದ್ಯ ವೃತ್ತಿ ಎಂದರೆ ಕಾರ್ ಬೇಡವೇ? ಬ್ಯಾಂಕ್ ನಿಂದ ಸಾಲ ಪಡೆದು ಕಾರ್ ಕೊಂಡಿದ್ದಾಯಿತು. ಇನ್ನು ನೀನು ಮಾಡುವೆ ಅಗುವುವಿಲ್ಲವೇ ಎಂಬ ಪ್ರಶ್ನೆ ಎಲ್ಲ ಕಡೆಯಿಂದ ಹರಿದು ಬರ ತೊಡಗಿತು. ಆಗಲೇ ೩೫ ವರುಷ ದಾಟಿತ್ತು. ಸೆಟ್ಲ್ ಆದ ಮೇಲೆ ಮದುವೆ ಆಗ್ತೀನಿ ಅಂತ ಕುಳಿತಿದ್ದವನಿಗೆ ಶಾಕ್ ಹೊಡೆದ ಹಾಗಾಯ್ತು. ಮದುವೆ ಹೇಗೋ ಮುಗಿಯಿತು.ಮಡದಿ ಬಂದಳು, ಮಕ್ಕಳಾಯಿತು. ಒಂದು ದಿನ ಮಡದಿ ಬೇಡಿಕೆ ಇಟ್ಟಳು. ನಾವು ಬೇರೆ ಮನೆ ಮಾಡಬೇಕೆಂದು. ಆದ್ರೆ ಅಸ್ಟೊಂದು ಹಣವಿಲ್ಲ, ಹಾಗೇ ಅಡ್ಜಸ್ಟ್ ಮಾಡಿಕೋ ಎಂದಾಗ ಕೆಂಡಾಮಂದಳವದಳು. ಆಗ ಜ್ಞಾನೋದಯವಾಯಿತು. ಜೀವನದ ೩೫ ವರುಷ ವೇಸ್ಟ್ ಬಾಡಿಯಂತೆ ಕಳೆದದ್ದು ಆಯಿತು ಎಂದು. ಇನ್ನಾದರೂ ಏನಾದರೂ ಸಾಧನೆ ಮಾಡುವ ಅಂದುಕೊಂಡು ಮತ್ತೆ ವಿಧ್ಯಾಭ್ಯಾಸದೆ ಕಡೆಗೆ ತಿರುಗಿ ಡಾಕ್ಟರೇಟ್ ಮಾಡಿ ಉದ್ಧಾರ ಅಗುವೆನೆಂದು, ಅದೂ ಮಾಡಿದ್ದಾಯಿತು. ಆಮೇಲೆ ಹೆಚ್ಚಿನ ಬದಲಾವಣೆಗಳೇನು ಆಗಲೇ ಇಲ್ಲ. ಕೆಲಸ ಮಾಡುವ ಜಗದಲ್ಲಿ ಇವನು ಅಧಿಕ ಕಲಿತು ಬಿಟ್ಟಿದ್ಧಾನೆ, ಇವನಿಲ್ಲಿದ್ದರೆ ನಮಗೆಲ್ಲಾ ಕಂಟಕ ವೆಂದು ಓಡಿಸಿ ಬಿಟ್ಟರು.
 ಕೊನೆಗೆ ಹಾಗೋ ಹೀಗೋ ಒಂದು ಮಲೇಷ್ಯಾದಲ್ಲಿ ನೌಕರಿ ದೊರಕಿತು. ಇಲ್ಲಿ ಬರುತ್ತಲೇ ತಂದೆಯವರ ಅರೋಗ್ಯ ಕೆಟ್ಟು ಹೋಗಲು ಶುರುವಾಯಿತು. ಅದರೂ ಹೆತ್ತವರು ನನ್ನೊಂದಿಗೆ ವಿದೇಶಕ್ಕೆ ಬರಲು ಸುತರಾಂ ಒಪ್ಪಲಿಲ್ಲ. ಯಾಕೆ ಎಂದು ನನಗೆ ಅರ್ಥ ಆಗಲೇ ಇಲ್ಲ. ದಿನ ಕಳೆದಂತೆ ಅರಿವು ಮೂಡ ತೊಡಗಿತು. ಹೊರಗಿನ ಆಹಾರ ತಿಂದು ಸಾಕಾಯಿತು. ಒಂದು ಹೊತ್ತಿಗಾದರೂ ನಮ್ಮ ನಾಡಿನ ಊಟ ದೊರಕಿದರೆ ಸಾಕೆಂಬ ಹಂಬಲ ಮೂಡಲು ಆರಂಭಿಸಿತು. ಹಾಗೆ ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ನೆಲ ಒರೆಸುವುದು, ಗಾಡಿಗೆ ಪೆಟ್ರೋಲ್ ತುಂಬುವುದು, ಗಾಳಿ ಹಾಕುವುದು ಮೊದಲಾಗಿ ಪ್ರತಿಯೊಂದು ಕೆಲಸ ನಾವೇಮಾಡಬೇಕಾಗಿ ಬಂದಿತು. ಇಲ್ಲಿ ಉತ್ತಮ ಜೀವನ ಶೈಲಿಯೇನೋ ದೊರಕಿತು ಆದರೆ ಹೊಂದಾಣಿಕೆ ಕಷ್ಟವಾಗ ತೊಡಗಿತು. ಮನೆಯವರ ನೆನಪು ಕಾಡಲು ತೊಡಗಿತು. ಅಮ್ಮನಲ್ಲಿ ಅಧಿಕಾರದಿಂದ ಅನ್ನಿ ಅಥವಾ ಸಲುಗೆಯಿಂದ ಅನ್ನಿ ಬೇಕಾದ ಕೆಲಸ ಮಾಡಿಸುತ್ತಿದ್ದ ದಿನಗಳು ನೆನಪಾಗ ತೊಡಗಿದವು. ಆಗ ಕಣ್ಣ ಅಂಚಿನಲ್ಲಿ ಕಂಬನಿಯೊಂದು ಜಾರಿ ಬಿದ್ದದ್ದು ಅರಿವಾಗಲೇ ಇಲ್ಲ.
ನನಗಾಗಿ ಇಷ್ಟು ವರುಷ ಕಷ್ಟ ಪಟ್ಟ ಹೆತ್ತವರ ಪಾಲಿನ ಕಷ್ಟ ಸುಖಗಳಿಗೆ ನಾನಿಲ್ಲವಲ್ಲ ಎಂಬ ನೋವು ಹೃದಯವನ್ನು ಚುಚ್ಚ ತೊಡಗಿತು. ನಮ್ಮ ದೇಶ, ನಮ್ಮ ಜನರು, ನಮ್ಮ ಸಂಸ್ಕೃತಿ, ನಮ್ಮ ಸಂಬಂಧಗಳ ನೆನಪು ಕಾಡ ತೊಡಗಿತು. ಆದರೆ ಈಗ ಹಿಂತುರುಗಿ ನೋಡುವ ಹಾಗಿಲ್ಲ. ಬಂದ ದಾರಿ ಮುಚ್ಚಿ ಹೋಗಿದೆ. ಇಲ್ಲಿ ಹೇಗೂ ಪರಕೀಯ, ನಾನು ಬಿಟ್ಟು ಬಂದ ಹಾದಿಯೂ ನನ್ನನ್ನು ಪರಕೀಯನ್ನಾಗಿಸಿತು. ಹಾಗಾಗಿ ಇಲ್ಲಿಯೂ ಸಲ್ಲ, ಅಲ್ಲಿಯೂ ಸಲ್ಲದವನೆಂಬ ಹಣೆ ಪಟ್ಟಿ ದೊರೆಯಿತು. ಇದು ನನ್ನ ಒಬ್ಬನ ಕಥೆಯಲ್ಲ. ವಿದೇಶಕ್ಕೆ ಸಂಪಾದನೆಗೆಂದು ಹೊರಡುವ ಸಾವಿರಾರು ಜನರ ಕಥೆ. ಸಂದರ್ಭಗಳು ಬೇರೆ ಇರಬಹುದು. ಆದರೆ ಭಾವನೆ ನೋವುಗಳು ಮಾತ್ರ ಒಂದೇ.

Comments

Unknown said…
True. But we need to experiment in our life. Life doesn’t come with a guide. Good or bad, we have to try our best. Rest is God’s will.

Your writing skills are excellent. Keep writing more.
yogesa said…
Life is like a Stream fed with rainwater from a Cloudburst sometimes... yellige hoggtivo gottaguvudilla.... hodamele maralli barohagilla...

Keep writing.
Unknown said…
Nice article.. circumstances keep changing Rajesh.. you have to take things in perspective n move on...

Popular posts from this blog

ಮದುವೆಯಾಗಲಿ ಸರಿ ಹೋಗ್ತಾನೆ ಅಂತಾರಲ್ಲ ಯಾಕೆ?

ನಿಮಗೇನಾದರೂ ಅರ್ಥವಾಯಿತೇ???

ಸಾವಿನರಮನೆಯಲ್ಲಿ